ಲಕ್ಷ್ಮೇಶ್ವರ: ಶಾಲಾ ವೇಳೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಹರದಗಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪಟ್ಟಣ ಪ್ರದೇಶಗಳ ವಿದ್ಯಾಭ್ಯಾಸಕ್ಕೆ ತೆರಳಲು ಸಕಾಲಿಕ ಬಸ್ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಬಸ್ ಸಿಗದೇ ಶಾಲೆಗೆ ಹೋಗುವುದನ್ನೇ ಬಿಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.
ಹರದಗಟ್ಟಿ ಗ್ರಾಮದಿಂದ ಬೆಳ್ಳಟ್ಟಿ ಶಾಲೆಗೆ ತೆರಳಲು ಪ್ರತಿದಿನ ಈ ಮಾರ್ಗದ ಮಲ್ಲಾಪುರ, ಹುಲ್ಲೂರ, ನೆಲೂಗಲ್ ಗ್ರಾಮದ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯಿಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಷ್ಟೇ ಅಲ್ಲದೇ ಜನಸಮಾನ್ಯರು, ನೌಕರರು, ವ್ಯಾಪಾರಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಲಕ್ಷ್ಮೇಶ್ವರದಿಂದ ಹರದಗಟ್ಟಿ, ಮಲ್ಲಾಪುರ, ಹುಲ್ಲೂರ ಗ್ರಾಮದ ಅನೇಕ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಕಾಯುತ್ತಾರೆ. ಈ ಮಾರ್ಗವಾಗಿ ನಿತ್ಯ ಬೆಳಗ್ಗೆ 8.30ಕ್ಕೆ ಬರುತ್ತಿದ್ದ ಬಸ್ 10.30ಕ್ಕೆ ಬರುತ್ತದೆ. ರಸ್ತೆ ಸರಿಯಿಲ್ಲದ್ದರಿಂದ ಬೆಳ್ಳಟ್ಟಿ ತಲುಪಲು 1 ಗಂಟೆ ಬೇಕು. ಅಷ್ಟರಲ್ಲಿ ಮೊದಲೆರಡು ಅವಧಿಯ ಕ್ಲಾಸ್ ಮುಗಿದಿರುತ್ತವೆ. ಅಲ್ಲದೇ ಸಂಜೆಯೂ ಸರಿಯಾದ ವೇಳೆಗೆ ಬಸ್ ಇಲ್ಲ. ಈ ಸಮಸ್ಯೆ ಸಂಬಂಧಪಟ್ಟ ಸಾರಿಗೆ ಘಟಕದವರಿಗೆ ಹೇಳಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಗ್ರಾಮಸ್ಥರಾದ ಮಾರುತಿ ಲಮಾಣಿ, ಪರಮೇಶ ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಬಸ್ ತಡೆದ ವಿಷಯ ತಿಳಿದ ಡಿಪೋ ಮ್ಯಾನೇಜರ್ ಏಕಾಏಕಿ ಬಸ್ ತಡೆಯುವುದು ಸಮಂಜಸವಲ್ಲ. ನಿಮ್ಮ ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರಿಂದ ಬಸ್ ಬಿಡಲಾಯಿತು.
ಈ ವೇಳೆ ಗ್ರಾಮಸ್ಥರಾದ ರವಿಕುಮಾರ್ ಲಮಾಣಿ, ರವಿ ಲಮಾಣಿ, ಮಾರುತಿ ಲಮಾಣಿ, ಫಕ್ಕೀರಪ್ಪ ಮಾಳಗಿಮನಿ, ಅರ್ಜುನ ಲಮಾಣಿ, ಸುರೇಶ ನಾಯಕ, ಲಕ್ಷ್ಮಣ ಲಮಾಣಿ, ಅಂಬರೀಶ ಲಮಾಣಿ, ಪರಸಪ್ಪ ಲಮಾಣಿ 2 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಬಸ್ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿ ಬಸ್ ಬಿಟ್ಟ ಘಟನೆ ನಡೆಯಿತು.