ಸುದೀಪ್ ಅವರಿಗೆ ಬಾಲಿವುಡ್ ಹೊಸದೇನಲ್ಲ. ಈಗಾಗಲೇ ಅವರು “ಫೂಂಕ್’,”ರಣ್’, “ರಕ್ತ ಚರಿತ್ರ’ ಚಿತ್ರಗಳ ಮೂಲಕ ಬ್ಯಾಟಿಂಗ್ ಆಡಿದ್ದಾಗಿದೆ. ಈ ನಡುವೆ ಅವರು ಸಲ್ಮಾನ್‌ಖಾನ್ ಅಭಿನಯದ ಪ್ರಭುದೇವ ನಿರ್ದೇಶನದ “ದಬಾಂಗ್ -3′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು.
ಈಗ ಸುದೀಪ್ ಆ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಹೌದು, ಸುದೀಪ್ ಅವರು “ದಬಾಂಗ್ 3′ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಯಾವಾಗ ಹೊರಬಿತ್ತೋ, ಅವರು ಯಾವಾಗ ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳು ಸೇರಿದಂತೆ ಕನ್ನಡದ ಬಹುತೇಕರಲ್ಲಿತ್ತು.
ಆ ಎಲ್ಲಾ ಕುತೂಹಲಕ್ಕೆ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ತೆರೆ ಎಳೆದಿದ್ದಾರೆ. ಶನಿವಾರ “ದಬಾಂಗ್ 3′ ಚಿತ್ರತಂಡವನ್ನು ಸೇರಿಕೊಂಡ ಸುದೀಪ್, ಬಾಲಿವುಡ್ ನಟ ಸಲ್ಮಾನ್‌ಖಾನ್ ಜೊತೆ ಕೆಲಸ ಮಾಡಿದ ಅನುಭವವನ್ನು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ, ಸುದೀ ಪ್ ಬರೆದುಕೊಂಡ ಸಾಲುಗಳು ಹೀಗಿವೆ.
Related Articles
“ಮುಂಬೈನ ಹೀಟ್ ಜೋರಾಗಿತ್ತು. ಆದರೂ, ಆ ಹಿಟ್‌ಗೆ ಸೆಟ್‌ನಲ್ಲಿದ್ದ ಎನರ್ಜಿಯನ್ನು ಮಾತ್ರ ಅದು ಮೀರಿಸಲು ಆಗಲಿಲ್ಲ. ಇದೊಂದು ಥ್ರಿಲ್ಲಿಂಗ್ ದಿನವಾಗಿತ್ತು. ಅದ್ಭುತ ಯೂನಿಟ್, ಅತ್ಯದ್ಭುತ ಜನ, ಬೃಹತ್ ಆಗಿರುವ ಜಿಮ್ ಸೆಟಪ್ ಅದಕ್ಕೆ ಬೋನಸ್.
ಖುಷಿಯೊಂದಿಗೆ ಮೊದಲ ದಿನದ “ದಬಾಂಗ್ 3′ ಚಿತ್ರದ ಚಿತ್ರೀಕರಣ ಮುಗಿದಿದೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಇನ್ನು, ಸಲ್ಮಾನ್‌ಖಾನ್ ಅವರ ಬಗ್ಗೆಯೂ ಹೇಳಿಕೊಂಡಿರುವ ಸುದೀಪ್, “ಮನೆಯಲ್ಲೇ ಫೀಲ್ ನೀಡಿದ್ದಕ್ಕೆ ಥ್ಯಾಂಕ್ಯು’ ಎಂದು ಸಲ್ಮಾನ್‌ಖಾನ್ ಎಂದು ಹೇಳಿದ್ದಾರೆ.
ಈಗಾಗಲೇ “ದಬಾಂಗ್ 3′ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈಗ ಎರಡನೇ ಹಂತದ ಚಿತ್ರೀಕರಣ ಶುರುವಾಗಿದೆ. ಈ ಹಂತದ ಚಿತ್ರೀಕರಣದಲ್ಲಿ ಸುದೀಪ್ ಅವರು ಪಾಲ್ಗೊಂಡಿದ್ದು, ಸಲ್ಮಾನ್‌ಖಾನ್ ಎದುರು ಕಾಣಿಸಿಕೊಂಡಿದ್ದಾರೆ.
ಸುದೀಪ್ ಇಲ್ಲಿ ಸಿಖಂದರ್ ಭಾರಧ್ವಜ್ ಎಂಬ ಪಾತ್ರದಲ್ಲಿ ನಟಿಸಿದರೆ, ಚುಲ್‌ಬುಲ್ ಪಾಂಡೆ ಹೆಸರಿನ ಪಾತ್ರದಲ್ಲಿ ಸಲ್ಮಾನ್ ಪುನಃ ಮಿಂಚಲಿದ್ದಾರೆ. ನಿರ್ದೇಶಕ ಪ್ರಭುದೇವ ಅವರು ಈ ಚಿತ್ರದ ಸ್ಕ್ರಿಪ್ಟ್ ಬರೆಯುವಾಗಲೇ ಸುದೀಪ್ ಅವರನ್ನು ಆ ಪಾತ್ರಕ್ಕೆ ಸೂಚಿಸಿದ್ದ ಬಗ್ಗೆ ಹಿಂದೆಯೇ ಹೇಳಿಕೊಂಡಿದ್ದರು.
ಇಷ್ಟು ದಿನ ಕಾದಿದ್ದ ಸುದೀಪ್ ಅಭಿಮಾನಿಗಳಿಗೆ ಈಗ ಖುಷಿಯಂತೂ ಹೆಚ್ಚಿದೆ. ಅಂದಹಾಗೆ, ಸುದೀಪ್ “ಪೈಲ್ವಾನ’ ಚಿತ್ರದ ಚಿತ್ರೀಕರಣ ಮುಗಿಸಿ, “ಕೋಟಿಗೊಬ್ಬ 3′ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸ್ವಲ್ಪ ದಿನಗಳ ಚಿತ್ರೀಕರಣ ನಡೆದರೆ “ಕೋಟಿಗೊಬ್ಬ 3′ ಚಿತ್ರ ಪೂರ್ಣಗೊಳ್ಳಲಿದೆ. ಅದರ ನಡುವೆಯೇ ಸುದೀಪ್ ಬಾಲಿವುಡ್‌ಗೆ ಜಿಗಿದಿದ್ದಾರೆ.
ಅಂತೂ ಸುದೀಪ್ ಅವರು ಸಲ್ಮಾನ್‌ಖಾನ್ ಅವರ ಜೊತೆ ಮೊದಲ ಸಲ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಹೇಗೆ ಮೋಡಿ ಮಾಡುತ್ತಾರೆ ಎಂಬುದು ಅವರ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಚಿತ್ರರಂಗಕ್ಕು ಕುತೂಹಲವಿದೆ. ಅತ್ತ, ಸುದೀಪ್ ಅವರು ತೆಲುಗಿನ “ಸೈರ ನರಸಿಂಹ ರೆಡ್ಡಿ’ ಚಿತ್ರದಲ್ಲೂ ನಟಿಸಿದ್ದು, ಆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.