ಚಿಕ್ಕಮಗಳೂರು: ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿದ್ದು, ಸರ್ಕಾರ ಶೀಘ್ರವೇ ಬೆಳೆನಷ್ಟ ಸಮೀಕ್ಷೆ ನಡೆಸಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರ ಸಾಲಮನ್ನಾ ಮಾಡಬೇಕು ತಪ್ಪಿದಲ್ಲಿ ಕಾಂಗ್ರೆಸ್‌ನಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಫಿ, ಅಡಕೆ, ಭತ್ತದ ಕಟಾವು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಬೆಳೆನಷ್ಟವಾಗಿದೆ. ಅದರಲ್ಲೂ ಕಾಫಿ ಬೆಳೆಗಾರರು ಭಾರೀ ಸಮಸ್ಯೆಗೆ ಸಿಲುಕಿದ್ದು, ಕಾರ್ಮಿಕರ ಕೊರತೆಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಬೆಳೆ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದ ಬೆಳೆ ಕೊಯ್ಲು ಮಾಡಲು ಸಾಧ್ಯವಾಗದೆ ಕಾಫಿ ಮಣ್ಣು ಪಾಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಬೆಳೆಗಾರರ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.
ಅಕಾಲಿಕ ಮಳೆ ಕಾಫಿ ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆಗಾರರು ಸಂಕಷ್ಟದಲ್ಲಿದ್ದರು ಸಂಬಂಧಪಟ್ಟ ಇಲಾಖೆ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿನೀಡಿ ಹಾನಿ ಸಮೀಕ್ಷೆ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಕಾಫಿ ಉದ್ಯಮ ಅವನತಿ ಹಾದಿ ಹಿಡಿದಿದ್ದು, ಬೆಳೆಗಾರರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಕೇವಲ ಭರವಸೆ ನೀಡುತ್ತಾರೆ. ಪರಿಹಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ನಿಯೋಗವೊಂದನ್ನು ಕಾಫಿಬೆಳೆಯುವ ಜಿಲ್ಲೆಗಳಿಗೆ ಕಳಿಸಿ ನಷ್ಟ ಅಂದಾಜು ವರದಿ ಸಂಗ್ರಹಿಸಬೇಕು. ಬೆಳೆನಷ್ಟ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಬೆಳೆಗಾರರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹಮದ್, ನಗರ ಘಟಕದ ತನೋಜ್‌ಕುಮಾರ್, ಮುಖಂಡ ಕುರುವಂಗಿ ವೆಂಕಟೇಶ್ ಇದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಸಿ.ಟಿ. ರವಿಗೆ ರೈತರ ಸಮಸ್ಯೆ ಕಾಣುತ್ತಿಲ್ಲ. ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಕಾಂಗ್ರೆಸ್ ಶಾಸಕ ರಾಜೇಗೌಡ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಬಿಜೆಪಿಯವರಿಗೆ ಜನರ ಭಾವನೆ ಕೆರಳಿಸಿ ಗಲಭೆ ಸೃಷ್ಟಿಸುವುದು ಬೇಕೇ ಹೊರತು. ಜನರ ಬದುಕಿನ ವಿಚಾರ ಬೇಡವಾಗಿದೆ.
ಎಚ್.ಎಚ್. ದೇವರಾಜ್.