Advertisement
2013ರ ಮಡಿಕೇರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗಮನ ಸೆಳೆದಿದ್ದ ಡಾ| ನಾ.ಡಿ’ಸೋಜಾ ಅಂತಹ ಹೆಮ್ಮೆಗೆ ಪಾತ್ರರು. ಅವರನ್ನು ಅವರ ಪೂರ್ಣ ನಾಮಧೇಯವಾದ ನಾಬರ್ಟ್ ಡಿ’ಸೋಜಾ ಎಂದರೆ ಬಹುಜನರಿಗೆ ಪರಿಚಯವೇ ಆಗುವುದಿಲ್ಲ. ಟೈಪಿಸ್ಟ್ ಆಗಿ ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರದ ಭಾಗದಲ್ಲಿ ಕೆಲಸ ಮಾಡಿದ ಅವರು ಬಹುಕಾಲ ಮುಳುಗಡೆಯ ಸಂತ್ರಸ್ತರ ಸಮೀಪದಲ್ಲಿಯೇ ಕಾರ್ಯ ನಿರ್ವಹಿಸಿದ್ದು ಅವರ ಬದುಕನ್ನು ಪ್ರಭಾವಿಸಿತು. ಅವರ ಬರೆವಣಿಗೆಯ ಬದುಕಿಗೆ ಮೂಲಧಾತುವೂ ಆಗಿ ನಾ.ಡಿ’ಸೋಜಾ ಅವರನ್ನು ಮುಳುಗಡೆ ಸಾಹಿತಿ ಎಂದು ಕರೆಯುವಂತಾಯಿತು.
Related Articles
Advertisement
ಚಿನ್ನದ ಗಣಿ ವಿರೋಧಿಸಿದ್ದರು:ಸಾಗರದ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ನಾಡಿ, ನಾಡಿನ ಗಮನ ಸೆಳೆದಿದ್ದರು. ಸಾಗರ ತಾಲೂಕಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುತ್ತದೆ ಎಂದಾಗ ಅವರು ಗಣಿ ವಿರೋಧಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಾಹಿತಿಯಾದವರು ಕೇವಲ ಬರೆಹಗಳ ಮೂಲಕ ಜಾಗೃತಿ ಮಾಡಿದರೆ ಸಾಲದು. ಅವರು ಕ್ರಿಯಾಶೀಲವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಮಾತನ್ನು ಪ್ರತಿಪಾದಿಸಿದ್ದರು. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು, ಸಾಗರದಾದ್ಯಂತ ಸಂಚರಿಸಿ ಜನಜಾಗೃತಿ ಮಾಡಿದ್ದರು. ಆ ವೇಳೆ ಸಾಗರ ಬಂದ್ ವೇಳೆ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಹೆಗ್ಗೊàಡಿನ ನೀನಾಸಂನ ಕೆ.ವಿ.ಸುಬ್ಬಣ್ಣ “ಪ್ರತ್ಯೇಕ ಮಲೆನಾಡು ರಾಜ್ಯ’ದ ಆ ಕಾಲಕ್ಕೆ ಅಪರೂಪವಾಗಿದ್ದ ಘೋಷಣೆ ಮಾಡಿದಾಗ ಪಕ್ಕದಲ್ಲಿದ್ದ ನಾ.ಡಿ’ಸೋಜಾ ಮಲೆನಾಡಿನ ಹಿತಕ್ಕೆ ಧಕ್ಕೆ ಎಂತಾದಾಗಲೆಲ್ಲ ಹೋರಾಟಕ್ಕಿಳಿದ್ದಿದ್ದರು. ಇತ್ತೀಚೆಗೆ ಶರಾವತಿಯ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ರಾಜಧಾನಿ ಬೆಂಗಳೂರಿಗೆ ಒಯ್ಯುವ ಪ್ರಸ್ತಾವ ಬಂದಾಗ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧಿಸಿ ನಡೆದ ಹೋರಾಟದಲ್ಲೂ ವಯೋಸಹಜ ಹಿಂಜರಿಕೆಯ ಹೊರತಾಗಿಯೂ ಮುಂಚೂಣಿಯಲ್ಲಿ ನಿಂತಿದ್ದರು. ನಾಡಿ ಮಲೆನಾಡಿಗರ ಕೂಗನ್ನು ಕೇಂದ್ರ ಸರಕಾರಕ್ಕೆ ಗಾಂಧಿ ಮಾರ್ಗದಲ್ಲಿ ಮುಟ್ಟಿಸಿದ್ದು ಇನ್ನೊಂದು ಪ್ರಮುಖ ಅಂಶ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ರೈಲಿನ ಸೌಲಭ್ಯ ಸಾಗರ ತಾಲೂಕಿನ ತಾಳಗುಪ್ಪದವರೆಗೆ ಇತ್ತಾದರೂ ರೈಲ್ವೇ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿನ ನ್ಯಾರೋಗೇಜ್ ರೈಲನ್ನು ನಿಲ್ಲಿಸಿ, ಹಳಿಗಳನ್ನೇ ಕಿತ್ತೂಯ್ಯುವ ಸನ್ನಾಹದಲ್ಲಿದ್ದಾಗ ಬ್ರಾಡ್ ಗೇಜ್ ರೈಲು ಹೋರಾಟ ಸಮಿತಿಯನ್ನು ರೂಪಿಸಿ, ಅದರ ನೇತೃತ್ವ ವಹಿಸಿ, ಪತ್ರ ಚಳವಳಿ, ಜನಪ್ರತಿನಿಧಿಗಳು ಹಾಗೂ ರೈಲ್ವೇ ಅಧಿಕಾರಿಗಳ ಭೇಟಿ, ಧರಣಿ, ಪ್ರತಿಭಟನೆ ಮೊದಲಾದ ಜನತಾಂತ್ರಿಕ ವಿಧಾನಗಳ ಮೂಲಕವೇ ಸಾಗರ, ತಾಳಗುಪ್ಪಕ್ಕೆ ರೈಲು ಉಳಿಸಿಕೊಟ್ಟಿದ್ದು ಚರಿತ್ರಾರ್ಹ. ಇವತ್ತು ತಾಳಗುಪ್ಪದಿಂದ ಬೆಂಗಳೂರಿಗೆ ಇಂಟರ್‌ಸಿಟಿ ರೈಲು ಸೇರಿದಂತೆ ಹತ್ತಾರು ಟ್ರೈನ್‌ಗಳು ಜನದಟ್ಟಣೆಯಿಂದ ಸಂಚರಿಸುತ್ತಿದ್ದರೆ ನಾಡಿಯವರ ಆತ್ಮ ಸಮಾಧಾನದ ನಿಟ್ಟುಸಿರು ಬಿಡುತ್ತದೆನ್ನಬಹುದು. ನಾಡಿ ಸಾಗರದ ಸಹಜ ಉಸಿರಾಟವಾಗಿದ್ದರು. ಸಣ್ಣಪುಟ್ಟ ಕಾರ್ಯಕ್ರಮ ಗಳಿಂದ ಹಿಡಿದು ಸಾಗರದ ಎಲ್ಲ ಸಾಹಿತ್ಯಿಕ, ಕಲಾ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತಿತ್ತು. ಅವರು ಯಾವುದೇ ಅಹಂ ಇಲ್ಲದೆ ಭಾಗವಾಗುತ್ತಿದ್ದರು. ಅವರಲ್ಲಿ ವಿಚಾರ ಶ್ರೀಮಂತಿಕೆ ಇತ್ತೇ ವಿನಾ ಈಗಲೂ ಸಾಗರದ ನೆಹರೂ ನಗರದ ಪುಟ್ಟ ಮನೆಯಲ್ಲಿಯೇ ವಾಸವಾಗಿದ್ದರು. ಕೆಲವು ತಿಂಗಳ ಹಿಂದೆ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಮಗಳ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅವರ ನಿರ್ಗಮನದಿಂದ ಕನ್ನಡದ ಸಾಹಿತ್ಯ ಕ್ಷೇತ್ರ ಅನಾಥವಾದರೆ ಸಾಗರದ ಜನತೆ ಒಬ್ಬ ನಿಜ ಅರ್ಥದ ಜನನಾಯಕನನ್ನು ಕಳೆದುಕೊಂಡಂತಾಗಿದೆ. – ಮಾ.ವೆಂ.ಸ.ಪ್ರಸಾದ್