ಸದ್ಯದಲ್ಲೇ ಸುದೀಪ್ ತಾಯಿ-ಮಗನ ಕಥೆ ಹೇಳಲಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಯಾವ ತಾಯಿ-ಮಗನ ಕಥೆ ಹೇಳುತ್ತಿದ್ದಾರೆಂದು. ಸುದೀಪ್ ಹೇಳಲು ಹೊರಟಿರುವುದು “ತಾಯಿಗೆ ತಕ್ಕ ಮಗ’ ಚಿತ್ರದ ಕಥೆ. ಶಶಾಂಕ್ ನಿರ್ದೇಶನದ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಸುದೀಪ್ ಧ್ವನಿ ನೀಡಿದ್ದಾರೆ. ಈ ಮೂಲಕ ಅಜೇಯ್ ರಾವ್ ಸಿನಿಮಾಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.
ಸುದೀಪ್ ಇಲ್ಲಿ ಸಿನಿಮಾದ ಮುಖ್ಯ ಅಂಶವನ್ನು ಹೇಳಿದ್ದಾರೆ. ಸಿನಿಮಾದ ಒನ್‌ಲೈನ್ ಏನು, ಈ ಸಿನಿಮಾದ ಏನು ಹೇಳಲು ಹೊರಟಿದೆ ಮತ್ತು ಚಿತ್ರದ ಕಾನ್ಸೆಪ್ಟ್ ಅನ್ನು ಸುದೀಪ್ ಹೇಳಿದ್ದಾರೆ. ಚಿತ್ರದ ಟ್ರೇಲರ್ ಆಗಸ್ಟ್ 31 ರಂದು ಬಿಡುಗಡೆಯಾಗಲಿದ್ದು, ಟ್ರೇಲರ್‌ನಲ್ಲಿ ಸುದೀಪ್ ಧ್ವನಿ ಇರಲಿದೆ. ಹಾಗಂತ ಸಿನಿಮಾದಲ್ಲಿ ಇರಲ್ಲ ಎಂಬ ನಿರ್ಧಾರಕ್ಕೆ ಬರುವಂತಿಲ್ಲ. ಏಕೆಂದರೆ ಚಿತ್ರದಲ್ಲೂ ಸುದೀಪ್ ಅವರ ಧ್ವನಿ ಇರಲಿದೆ.
“ಚಿತ್ರ ಏನು ಹೇಳಲು ಹೊರಟಿದೆ ಎಂಬ ಅಂಶವನ್ನು ಸುದೀಪ್ ಅವರು ಹೇಳಿದ್ದಾರೆ. ಅದು ಅವರ ಧ್ವನಿಯಲ್ಲಿ ಮೂಡಿಬಂದಿದೆ. ಒಟ್ಟು ಸಿನಿಮಾದ ಕಾನ್ಸೆಪ್ಟ್ ಅನ್ನು ಸುದೀಪ್ ಹೇಳುವ ಮೂಲಕ ಪ್ರೇಕ್ಷಕರಿಗೆ ಸಿನಿಮಾದ ಒಂದು ಕಲ್ಪನೆ ಬರಲಿದೆ’ ಎನ್ನುವುದು ಶಶಾಂಕ್ ಮಾತು. ಸಿನಿಮಾದ ಟ್ರೇಲರ್ ನೋಡಿದರೆ ಚಿತ್ರದ ಬಗ್ಗೆ ಒಂದು ಐಡಿಯಾ ಸಿಗುತ್ತದೆ ಎನ್ನುತ್ತಾರೆ ಶಶಾಂಕ್.
ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ “ತಾಯಿಗೆ ತಕ್ಕ ಮಗ’ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. “ತಾಯಿಗೆ ತಕ್ಕ ಮಗ’ ಚಿತ್ರ ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್ ಒಂದು ಕಡೆಯಾದರೆ, ಹೀರೋ ಲವ್ ಎಪಿಸೋಡ್ ಇನ್ನೊಂದು ಕಡೆ ಸಾಗುತ್ತದೆಯಂತೆ. “ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೂಂದು ಕಥೆ ಇದೆ.
ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಶಶಾಂಕ್. ಸೆಪ್ಟೆಂಬರ್ ಮೊದಲ ವಾರದಿಂದ “ತಾಯಿಗೆ ತಕ್ಕ ಮಗ’ ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಜೇಯ್ ರಾವ್ ಹಾಗೂ ಆಶಿಕಾ ನಾಯಕ-ನಾಯಕಿಯಾಗಿದ್ದು, ಸುಮಲತಾ ಅಂಬರೀಶ್ ತಾಯಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶಶಾಂಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.