ಬೆಂಗಳೂರು: ಟೆಂಡರ್ ವಂಚನೆ ಮತ್ತು ಜೀವ ಬೆದರಿಕೆ ಕಾರಣ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಗೃಹ ಇಲಾಖೆ ಅಧೀನದ ಏಜೆನ್ಸಿಯಿಂದ ಸ್ವತಂತ್ರ ಮತ್ತು ಮುಕ್ತ ತನಿಖೆಯ ಪರವಾಗಿ ಸರಕಾರವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ(ಡಿ28) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಕರಣದಲ್ಲಿ ತಮ್ಮ ವಿರುದ್ಧ ಏನಾದರೂ ಕಂಡು ಬಂದಿದೆ ಎಂದು ಬಿಜೆಪಿ ಹೇಳುವುದು ಸಹಜ, ಒಂದು ವರ್ಷದಿಂದ ಕ್ಷುಲ್ಲಕ ಕಾರಣಕ್ಕಾಗಿ ನನ್ನ ರಾಜೀನಾಮೆ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಎಲ್ಲಾ ಚಟುವಟಿಕೆಗಳಲ್ಲಿ ನಾನು, ನನ್ನ ಇಲಾಖೆ ಅಥವಾ ಸರಕಾರ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ” ಎಂದರು.
ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರು ನನ್ನ ವಿರುದ್ಧ ಆರೋಪ ಸಾಬೀತುಪಡಿಸಲು ಸಮರ್ಥರಾಗಿದ್ದಾರೆಯೇ ಎಂದು ಹೇಳಿ. ಅವರು ಸತ್ಯ, ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಬರುವುದಿಲ್ಲ. ಯಾವಾಗಲೂ ಹಿಟ್-ಅಂಡ್-ರನ್ ಮಾಡುತ್ತಾರೆ, ಇದು ಕೂಡ ಹಿಟ್-ಅಂಡ್-ರನ್ ಆಗಿದೆ” ಎಂದರು.
ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ (26) ಅವರು ಗುರುವಾರ (ಡಿ.26) ಡೆ*ತ್‌ನೋಟ್ ಬರೆದಿಟ್ಟು, ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿ, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದರು.
ಟೆಂಡರ್ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದಿದ್ದಲ್ಲದೆ, ಕೋಟಿ ರೂ. ಕೊಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ಬೆದರಿಕೆ ಹಾಕಿದ್ದರು ಎಂದು ಡೆ*ತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.
ಸಚಿನ್ ನಾಪತ್ತೆಯಾಗಿದ್ದನ್ನು ನೋಡಿ ಗಾಬರಿಗೊಂಡ ಆತನ ಕುಟುಂಬಸ್ಥರು ಗಾಂಧಿ ಗಂಜ್ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದರು. ಈ ವೇಳೆ ಠಾಣೆಯಲ್ಲಿದ್ದ ಪೇದೆಗಳಾದ ರಾಜೇಶ್ ಮತ್ತು ಶಾಮಲಾ ಅವರು ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ ತೋರಿ ಕರ್ತವ್ಯಲೋಪ ಎಸಗಿದ್ದರು. ಈ ಕಾರಣಕ್ಕಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಎಸ್.ಪಿ ಪ್ರದೀಪ ಗುಂಟಿ ಖಚಿತಪಡಿಸಿದ್ದಾರೆ.