Advertisement
ಶಾಸಕ ಸಂಜೀವ ಮಠಂದೂರು ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸರಕಾರವನ್ನು ಆಗ್ರಹಿಸಿ, ಈಗಾಗಲೇ ಆಗಿರುವ ಆದೇಶವನ್ನು ಜಾರಿಮಾಡದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಪುತ್ತೂರಿನ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವಂತೆ ಸದನದಲ್ಲಿಯೇ ಆದೇಶ ನೀಡಿದ್ದಾರೆ.
ಸಚಿವರ ಆದೇಶದಂತೆ ಉಪನೋಂದಣಿ ಕಚೇರಿಯನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ಹೊರಡಿಸಿರುವ ಆದೇಶ ಪತ್ರ ಶನಿವಾರ ಪುತ್ತೂರು ಕಚೇರಿಗೆ ತಲುಪಿದೆ. ಆ ಮೂಲಕ ಹಳೆಯ ಕಾಲದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿ ಸ್ಥಳಾಂತರಗೊಳ್ಳುತ್ತಿದೆ. ಸಾರ್ವಜನಿಕ ಒತ್ತಡ
ಮಿನಿ ವಿಧಾನಸೌಧಕ್ಕೆ ಇತರ ಎಲ್ಲ ಸರಕಾರಿ ಕಚೇರಿಗಳು ಸ್ಥಳಾಂತರಗೊಂಡಿದ್ದರೂ ಉಪನೋಂದಣಿ ಕಚೇರಿಯ ಸ್ಥಳಾಂತರ ವಿವಿಧ ಕಾರಣಗಳಿಂದ ವಿಳಂಬವಾಗುತ್ತಾ ಬಂದಿತ್ತು. ನೋಂದಣಿಗೆ ಸಂಬಂಧಿಸಿದ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ಹಾಗೂ ವಾರ್ಷಿಕ ಸುಮಾರು 13 ಕೋಟಿ ರೂ.ಗೂ ಮಿಕ್ಕಿ ಆದಾಯ ತರುವ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಉಪ ನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ಸಹಿತ ಸಾರ್ವಜನಿಕ ವಲಯದಿಂದ ತೀವ್ರ ಒತ್ತಡ ವ್ಯಕ್ತವಾಗಿತ್ತು. ತಾ.ಪಂ., ಕೆಡಿಪಿ ಸಭೆ ಸಹಿತ ಎಲ್ಲ ಸಭೆಗಳಲ್ಲೂ ವಿಚಾರ ಪ್ರತಿ ಬಾರಿಯೂ ಪ್ರಸ್ತಾವವಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಇಲ್ಲಿಗೆ ಭೇಟಿ ಆದೇಶಿಸಿದರೂ ಉಪ ನೋಂದಣಿ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿರಲಿಲ್ಲ.
Related Articles
ಹಾಲಿ ಉಪನೋಂದಣಿ ಕಚೇರಿ ಇರುವ ಸ್ಥಳದ ಪಹಣಿ ಪತ್ರ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಹೆಸರಿನಲ್ಲಿದೆ. ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯೂ ಇರುವುದರಿಂದ ಅದರ ಅಭಿವೃದ್ಧಿಗಾಗಿ ಆ ಜಾಗವನ್ನು ಬಳಸಿಕೊಳ್ಳಬೇಕು ಎನ್ನುವ ಒತ್ತಾಯವೂ ಇದೆ. ಈ ಮಧ್ಯೆ 2014ರಲ್ಲಿ ಮುದ್ರಾಂಕ ಆಯುಕ್ತರ ಸೂಚನೆಯಂತೆ ಜಿಲ್ಲಾ ನೋಂದಣಾಧಿಕಾರಿಯವರು ಭೇಟಿ ನೀಡಿ ಕಚೇರಿ ದುರಸ್ತಿಗೊಳಿಸಲು ಸೂಚಿಸಿದಂತೆ 15.40 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಿ ಕಳುಹಿಸಲಾಗಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಈಗ ಸ್ಥಳಾಂತರದ ಅಧಿಕೃತ ಆದೇಶ ಸರಕಾರದ ಕಡೆಯಿಂದಲೇ ಬಂದಿರುವುದರಿಂದ ಅಭಿವೃದ್ಧಿ ವಿಚಾರ ಬದಿಗೆ ಸರಿಯಲಿದೆ.
Advertisement
ಶೀಘ್ರ ಸ್ಥಳಾಂತರಮಿನಿ ವಿಧಾನಸೌಧದಲ್ಲಿ ಉಪನೋಂದಣ ಕಚೇರಿಗೆ ಜಾಗ ಗುರುತಿಸಿ ರಿಪೋರ್ಟ್ ಹಾಕಿದ್ದೆವು. ಸರಕಾರದ ಕಡೆಯಿಂದ ಆದೇಶ ಬಂದಿದೆ. ತಿಂಗಳ ಒಳಗಾಗಿ ಉಪನೋಂದಣಿ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳಲಿದೆ.
– ಎಚ್.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ, ಪುತ್ತೂರು ಸಚಿವರಿಂದ ಆದೇಶ
ಪುತ್ತೂರು ಮಿನಿ ವಿಧಾನಸೌಧದ ಸ್ಥಳಾಂತರಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸದನದಲ್ಲಿ ಪ್ರಸ್ತಾವಿಸಿದ್ದೆ ಮತ್ತು ಈಗಾಗಲೇ ಮಾಡಲಾಗಿರುವ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಗಮನಕ್ಕೆ ತಂದಿದ್ದೆ. ಈ ವಿಚಾರ ಅರಿತುಕೊಂಡ ಕಂದಾಯ ಸಚಿವರು ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವಂತೆ ಸದನದಲ್ಲೇ ಆದೇಶ ನೀಡಿದ್ದಾರೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು ಸಿದ್ಧತೆ
ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಶನಿವಾರ ಆಯುಕ್ತರಿಂದ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಅವರಿಗೆ ಸ್ವಾಧೀನತಾ ಪತ್ರ ನೀಡಿದ್ದೇವೆ. ಮಿನಿ ವಿಧಾನಸೌಧದಲ್ಲಿನ ಕಚೇರಿಯಲ್ಲಿನ ಸಿದ್ಧತೆ, ವೈರಿಂಗ್, ಶಿಫ್ಟಿಂಗ್‌ಗೆ ಸಂಬಂಧಪಟ್ಟಂತೆ ಕೆಲಸಗಳಿಗಾಗಿ ಸಹಾಯಕ ಕಮಿಷನರ್‌ಗೆ ವಿನಂತಿಸಲಾಗಿದೆ.
– ಕವಿತಾ, ಹಿರಿಯ ನೋಂದಣಾಧಿಕಾರಿ, ಪುತ್ತೂರು — ರಾಜೇಶ್ ಪಟ್ಟೆ