Advertisement

ಕಲಘಟಗಿಯಲ್ಲಿ ಕಬ್ಬು ಕಾರ್ಖಾನೆಗೆ ಸಿದ್ಧ

04:29 PM Jun 14, 2021 | Team Udayavani |

ಕಲಘಟಗಿ: ಈ ಭಾಗದ ರೈತರೆಲ್ಲರೂ ಇಚ್ಛಿಸಿ ಸಂಪೂರ್ಣವಾಗಿ ಸಹಕರಿಸಲು ಒಪ್ಪುವುದಾದರೆ ಭೂಮಿಪೂಜೆ ನಿರ್ವಹಿಸಿದ ಒಂದುವರೆ ವರ್ಷದಲ್ಲಿ ತಾಲೂಕಿನಲ್ಲಿ ಕಬ್ಬಿನ ಕಾರ್ಖಾನೆ ಜೊತೆಯಲ್ಲಿ ಇಥೆನಾಲ್‌ ಘಟಕ ಆರಂಭಿಸಲು ತಾವು ಸಿದ್ಧ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಕಬ್ಬು ಕಾರ್ಖಾನೆ ನಿರ್ಮಿಸುವ ನಿಮಿತ್ತ ಹನ್ನೆರಡುಮಠದ ಆವರಣದಲ್ಲಿ ರವಿವಾರ ಆಯೋಜಿ ಸಿದ್ದ ತಾಲೂಕಿನ ರೈತ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈ ಭಾಗದ ರೈತರೆಲ್ಲರೂ ಜಾತಿ, ಮತ ಬೇಧವೆಣಿಸದೇ ರಾಜಕೀಯೇತರವಾಗಿ ಇಚ್ಛಿಸಿ ಒಮ್ಮತಕ್ಕೆ ಬಂದಲ್ಲಿ ರೈತರ ಸೇವೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮೊದಲು ನಿಮ್ಮ ನಿಮ್ಮಲ್ಲಿಯೇ ಸಭೆಗಳನ್ನು ನಡೆಸಿ. ಕಾರ್ಖಾನೆ ನಿರ್ಮಾಣಕ್ಕೆ ಅವಶ್ಯಕ ಮೂಲಸೌಕರ್ಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡು ಒಂದು ಇತ್ಯರ್ಥಕ್ಕೆ ಬನ್ನಿ. ಕಾರ್ಖಾನೆ ಆರಂಭಿಸಲು ಅವಶ್ಯಕ ಷೇರುಗಳನ್ನು ಖರೀದಿಸಿ ಹಣ ಸಂಗ್ರಹಕ್ಕೆ ಮುಂದಾಗಿ. ಕಡಿಮೆ ಬಿದ್ದ ಹಣವನ್ನು ತಾವು ಸಾಲದ ರೂಪದಲ್ಲಿ ನೀಡಲಿದ್ದು, ಲಾಭಾಂಶ ಬರುತ್ತಿದ್ದಂತೆಯೇ ಬಡ್ಡಿ ರಹಿತವಾಗಿ ಹಿಂದಿರುಗಿಸಿ. ಇದು ರೈತರಿಂದ ರೈತರಿಗಾಗಿಯೇ ನಿರ್ಮಿಸುವ ಕಬ್ಬಿನ ಕಾರ್ಖಾನೆಯಾಗಲಿ ಎಂದು ಶುಭ ಕೋರಿದರು.

ಮಾಜಿ ಸಚಿವ ಪಿ.ಸಿ. ಸಿದ್ದನಗೌಡರನ್ನು ನೆನೆಯಲೇ ಬೇಕು. ಕಲಘಟಗಿಯಲ್ಲಿ ಕಬ್ಬಿನ ಕಾರ್ಖಾನೆ ಮಾಡಬೇಕೆಂದು ಅವರು ಹಿಂದೆಯೇ ಶ್ರಮಿಸಿದ್ದರು. ಸಾಮಾನ್ಯ ರೈತನ ಮಗನಾಗಿ 1997ರಲ್ಲಿ ಕೇವಲ 500 ಟಿಸಿಡಿ ಸಾಮರ್ಥ್ಯದ ಕಾರ್ಖಾನೆ ಆರಂಭಿಸಿದ್ದೆ. ಇಂದು ಎಂಆರ್‌ಎನ್‌ ಗ್ರುಪ್ಸ್‌ ಅಡಿಯಲ್ಲಿ ಬಾಗಲಕೋಟೆ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ 9 ಕಾರ್ಖಾನೆಗಳಿಂದ ಪ್ರತಿನಿತ್ಯ 75 ಸಾವಿರ ಟನ್‌ ಕಬ್ಬು ಕ್ರಷರ್‌ ಮಾಡುವ ಸಾಮರ್ಥ್ಯ ಹೊಂದಿದ್ದು ಸುಮಾರು 72 ಸಾವಿರ ಜನ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಕಬ್ಬು ಕಾರ್ಖಾನೆ ಎಂದರೆ ಕೇವಲ ಕಬ್ಬು ಅರೆದು ಸಕ್ಕರೆ ಉತ್ಪಾದಿಸುವುದಲ್ಲ. ವಿದ್ಯುತ್‌ ಉತ್ಪಾದನೆ, ಗ್ಯಾಸ್‌ ಉತ್ಪಾದನೆ, ಇಥೆನಾಲ್‌ ಘಟಕ ಮಾಡುವುದರ ಜತೆಯಲ್ಲಿ ರೈತರ ಹಿತ ಕಾಪಾಡುವುದು ಮುಖ್ಯವಾಗಿದೆ ಎಂದರು. ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಿಜೆಪಿಯ ಪ್ರಮುಖರಾದ ನಿಂಗಪ್ಪ ಸುತಗಟ್ಟಿ, ಶಶಿಧರ ಹುಲಿಕಟ್ಟಿ, ಗೀತಾ ಮರಲಿಂಗಣ್ಣವರ, ಬಸವರಾಜ ಶೆರೇವಾಡ, ನರೇಶ ಮಲನಾಡು, ಸೋಮು ಕೊಪ್ಪದ, ಎಸ್‌.ಎಂ. ಚಿಕ್ಕಣ್ಣವರ, ಐ.ಸಿ. ಗೋಕುಲ್‌, ಚಂದ್ರಗೌಡ ಪಾಟೀಲ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ರೈತ ಪ್ರಮುಖರಾದ ಯಲ್ಲಾರಿ ಶಿಂಧೆ, ಸಿ.ಬಿ. ಹೊನ್ನಳ್ಳಿ, ಎನ್‌.ಕೆ. ಕುಬ್ಯಾಳ, ಗಂಗಾಧರ ಧೂಳಿಕೊಪ್ಪ, ಶೇಕಣ್ಣ ಅಂಗಡಿ, ಶೇಕಯ್ಯ ನಡುವಿನಮನಿ, ಟೋಪಯ್ಯ ಮಳಲಿ, ಬಸವಣ್ಣೆಪ್ಪ ಕಂಪ್ಲಿ, ಮಹೇಶ ಬೆಳಗಾಂವಕರ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next