ಶಿಕ್ಷಣ ಎಲ್ಲರ ಹಕ್ಕು. ನಮ್ಮ ದೇಶದಲ್ಲಿ ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಕಡ್ಡಾಯವಾಗಿ ಶಿಕ್ಷಣ ನೀಡಬೇಕೆನ್ನುವ ಯೋಜನೆಯೂ ಇದೆ. ಕಲಿತು ಉದ್ಯೋಗಸ್ಥರಾಗುವುದು ಶಿಕ್ಷಣದ ಗುರಿ. ಶಾಲಾ ದಿನಗಳಲ್ಲಿ ನಮಗೆಲ್ಲ ಕಾಪಿ ಬರೆಯುವ ಹೋಮ್ ವರ್ಕ್ ಪ್ರತಿನಿತ್ಯ ಇರುತ್ತಿತ್ತು. ಒಂದು ವೇಳೆ ಒಂದು ದಿನ ಕಾಪಿ ಬರೆಯೋದರಲ್ಲಿ ತಪ್ಪು ಮಾಡಿದ್ದರೆ ಮತ್ತೊಂದು ದಿನ ಶಿಕ್ಷೆ ನೀಡಿ, ಒಂದೆರಡು ಪುಟ ಎಕ್ಸಾಟ್ರಾ ಪುಟ ಬರೆಯಬೇಕಿತ್ತು. ಆ ವೇಳೆಗೆ ನಾವು ಬೇಗ ಬೇಗ ಕಾಪಿ ಬರೆದು ಬಿಡುತ್ತಿದ್ದೆವು.ಆ ಕ್ಷಣದಲ್ಲಿ ನಮಗೆ ಎರಡು ಕೈಯಲ್ಲೂ ಬರೆಯಲು ಆಗಬೇಕಿತ್ತು ಅಂಥ ಅನ್ನಿಸಿದ್ದಿದೆ.
ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಎಲ್ಲಾ ಶಾಲೆಯ ವಿದ್ಯಾರ್ಥಿಗಳ ರೀತಿಯಲ್ಲ. ಇವರ ಕಲಿಕೆಯೇ ಭಿನ್ನ. ಮಧ್ಯಪ್ರದೇಶದ ವೀಣಾ ವಾದಿನಿ ಶಾಲೆಯ ವಿದ್ಯಾರ್ಥಿಗಳು ಎರಡೂ ಕೈಗಳಲ್ಲಿ ಸರಾಗವಾಗಿ ಬರೆಯಬಲ್ಲರು. ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಇದು ನಿತ್ಯ ಹವ್ಯಾಸದ ಅಭ್ಯಾಸ.
ತಮ್ಮ ಎರಡು ಕೈಗಳಿಂದಲೂ ಬರೆಯುತ್ತಿದ್ದ ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರಿಂದ ಸ್ಪೂರ್ತಿಯಾಗಿ ವಿರಂಗತ್ ಪ್ರಸಾದ್ ಶರ್ಮಾರಿಂದ 1999 ರಲ್ಲಿ ಆರಂಭವಾದ ಈ ವೀಣಾ ವಾದಿನಿ ಶಾಲೆಯಲ್ಲಿ ಇದುವರೆಗೆ 480 ಕ್ಕೂ ಹೆಚ್ಚಿನ ಮಂದಿ ಪಾಸ್ ಔಟ್ ಆಗಿ ಹೋಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಎಡ – ಬಲ ಎರಡು ಕೈಗಳಲ್ಲಿ ಬರೆಯಬಲ್ಲರು.
ಈ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಇನ್ನೊಂದು ವಿಶೇಷವೆಂದರೆ ಈ ವಿದ್ಯಾರ್ಥಿಗಳು 6 ಭಿನ್ನ ಭಾಷೆಯಲ್ಲಿ ಬರೆಯಬಲ್ಲರು. ಹಿಂದಿ, ಇಂಗ್ಲಿಷ್, ಉರ್ದು, ಸಂಸ್ಕೃತ, ಅರೇಬಿಕ್ ಮತ್ತು ರೋಮನ್ ಭಾಷೆಗಳಲ್ಲಿ ಒಂದೇ ಸಮಯಕ್ಕೆ ಬೇರೆ ಬೇರೆ ಭಾಷೆಯ ಅಕ್ಷರಗಳನ್ನು ಎರಡು ಕೈಗಳನ್ನು ಬಳಸಿಕೊಂಡು ಬರೆಯುತ್ತಾರೆ.
ಮೂರು ಗಂಟೆಯಲ್ಲಿ ಬರೆಯುವ ಪರೀಕ್ಷೆಗಳನ್ನು ಇಲ್ಲಿನ ವಿದ್ಯಾರ್ಥಿಗಳು, ಒಂದೂವರೆ ಗಂಟೆಯಲ್ಲಿ ಬರೆದು ಮುಗಿಸುತ್ತಾರೆ. ಎರಡೂ ಕೈಗಳಿಂದ ಎಲ್ಲಾ ವಿದ್ಯಾರ್ಥಿಗಳು ಬರೆಯುವ ಸಾಮರ್ಥ್ಯವುಳ್ಳ ಭಾರತದ ಏಕೈಕ ಶಾಲೆ ಎನ್ನುವ ಖ್ಯಾತಿಯನ್ನು ಈ ಶಾಲೆ ಪಡೆದುಕೊಂಡಿದೆ.
ಪ್ರಪಂಚದಾದ್ಯಂತದ ಕೆಲ ಸಂಶೋಧಕರು ಈ ಶಾಲೆಗೆ ಭೇಟಿ ನೀಡಿ ಎರಡು ಕೈಗಳಿಂದ ಬರೆಯುವ ಕೌಶಲ್ಯದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.