ಬೆಂಗಳೂರು: ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ಕಡ್ಡಾಯವಾಗಿ ಕಸಮುಕ್ತ ನಗರವನ್ನಾಗಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಿ ಸ್ವಚ್ಛತೆ ಕಾಪಾಡಬೇಕು ಎಂದು ಮೇಯರ್ ಎಂ.ಗೌತಮ್ ಕುಮಾರ್ ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಹಡ್ಸನ್ ವೃತ್ತದ ಬಳಿ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2020 ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣ್ ಅಭಿಯಾನ 2020ಕ್ಕೆ ಮಾತ್ರ ಸೀಮಿತವಾಗದೆ, ನಿರಂತರ ಪ್ರಕ್ರಿಯೆಯಾಗಬೇಕು. ನಾಗರಿಕರು ಪಾಲಿಕೆ ಅಧಿಕಾರಿಗಳ ಜತೆ ಕೈಜೋಡಿಸಿ ನಗರಕ್ಕೆ ಮೊದಲ ಸ್ಥಾನ ಸಿಗುವವರೆಗೂ ಸ್ವಚ್ಛತಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.
ಕಸಮುಕ್ತ ಬೆಂಗಳೂರು ಮಾಡಲು ಪಾಲಿಕೆ ವತಿಯಿಂದ ಈಗಾಗಲೇ ಅನೇಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ತಮ್ಮ ಮನೆ, ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜತೆಗೆ ಇತರರಿಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಬಿದ್ದಿರುವುದು ಕಂಡುಬಂದರೆ ಪಾಲಿಕೆ ನಿಯಂತ್ರಣ ಕೊಠಡಿ ಹಾಗೂ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿದರೆ ಕೂಡಲೆ ಬಿದ್ದಿರುವ ಕಸವನ್ನು ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.
ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕು. ನಗರದಲ್ಲಿ ಸ್ವಚ್ಛತೆ ಪ್ರತಿದಿನ ಆಂದೋ ಲನವಾಗಬೇಕು ಎಂದರು. ವಿಶೇಷ ಆಯುಕ್ತ (ಘನತ್ಯಾಜ್ಯ) ರಂದೀಪ್ ಮಾತ ನಾಡಿ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ಈ ಪೈಕಿ ಇದುವರೆಗೆ 40 ಸಾವಿರ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು.
https://swachhsurvekshan2020.org/CitizenFeedbackಲಿಂಕ್‌ಗೆ ಎಲ್ಲರೂ ಭೇಟಿ ನೀಡಿ ಅಲ್ಲಿ ಕೇಳುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಸ್ವಚ್ಛ ಸರ್ವೆಕ್ಷಣ್ ಆ್ಯಪ್ ಬಿಡುಗಡೆಗೊಳಿಸಲಾಯಿತು. ಜಾಗೃತಿ ಜಾಥಾದಲ್ಲಿ ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳು, ಮಹಾರಾಣಿ ಕಾಲೇಜು, ಹೋಮ್ ಸೈನ್ಸ್ ಕಾಲೇಜು, ಜೈನ್ ವಿವಿ, ಬಿಷಪ್ ಕಾಟನ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು, ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ವಿರೋಧಪಕ್ಷದ ನಾಯಕ ಅಬ್ದುಲ್ ವಾಜೀದ್, ಜಂಟಿ ಆಯುಕ್ತ ಬಾಲಶೇಖರ್, ಪಲ್ಲವಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಹಾಗೂ ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.