Advertisement

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

01:33 PM Dec 26, 2024 | Team Udayavani |

ಪಡೀಲ್‌: ನಗರದ ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಗೋಪುರಾಕೃತಿಯ ಮೇಲೆ ‘ರಾಷ್ಟ್ರ ಲಾಂಛನ’ ವನ್ನು ಅಳವಡಿಕೆ ಕಾರ್ಯನಡೆದಿದೆ. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಘಾಟನೆ ಸಮೀಪಿಸುತ್ತಿರುವ ನಿರೀಕ್ಷೆ ಮೂಡಿಸಿದೆ.

Advertisement

ಪಾರಂಪರಿಕ ಶೈಲಿಯ ಕಟ್ಟಡದ ಮೇಲಿರುವ ಗೋಪುರ ಮಾದರಿಯಲ್ಲಿ ‘ಚಿನ್ನದ ಬಣ್ಣ’ದ ರಾಷ್ಟ್ರ ಲಾಂಛನವನ್ನು ಬೃಹತ್‌ ಕ್ರೇನ್‌ ಮೂಲಕ ಅಳವಡಿ ಮಾಡಲಾಗಿದೆ. ಈಗಾಗಲೇ ಕಚೇರಿ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣಕ್ಕಾಗಿ ಧ್ವಜಸ್ತಂಭದ ನಿರ್ಮಾಣವನ್ನೂ ಮಾಡಲಾಗಿದೆ.

ಸ್ಮಾರ್ಟ್‌ ಸಿಟಿಯಿಂದ ದ್ವಿತೀಯ ಹಂತದ ಕಾಮಗಾರಿ
ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದೆ. ಎರಡನೇ ಹಂತದ ಕಾಮಗಾರಿಯನ್ನು ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಮೂಲಕ ಕೈಗೊಳ್ಳಲಾಗುತ್ತಿದೆ. ಸಂಕೀರ್ಣದ ಹೊರಾಂಗಣ, ಸುಸಜ್ಜಿತ ಆವರಣ ಗೋಡೆ, ಫರ್ನೀಚರ್‌ಗಳು, ಫ್ಲೋರಿಂಗ್‌, ಡಿಸಿ ಕಚೇರಿಗೆ ಸಂಬಂಧಿಸಿದ ಪೀಠೊಪಕರಣಗಳು, ಸಭಾಂಗಣದ ವಿನ್ಯಾಸ, ಪೈಂಟಿಂಗ್‌, ಎಲೆಕ್ಟ್ರಿಕಲ್‌- ಕೇಬಲ್‌ ನೆಟ್‌ವರ್ಕ್‌ ಸೇರಿದಂತೆ ಸುಮಾರು 10 -15 ವಿವಿಧ ರೀತಿಯ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 15 ಕೊ.ರೂ. ವೆಚ್ಚದಲ್ಲಿ ಈ ಕಾಮಗಾರಿಗಳು ನಡೆಯುತ್ತಿದೆ.

ಹೇಗಿರಲಿದೆ ಜಿಲ್ಲಾಧಿಕಾರಿ ಕಚೇರಿ
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮೂರು ಮಹಡಿಗಳ ಕಟ್ಟಡ. 2.26 ಲಕ್ಷ ಚ. ಅಡಿಯ ಕಟ್ಟಡದಲ್ಲಿ ಕಂದಾಯ ಹಾಗೂ ಇತರ 38 ಇಲಾಖೆಗಳ ಕಚೇರಿಗಳು ಇರಲಿವೆ. ನೆಲ ಅಂತಸ್ತಿನಲ್ಲಿ 400 ಮಂದಿ ಸಾಮರ್ಥ್ಯದ ಬೃಹತ್‌ ಸಭಾಂಗಣ, 2ನೇ ಮಹಡಿಯಲ್ಲಿ ಎರಡು ಮೀಟಿಂಗ್‌ ಹಾಲ್‌, ಮಿನಿ ಸಭಾಂಗಣ, ಜಿಲ್ಲಾಧಿಕಾರಿ ಕೋರ್ಟ್‌ ಹಾಲ್‌, ಸಚಿವರು, ಸಂಸದರು, ಶಾಸಕರ ಕಚೇರಿ, ಕ್ಯಾಂಟಿನ್‌ ಮತ್ತಿತರ ಸೌಲಭ್ಯ. ತಳ ಅಂತಸ್ತಿನಲ್ಲಿ 50 ಕಾರು, 100ಕ್ಕೂ ಅಧಿಕ ದ್ವಿಚಕ್ರ ವಾಹನ ಪಾರ್ಕಿಂಗ್‌, ಕಟ್ಟಡದ ಸುತ್ತಲೂ 70 ಕಾರು ಪಾರ್ಕಿಂಗ್‌ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಒಳಗೊಂಡಿದೆ.

ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸುಮಾರು ಶೇ.80ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆದರೆ ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ.
-ಡಾ| ಸಂತೋಷ್‌ ಕುಮಾರ್‌, ಅಪರ ಜಿಲ್ಲಾಧಿಕಾರಿ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next