ಕೊಳ್ಳೇಗಾಲ: ನಗರಸಭೆ ವತಿಯಿಂದ ನಿರ್ಮಿಸಿರುವ ರಸ್ತೆ ಸಾರಿಗೆ ಬಸ್ ನಿಲ್ದಾಣವನ್ನು ಮೂಲನಕ್ಷೆಯಂತೆ ನಿರ್ಮಿಸಿಲ್ಲ ಮತ್ತು ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಬಾರದು ಎಂದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿರೋಧಿಸಿ ಸೋಮವಾರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕ್ಷಮೆಕೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಂತೆ ಕುಪಿತಗೊಂಡ ಅಧ್ಯಕ್ಷರು ಶಾಸಕರು ಎನ್.ಮಹೇಶ್ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಸಚಿವರ ಮನವೊಲಿಕೆ ಪ್ರಯತ್ನ ವಿಫಲವಾಗುತ್ತಿ ದ್ದಂತೆ ಧಿಕ್ಕಾರ ಸಾರುತ್ತಾ ಸದಸ್ಯರು ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಬಂದು ಪ್ರತಿಭಟನೆ ಕೈಬಿಟ್ಟರು. ನಗರಸಭೆಯ ಸದಸ್ಯರು ಬಸ್ ನಿಲ್ದಾಣ ಉದ್ಘಾಟನೆಯನ್ನು ತಡೆಯುವಂತೆ ಕಪ್ಪುಪಟ್ಟಿ ಪ್ರದರ್ಶನಕ್ಕೆ ಮುಂದಾದ ವೇಳೆ ಪೊಲೀಸರು ಮಧ್ಯೆ ಪ್ರವೇಶ ಮಾಡಿ ಪಟ್ಟಿ ವಶಪಡಿಸಿಕೊಂಡರು.
ಪ್ರತಿಭಟನೆಯಲ್ಲಿ ನಗರ ಸಭೆಯ ಅಧ್ಯಕ್ಷೆ ರೇಖಾ ರಮೇಶ್, ಉಪಾದ್ಯಕ್ಷೆ ಸುಶೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ನಾರಾಯಣ್ ಗುಪ್ತ, ಸದಸ್ಯರು ಗಳಾದ ಶಾಂತರಾಜು, ರಾಘವೇಂದ್ರ, ಮಂಜು ನಾಥ್, ಭಾಗ್ಯಮ್ಮ, ಸುಮಾಸುಬ್ಬಣ್ಣ, ಪುಷ್ಪಲತಾ, ಕವಿತ, ಬಿಎಸ್ಪಿ ಸದಸ್ಯರಾದ ಜಯಮೇರಿ, ಜಯ ರಾಜ್, ಬಿಜೆಪಿ ಸದಸ್ಯರಾದ ಜಿ.ಪಿ.ಶಿವಕುಮಾರ್, ಧರಣೇಶ್, ನಾಗೇಂದ್ರ ಇತರರು ಇದ್ದರು.