Advertisement

ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗ ಮಾಹಿತಿ ನೀಡಿ

03:25 PM Mar 15, 2017 | |

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ, ಅವರಿಗೆ ಉದ್ಯೋಗ ನೀಡುವ ಮೂಲಕ ಅಥವಾ ಸ್ಪಯಂ ಉದ್ಯೋಗತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸರಕಾರ ಹಾಗೂ ಸಮುದಾಯಗಳು ಎಚ್ಚರಿಕೆ ವಹಿಸಬೇಕಿದೆ ಎಂದು ದಲಿತ ಮುಖಂಡ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಗೌರ ಹೇಳಿದರು. 

Advertisement

ಅಫಜಲಪುರ ತಾಲೂಕಿನ ಗೌರ(ಬಿ) ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯುವಕರು ದುಶ್ಚಟಗಳಿಗೆ, ದುರಭ್ಯಾಸಗಳಿಗೆ ಬಲಿಯಾಗಿ ಸಾಮರ್ಥ್ಯ ಹಾಗೂ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇಂತಹ ವೇಳೆಯಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ಮುಖಾಂತರ ಇನ್ನಷ್ಟು ಸಮಾಜಮುಖೀಯಾಗಿ ದೈಹಿಕ, ಮಾನಸಿಕವಾಗಿ ಸದೃಢರನ್ನಾಗಿಸಲು ಸಾಧ್ಯವಾಗುತ್ತದೆ ಎಂದರು. ಗ್ರಾಮೀಣ ಭಾಗದಲ್ಲಿನ ಕಲೆಗಳು ಅಳಿಯುತ್ತಿವೆ.

ರೈತರು, ಹಿರಿಯರ ಬಳಿಯಲ್ಲಷ್ಟೆ ಉಳಿದುಕೊಂಡಿರುವ ವಿವಿಧ ಸಂಪ್ರದಾಯಿಕ ಜಾನಪದ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಯುವಕರು ಹಾಗೂ ಹಿರಿಯ ತಲೆಮಾರಿನ ಕಲಾವಿದರು ಮುಖಾಮುಖೀಯಾಗಬೇಕು. ಆಗ ಮಾತ್ರವೇ ಒಂದು ತಲೆಮಾರಿನ ಸಾಹಿತ್ಯ ಪ್ರಕಾರಗಳು ಇನ್ನೊಂದು ತಲೆಮಾರಿಗೆ ವರ್ಗವಾಗುತ್ತವೆ ಎಂದರು. 

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ, ಗ್ರಾಪಂಗಳ ಸಹಭಾಗಿತ್ವದಲ್ಲಿ ಕಲೆ, ಸಂಸ್ಕೃತಿ ಸಂಭ್ರಮವನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂಒಳ್ಳೆಯದು. ಈಗ ಸುಗ್ಗಿ ಮುಗಿಯುವ ಹಂತಕ್ಕೆ ಬಂದಿದೆ.

Advertisement

ಇಂತಹ ಸಮಯದಲ್ಲಿ ಈ ರೀತಿಯಾಗಿ ಉತ್ಸವಗಳನ್ನು ಮಾಡುವುದರಿಂದ ಯುವಕರಿಗೆ, ಹಿರಿಯರಿಗೆ ಇದರ ಲಾಭ ಖಂಡಿತವಾಗಿ ದೊರೆಯಲಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ವಳಕೇರಿ ಮಾತನಾಡಿ, ಮುಂದಿನ ಪೀಳಿಗೆಯ ಜಾಗೃತಿಗಾಗಿ ಗ್ರಾಮೀಣ ಭಾಗದಲ್ಲಿ ಕಲೆ, ಸಂಸ್ಕೃತಿ, ಕ್ರೀಡೆಗಳ ಮೇಳಗಳನ್ನು ತಮ್ಮ ಇಲಾಖೆ ಮಾಡಲು ಸಿದ್ಧವಾಗಿದೆ ಎಂದರು. 

ಗೌರ (ಬಿ) ಗ್ರಾಪಂ ಅಧಕ್ಷೆ ಮಹಾಲಕ್ಷ್ಮೀ ಅಂಜುಟಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಶ್ರೀಶೈಲ ಪಾಟೀಲ, ಮಲ್ಲಣಗೌಡ ಪೊಲೀಸ್‌ ಪಾಟೀಲ, ಮುಖಂಡ ಗಾಂಧಿಧಿ ದಿವಾಣಜಿ ವೇದಿಕೆ ಹಾಜರಿದ್ದರು. ಸಂಜೆ 4:30 ಗಂಟೆಗೆ ಗ್ರಾಮದ ಹುಚ್ಚಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾನಪದ ವಿವಿಧ ಕಲಾತಂಡಗಳ ಪ್ರದರ್ಶನ ಅಹೋರಾತ್ರಿವರೆಗೆ ಜರುಗಿತು.

ಬಳ್ಳಾರಿ, ರಾಯಭಾಗ,ಬೆಳಗಾವಿ, ಸವದತ್ತಿ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ಮಹಿಳಾ ತಮಟೆ, ಮಂಗಳಮುಖೀಯರ ವೀರಗಾಸೆ, ಹೆಜ್ಜೆ ಮೇಳ, ಗೊಂಬೆ ಕುಣಿತ, ಪೂಜಾ ಕುಣಿತ ಮತ್ತು ನಗಾರಿ, ಸಾರಂಗ ವಾದನ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next