Advertisement
ಮುಖ ತೊಳೆಯಲು ನೆರವಾದ ಮಂಜುಳಾ, ಹಂಸಿನಿಯನ್ನು ಅಂಗಳದಲ್ಲಿ ಕರೆತಂದು ಕೂರಿಸಿದಳು. ಸುತ್ತಮುತ್ತಲ ಮರದ ಕೊಂಬೆಗಳ ಮೇಲೆ, ಮನೆಯ ಮಾಡಿನ ಮೇಲೆ, ಇವಳಿಗಾಗಿಯೇ ಕಾದು ಕುಳಿತ ಪಾರಿವಾಳಗಳ ಹಿಂಡು, ಇವಳನ್ನು ನೋಡುತ್ತಲೇ ಒಂದೊಂದಾಗಿ ಅಂಗಳದ ತುಂಬಾ ಬಂದಿಳಿಯುತ್ತವೆ. ಇವಳಾದರೋ ಒಂದೊಂದನ್ನೂ ಮಾತನಾಡಿಸುತ್ತ, ಕಾಳನ್ನು ಬೀರುತ್ತ, ಅವು ಕುಕ್ಕಿ, ಕುಕ್ಕಿ ಹೆಕ್ಕಿ ತಿನ್ನುವುದನ್ನು ಕಣ್ತುಂಬಿಕೊಳ್ಳುತ್ತ, ಸಂತೃಪ್ತಿಯನ್ನು ಅನುಭವಿಸುವುದು, ನಿತ್ಯದ ನಿಯಮ. ಕಳೆದ ಇಪ್ಪತ್ತೈದು ವರ್ಷಗಳಿಂದ ವ್ರತದಂತೆ ನಡೆಸಿಕೊಂಡು ಬಂದ ವೃತ್ತಿ. ಪ್ರೀತಿಯ ಹೊಳೆಯನ್ನೇ ಹರಿಸಿ ಅವುಗಳೊಡನೆ ಅವಿನಾಭಾವ ಸಂಬಂಧವನ್ನು ಏರ್ಪಡಿಸಿಕೊಂಡಿದ್ದಾಳೆ. ಅವಾದರೂ ಅಷ್ಟೆ. ಇವಳ ಸುತ್ತ ಮುತ್ತ ಸುತ್ತಿ ಸುಳಿಯುತ್ತ, ಕತ್ತನ್ನು ಕೊಂಕಿಸುತ್ತ, ಕಾಳನ್ನು ಮೆಲ್ಲುತ್ತವೆ. ಅದರಲ್ಲೂ ಬೂದು ಬಣ್ಣದ ಪಾರಿವಾಳಗಳ ಮಧ್ಯದಲ್ಲಿ ಕದ್ದಿರಿಳಿನ ಚಂದಿರನಂತೆ ಕಂಗೊಳಿಸುವ ಬಿಳಿ ಪಾರಿವಾಳ ಇವಳ ಕಣ್ಮಣಿ. ಇವಳಿಲ್ಲದ ದಿನ ಮಂಜುಳಾ ಕಾಳುಗಳನ್ನು ಬೀರುತ್ತ ಇನ್ನಿಲ್ಲದಂತೆ ಕರೆದರೂ, ಮರ-ಮಾಡು ಬಿಟ್ಟು ಇಳಿದು ಬರುವುದೇ ಇಲ್ಲ. ಕರೆದು ಕರೆದು ಸಾಕಾಗಿ, “”ನಿಮ್ಮ ಧಿಮಾಕಿಗಿಷ್ಟು ಬೆಂಕಿ ಬೀಳಾ” ಎಂದು ಬೈದು ಅವಳು ಒಳಹೋಗಿ ಬಾಗಿಲು ಹಾಕಿಕೊಂಡ ನಂತರವೇ ಒಂದೊಂದಾಗಿ ಇಳಿದು ಬಂದು ಕಾಳುಗಳನ್ನು ತಿನ್ನೋದು. ಹಂಸಿನಿ ಮರಳಿ ಬರುತ್ತಲೇ, “”ನಿಮ್ಮ ಕೂಸುಗಳು ನನ್ನ ಕೈಯಲ್ಲಿ ತಿನ್ನಲ್ಲ. ನೀವೇ ಸರಿ ಅವಕ್ಕೆ” ಎಂದು ಛೇಡಿಸಿ, ಹುಸಿಗೋಪ ತೋರಿಸಿ ಸಮಾಧಾನ ಮಾಡಿಕೊಳ್ಳುತ್ತಾಳೆ. “”ಹೌದು ಮತ್ತೆ. ನನ್ನ ಕೂಸುಗಳು ನನ್ನ ಕೈಯಲ್ಲೇ ತಿನ್ನೋದು, ಏನೀಗ?” ಎನ್ನುತ್ತ ಹಂಸಿನಿಯೂ ನಗೆಯಾಡುತ್ತಾಳೆ. ಆದರೆ, ಇಂದು ಕಾಳುಗಳನ್ನೆತ್ತಿ ಬೀರಲೂ ಉದಾಸೀನ! ತನಗೆ ಅತ್ಯಂತ ಆಪ್ಯಾಯಮಾನವಾದ ಗುಟುರುವಿಕೆಗೂ, ವೃತ್ತಾಕಾರವಾಗಿ ಚಲಿಸುವಾಗ ಪಟಗುಡುವ ರೆಕ್ಕೆಯ ದನಿಗೂ, ತನ್ನಲ್ಲಿ ಉತ್ಸಾಹವನ್ನು ತುಂಬಿಸುವ ಶಕ್ತಿ ಇಲ್ಲದಿರುವುದು ಹಂಸಿನಿಯಲ್ಲಿ ಸಖೇದಾಶ್ಚರ್ಯವನ್ನು ಉಂಟುಮಾಡುತ್ತವೆ.
Related Articles
Advertisement
ಆಶಾವಾದದ ಪ್ರತಿರೂಪದಂತಿದ್ದ ಹಂಸಿನಿ, ಕ್ಯಾನ್ಸರ್ ಬಂದೊದಗಿದ ಸುದ್ದಿಯನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸಿದ ಹಂಸಿನಿ, ಮೈಮನಗಳನ್ನು ನುಜ್ಜುಗೊಜಾjಗಿಸುವ ಭೀಕರ ಚಿಕಿತ್ಸೆಗಳನ್ನೆಲ್ಲ ತಾಳಿಕೊಂಡ ಹಂಸಿನಿ, ಜವರಾಯನಿಗೆ ಸವಾಲೆಸೆದು ಸೆಡವುಗಟ್ಟಿ ನಿಂತ ಹಂಸಿನಿ, ಚಿಕಿತ್ಸೆಯ ಕೊನೆಹಂತದಲ್ಲಿ ಈ ಪರಿಯ ಖನ್ನತೆಗೊಳಗಾಗಿದ್ದು ಎಲ್ಲರಿಗೂ ಸೋಜಿಗದ ಸಂಗತಿಯಾಯಿತು. ಅವಳ ಛಲವನ್ನು ಬಡಿದೆಬ್ಬಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಹಂಸಿನಿಗೂ ತನ್ನ ಮನಸ್ಸಿನ ಬಗ್ಗೆ ಅಚ್ಚರಿ ಮೂಡುತ್ತಿತ್ತು. ತನ್ನ ಮನದ ಮೇಲಿನ ಹತೋಟಿಯನ್ನೇ ಕಳೆದುಕೊಂಡ ಹತಾಶಭಾವ. ಯಾವುದರಲ್ಲೂ ಆಸಕ್ತಿ ಇಲ್ಲದ ನಿರಾಸೆಯ ಮನೋಭಾವ. ಡಾ. ವೀಣಾ ಕೂಡ ಇವಳ ಖನ್ನತೆಯನ್ನು ನೋಡಿ ಕಂಗಾಲಾದಳು. ಕಾರಣವನ್ನು ಹುಡುಕಲು ಪ್ರಯತ್ನಿಸಿದಳು. ಅವಳಂತರಂಗದ ಆಳ-ಅಗಲಗಳಲ್ಲಿ ಬೇರು ಬಿಟ್ಟಿದ್ದ ನೀರವತೆ, ತನ್ನ ಗುಟ್ಟು ಬಿಟ್ಟುಕೊಡದೇ ಸತಾಯಿಸಿತು.
ಮಟಮಟ ಮಧ್ಯಾಹ್ನ. ರಾತ್ರಿಯೆಲ್ಲ ನಿದ್ದೆ ಇಲ್ಲದ ರೋಗಿಯ ಮನೆಮಂದಿಯೆಲ್ಲ ಗಾಢ ನಿದ್ದೆಯಲ್ಲಿದ್ದಾರೆ. ಹಂಸಿನಿಯ ನೆಚ್ಚಿನ ಬಿಳಿಯ ಪಾರಿವಾಳ ಅಂಗಳದಲ್ಲಿ ರೆಕ್ಕೆಮುರಿದು ಬೆನ್ನಿನ ಮೇಲೆ ಬಿದ್ದು ಹೊರಳಾಡುತ್ತ, ಆರ್ತನಾದ ಮಾಡುತ್ತಿದೆ. ಅದನ್ನು ಕೇಳುತ್ತಲೇ ದಿಗಿಲಿನಿಂದೆದ್ದ ಹಂಸಿನಿ, ಮಂಜುಳಾನ ಎಬ್ಬಿಸಿಕೊಂಡು ಅಂಗಳಕ್ಕೆ ಬಂದು ನೋಡುತ್ತಾಳೆ, ರಕ್ತ ಸುರಿಸುತ್ತ ಒದ್ದಾಡುತ್ತಿರುವ ತನ್ನ ನೆಚ್ಚಿನ ಜೀವ ! ನಿಧಾನವಾಗಿ ಅದನ್ನೆತ್ತಿ ತನ್ನ ಕೋಣೆಯೊಳಗೆ ತಂದು ಮೆತ್ತನೆ ಹಾಸಿನ ಬುಟ್ಟಿಯೊಳಗಿಡುತ್ತಾಳೆ. “”ನೀವಿದನ್ನೆಲ್ಲ ಮುಟ್ಟಬಾರದಮ್ಮ. ಡಾಕ್ಟರಮ್ಮ ಹೇಳಿಲ್ಲವೇ? ನಿಮಗೆ ನಂಜಾಗುತ್ತೆ” ಎಂಬ ಮಂಜುಳಾಳ ಮಾತಿಗೆ ಕಿವಿಗೊಡದೇ, ರಕ್ತ ಸುರಿಯುತ್ತಿದ್ದ ಜಾಗಾನ ಹತ್ತಿಯಿಂದ ಸ್ವತ್ಛಗೊಳಿಸಿ ಮುಲಾಮು ಹಚ್ಚುತ್ತಾಳೆ. ರೆಕ್ಕೆಯನ್ನು ಬಡಿದು ನೋವಿನಿಂದ ಕಿರಿಚುವ ಹಕ್ಕಿಯ ರೆಕ್ಕೆಯನ್ನು ನಿಧಾನವಾಗಿ ಚಲಿಸಲಾಗದಂತೆ, ಬಟ್ಟೆಯಿಂದ ಕಟ್ಟುತ್ತಾಳೆ. ಮಂಜುಳಾ ಅದಕ್ಕೆ ನೀರು ಕುಡಿಸುತ್ತಾಳೆ. ಸ್ವಲ್ಪ$ ಸುಧಾರಿಸಿಕೊಂಡ ಹಕ್ಕಿ ಅಲುಗಾಡದೇ ಮಲಗುತ್ತೆ. ಬುಟ್ಟಿಯನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡು, ಅದರ ಆರೈಕೆಯಲ್ಲೇ ತನ್ನ ಸಮಾಧಾನ ಕಂಡುಕೊಳ್ಳುತ್ತಾಳೆ.
ಸಂಜೆ ಬಂದ ವೀಣಾಗೆ ರೋಗಿಯ ಬಳಿ ಇದ್ದ ಬುಟ್ಟಿ ನೋಡಿ ರೇಗಿ ಹೋಯಿತು. “”ನಿಂದ್ಯಾಕೋ ಅತಿ ಆಯ್ತು ಹಂಸಾ, ಗಾಯವಾದ ಹಕ್ಕೀನ ಬಳಿ ಇಟ್ಟುಕೊಳ್ಳೋದಾ? ನಿನ್ನ ದೇಹದಲ್ಲಿ ಬಿಳಿ ರಕ್ತಕಣಗಳೇ ಇರಲ್ಲ ಈಗ. ಸೋಂಕು ತಗಲಿದರೇನು ಗತಿ? ಬುದ್ದಿ ಇಲ್ಲದವರಂತೆ ಆಡುತ್ತಿದ್ದೀಯಲ್ಲಾ!” ಎಂದು ಅಸಮಾಧಾನ ತೋಡಿಕೊಂಡಳು. ಆಗ ಮಂಜುಳಾಳೇ, “”ಅಮ್ಮನ ಜೀವ ಆ ಹಕ್ಕಿ ಮೇಲಿದೆ ಡಾಕ್ಟರೆ. ನೀವು ಅದನ್ನ ದೂರ ಮಾಡಿದರೆ ಅವರು ಇನ್ನಷ್ಟು ಇಳಿದು ಹೋಗ್ತಾರೆ” ಎಂದಳು. ಹಂಸಿನಿಯ ಕಣ್ಣುಗಳಲ್ಲೂ ಅದೇ ಭಾವ ಗಮನಿಸಿದ ವೀಣಾ, “”ಏನಾದರೂ ಮಾಡಿಕೊಳ್ಳಿ. ಆ ಭಗವಂತನೇ ನಿಮ್ಮನ್ನು ಕಾಪಾಡಬೇಕು” ಎಂದು ಸಿಡುಕಿ ನುಡಿದರೂ, ಪ್ರೀತಿಗೆ ಖನ್ನತೆಯನ್ನು ಕರಗಿಸುವ ಶಕ್ತಿ ಇದೆಯೇ ಎಂದು ಕಾದು ನೋಡುವ ತಾಳ್ಮೆಯ ನಿರ್ಧಾರ ಕೈಗೊಂಡಳು.
ಸೂರ್ಯನ ಆಗಮನದ ಸಡಗರದಲ್ಲಿದ್ದ ಪ್ರಶಾಂತವಾದ ಮುಂಜಾವು. ಪಾರಿವಾಳವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ನೇವರಿಸುತ್ತ ಕುಳಿತ ಹಂಸಿನಿಗೆ ಇದ್ದಕ್ಕಿದ್ದಂತೆ ಮನೋಹರನ ನೆನಪಾಯಿತು. ಹದಿನೈದು ವರ್ಷದ ಹಿಂದೆ ತನ್ನ ಬ್ಯಾಂಕ್‌ನಲ್ಲಿದ್ದ ಸಹೋದ್ಯೋಗಿ. ಚಟುವಟಿಕೆಯ ಚಿನಕುರುಳಿ, ಮಾತಿನ ಮಲ್ಲ. ಬಂದ ದಿನವೇ ಎಲ್ಲರೊಡನೆಯೂ ಲೀಲಾಜಾಲವಾಗಿ ಬೆರೆಯುತ್ತ, ಎಲ್ಲರಿಗೂ ಆತ್ಮೀಯನಾಗಿ ಬಿಟ್ಟಿದ್ದ. ತನ್ನನ್ನು ನೋಡುತ್ತಲೇ, “”ಏನ್ರೀ ಹಂಸದಂತೆ ತೇಲುತ್ತ¤ ನಡೀತೀರಂತ ನಿಮ್ಮ ಹೆಸರು ಹಂಸಿನೀನಾ” ಎಂಬಂತ ಜೇನು ಸುರಿಸೋ ಮಾತು.
ಕೆಲಸದಲ್ಲೂ ಅಚ್ಚುಕಟ್ಟು. ಎಂತಹ ಸಮಸ್ಯೆ ಬಂದರೂ ಮೊದಲು ನೆನಪಿಗೆ ಬರುತ್ತಿದ್ದಿದ್ದೇ ಮನೋಹರ. ತನ್ನ ಕೆಲಸ ಬದಿಗಿಟ್ಟು ನೆರವಿಗೆ ನಿಂತು ಬಿಡುತ್ತಿದ್ದ. ತಾನು ಊಹಿಸಲೂ ಆಗದಂತಹ ಕ್ರಿಯೇಟೀವ್ ಸೊಲ್ಯೂಷನ್‌ಗಳನ್ನ ಹುಡುಕಿಕೊಡುತ್ತಿದ್ದ. ಬ್ಯಾಂಕ್‌ನ ಬೋರು ಹೊಡೆಸುವ, ತಪ್ಪುಗಳ ಲೆಕ್ಕಾಚಾರದಲ್ಲೇ ಕಳೆದುಹೋಗುತ್ತಿದ್ದ ಮೀಟಿಂಗ್‌ಗಳನ್ನೆಲ್ಲ ತನ್ನ ಹಾಸ್ಯದ ಮಂತ್ರದಂಡದಿಂದ ಚೇತೋಹಾರಿ ಸಮ್ಮಿಲನಗಳಂತೆ ಮಾಡಿಬಿಡುತ್ತಿದ್ದ. ಎಲ್ಲರ ಹುಟ್ಟಿದ ದಿನಗಳನ್ನೂ ಕಲೆಹಾಕಿ, ಬ್ಯಾಂಕ್‌ನಲ್ಲೇ ಸೆಲೆಬ್ರೇಟ್ ಮಾಡಕ್ಕೆ ಶುರುವಿಟ್ಟ. ಸಂಜೆ ಆಗುತ್ತಲೇ, “”ಬನ್ರೀ ಕಾಫೀ ಟೈಂಗೆ ಹೊಟ್ಟೆ ಕಾಯಿಸ್ ಬಾರ್‌ದು” ಅನ್ನುತ್ತ, ಕ್ಯಾಂಟಿನ್‌ಗೆ ಧಾಳಿ ಇಡುತ್ತಿದ್ದ. ತೆರೆದ ಮುಗ್ಧಮನ ಅವನದ್ದು. ಕ್ರಮೇಣ ಹಂಸಾ ಬ್ಯಾಂಕ್‌ನ ಸಮಸ್ಯೆಗಳಲ್ಲದೇ, ಮನೆಯ ತೊಂದರೆಗಳನ್ನೂ ಅವನ ಮುಂದೆ ಹೇಳತೊಡಗಿದಳು. ಎಲ್ಲದಕ್ಕೂ ಸಿದ್ಧ ಪರಿಹಾರ ಅವನ ಬಳಿ ರೆಡಿ ಇರುತ್ತಿತ್ತು. ಅವ ಒಂದು ದಿನ ಬಾರದಿದ್ದರೆ ಏನೋ ಕಳಕೊಂಡ ಅನುಭವ. ಒಮ್ಮೆ ಮಧ್ಯ ರಾತ್ರಿ ಹನ್ನೊಂದು ಗಂಟೆಗೆ ಬಾಗಿಲ ಬೆಲ್ ಬಡಿಯಿತು. ನಿದ್ದೆಯಿಂದೆದ್ದು ಬಾಗಿಲು ತೆರೆದರೆ, ಮುಖದ ತುಂಬ ನಗುತುಂಬಿದ ಮನೋಹರ್, ಸ್ವೀಟ್ ಪ್ಯಾಕೇಟ್‌ನೊಂದಿಗೆ. ಏನು ನಡೀತಿದೆ ಅಂತ ತಿಳಿಯೋದೊÅಳಗೇ “”ಕಂಗ್ರ್ಯಾಟ್ಸ್ ರೀ ಹಂಸಾ. ನಿಮ್ಮ ಪ್ರಬಂಧ ನ್ಯಾಷನಲ್ ಲೆವೆಲ್‌ಗೆ ಸೆಲೆಕ್ಟ್ ಆಗಿದೆ. ಈಗತಾನೆ ಫ್ಯಾಕ್ಸ್ ಬಂತು. ನೈನಿತಾಲ್‌ನಲ್ಲಿನ ಕಾನ್ಫರೆನ್ಸಿಗೆ ಹೋಗಿ ಪ್ರಸೆಂಟ್ ಮಾಡಬೇಕು. ನನ್ನ ಫ್ರೆಂಡ್ ಒಬ್ಬ ಅಲ್ಲಿದ್ದಾನೆ. ಅವನಿಗೆ ಹೇಳಿ ರೂಮ್ ಬುಕ್ ಮಾಡಿಸುತೀನಿ. ಇನ್ನು ನಿಮ್ಮ ಪ್ರಮೋಷನ್ ಗ್ಯಾರಂಟಿ” ಎನ್ನುತ್ತ ಸ್ವೀಟ್ ಕೈಗಿತ್ತ. ಹೋಗಬೇಕೋ ಬೇಡವೋ ಎಂದು ಹಂಸಾ ಮತ್ತವಳ ಯಜಮಾನರು ಮೀನಾಮೇಷ ಎಣಿಸುತ್ತಿರುವಾಗಲೇ ಅವ ಬಂದಂತೆ ಮರಳಿಯಾಗಿತ್ತು. ಹಂಸಾ ಅಲ್ಲಿಗೆ ಹೋಗಿಬಂದು ಪ್ರಮೋಷನ್ ಪಡೆದಿದ್ದೂ ಆಯಿತು. ಅವನ ಒತ್ತಾಸೆ ಇಲ್ಲದಿದ್ದರೆ ಅಷ್ಟು ದೂರ ಮನೆಬಿಟ್ಟು ಹೋಗೋ ಯೋಚನೇನೂ ಹಂಸಾ ಮಾಡುತ್ತಿರಲಿಲ್ಲ. ಹೆಂಗಸರನ್ನ ಗೌರವಿಸೋದು, ಅವರ ಭಾವನೆಗಳಿಗೆ ಸ್ಪಂದಿಸೋದು ಅವನ ರಕ್ತದಲ್ಲೇ ಇತ್ತು. ಮನೆಯ ಜವಾಬ್ದಾರಿ, ಬ್ಯಾಂಕ್‌ನ ಕೆಲಸಗಳ ನಡುವಿನ ಒದ್ದಾಟಗಳಿಗೂ, ಎರಡನ್ನೂ ಸರಿಯಾಗಿ ನಿಭಾಯಿಸಲಾರದೇ ಒಮ್ಮೊಮ್ಮೆ ಮೂಡುತ್ತಿದ್ದ ತಪ್ಪಿತಸ್ಥ ಭಾವಗಳಿಗೂ ಪರಿಹಾರ ಅವನಲ್ಲಿತ್ತು. ಹಂಸಿನಿಯ ಮಕ್ಕಳ ಸಣ್ಣಪುಟ್ಟ ಏಳಿಗೆಗಳನ್ನೂ ತನ್ನದೆಂಬಂತೆ ಸಂಭ್ರಮಿಸುತ್ತಿದ್ದ. ಇಷ್ಟೆಲ್ಲ ನಿಕಟ ಸಂಬಂಧದ ನಡುವೆ ಸಭ್ಯತೆಯ ಎಲ್ಲೆಯನ್ನು ಅವನೆಂದೂ ದಾಟಲಿಲ್ಲ. ದಾಟಿದ್ದರೆ ಹಂಸಿನಿ ಅವನೊಂದಿಗೆ ಸ್ನೇಹ ಮುಂದುವರಿಸುತ್ತಲೂ ಇರಲಿಲ್ಲ. ಆದರೆ ಮನೋಹರನ ಒಡನಾಟದಲ್ಲಿ ತಾನಾಯಿತು, ತನ್ನ ಕೆಲಸವಾಯಿತು ಎಂದಿರುತ್ತಿದ್ದ ಶಂಕರ್ ಸಪ್ಪೆ ಎನಿಸಿದ್ದು ಸುಳ್ಳಲ್ಲ. ಯಾವುದೇ ಸಂತೋಷ, ಸಂಭ್ರಮ, ನೋವು, ಹತಾಶೆ, ಒಲವು, ನಲಿವುಗಳಿಗೆ ಶಂಕರನದು ಯಾವಾಗಲೂ ನೀರಸ ಪ್ರತಿಕ್ರಿಯೆ. “ಹಾ, ಹೂಂ’ಗಳಲ್ಲಿ ಮುಗಿದು ಬಿಡುವ ಸಂಭಾಷಣೆ. ಜಾಸ್ತಿ ಕರೆದು ಕೇಳಿದರೆ, “”ನನಗೇನು ಗೊತ್ತು. ನಾನೇನು ಅದರಲ್ಲಿ ಪಂಡಿತನಾ?” ಎಂದು ಉತ್ತರಿಸುವ ಬೋಳೆತನ. ಇದಕ್ಕೆ ತದ್ವಿರುದ್ಧವಾದ ಮನೋಹರ ಬಂದಮೇಲೆ ಶಂಕರನನ್ನು ಕಡೆಗಣಿಸಿದ್ದು ತನ್ನ ತಪ್ಪಲ್ಲವೇ? ಇಂದು ತನಗೊದಗಿದ ಕಷ್ಟದಲ್ಲಿ ಬಿಟ್ಟಗಲದ ನೆರಳಿನಂತೆ ಕಾಪಾಡುತ್ತಿರುವ ಶಂಕರನಿಗೆ ತಾನು ಮೋಸ ಮಾಡಿದೆನೇ? ಮನೋಹರನನ್ನು ಹಚ್ಚಿಕೊಂಡು ಶಂಕರನಿಗೆ ನೋವುಂಟುಮಾಡಿದೆನೇ? ಹಂಸಿನಿಗೆ ತನ್ನ ಖನ್ನತೆಯ ಬೇರು ಸಿಕ್ಕಿಬಿಟ್ಟಿತ್ತು. ಶಂಕರನೊಡನೆ ಮನಬಿಚ್ಚಿ ಮಾತನಾಡುವ ನಿರ್ಧಾರಕ್ಕೆ ಬಂದಳು.
ಎಲ್ಲವನ್ನೂ ಕೇಳಿಸಿಕೊಂಡ ಶಂಕರ್, “”ನನಗೆಲ್ಲ ಗೊತ್ತು ಹಂಸಾ. ನಿಮ್ಮಿಬ್ಬರದೂ ಶುಭ್ರ ಸ್ನೇಹ ಎಂಬುದು ಗೊತ್ತು. ಅದರಲ್ಲೇನು ತಪ್ಪಿದೆ. ಇಷ್ಟಕ್ಕೇ ನೀನು ಮಂಕಾಗಿ ಬಿಟ್ಟಿದ್ದಾ? ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ಬೇಗ ಗುಣವಾಗುವುದರ ಕಡೆ ಗಮನಹರಿಸು” ಎಂದು ಹಂಸಿನಿಯ ಬೋಳುತಲೆಯನ್ನು ನೇವರಿಸಿದ. ಅವನ ವಿಶಾಲ ಮನೋಭಾವಕ್ಕೆ ಹಂಸಿನಿಯ ಹೃದಯ ತುಂಬಿಬಂತು. ಮೈಮನದ ಮೂಲೆಗಳನ್ನೂ ಬಿಡದೆ ಆಕ್ರಮಿಸಿಕೊಂಡಿದ್ದ ಕಾರ್ಮೋಡ ನೀರಾಗಿ ಕರಗಿ ಹೋದ ಅನುಭವ. ಬಗ್ಗಡವಾಗಿದ್ದ ಮನ ತಿಳಿಗೊಳದಂತಾದ ನಿರಾಳತೆ. ಪಾರಿವಾಳದ ರೆಕ್ಕೆಗೆ ಕಟ್ಟಿದ್ದ ಕಟ್ಟನ್ನು ನಿಧಾನವಾಗಿ ಬಿಡಿಸಿ ನೋಡಿದಳು. ತನ್ನೆರಡೂ ರೆಕ್ಕೆಯನ್ನು ಬಡಿಯುತ್ತ, ಇವಳ ಮುಂದೆ ವೃತ್ತಗಳನ್ನು ರಚಿಸುತ್ತ, ತಿರುತಿರುಗಿ ಸುತ್ತುಹೊಡೆದು, ಕಿಟಕಿಯ ಮೂಲಕ ಹಾರಿಹೋಗಿ ಪಾರಿಜಾತದ ಮರವೇರಿ ಕುಳಿತಿತು. ಗಾಯಮಾಗಿ ನವಜೀವನವನ್ನು ಪಡೆದ ಹಂಸಿನಿಯನ್ನೂ, ಹಂಸ ವರ್ಣದ ಅವಳ ಹಕ್ಕಿಯನ್ನೂ ಪಾರಿಜಾತದ ಮರವು ಹೂಮಳೆಗರೆದು ಸ್ವಾಗತಿಸಿತು.
ದಿವ್ಯಾ ಕೆ. ಎನ್.