ಸೋಲುಗಳು ಬರುವುದು ಸಾವಿನ ಆಯ್ಕೆಗಾಗಿ ಅಲ್ಲ, ಸಾಧಕನ ಹುಟ್ಟಿಗಾಗಿ.! ಈ ಮಾತಿಗೆ ಜಗತ್ತಿನಲ್ಲಿ ಎದ್ದು ನಿಂತು ಬದುಕಿದ ಅದೆಷ್ಟೋ ಯಶೋಗಾಥೆಯ ವ್ಯಕ್ತಿತ್ವಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳುತ್ತಾ ಬಂದಿದ್ದೇವೆ. ದಿನಂಪ್ರತಿ ಹುಟ್ಟವ ಇಂಥ ವ್ಯಕ್ತಿತ್ವಗಳಿಗೆ ಪ್ರೋತ್ಸಾಹವೊಂದಿದ್ದರೆ ಸಾಧನೆಯ ವೇದಿಕೆ ಹತ್ತಲು ಕಾಲುಗಳು ಎಡವುದಿಲ್ಲ..
ಕೇರಳದಲ್ಲಿ ಹುಟ್ಟಿದ ಲತೀಶಾ ಅನ್ಸಾರಿ,ಹುಟ್ಟುವಾಗ ಅಮ್ಮನ ಎದೆ ಹಾಲಿಗಾಗಿ,ಅಮ್ಮನ ಅಪ್ಪುಗೆಗಾಗಿ ಅಳಲಿಲ್ಲ, ಬದಲಾಗಿ ನೋವಿನಿಂದ ಅತ್ತು ಅತ್ತು ಸುಸ್ತಾಗಿ ಹೋದಳು. ಆಗ ತಾನೆ ಹುಟ್ಟಿದ ಮಗು ಚೀತ್ಕಾರ ಹಾಕುವಾಗ ತಾಯಿಯ ಕರುಳು ಅದೆಷ್ಟು ನೊಂದಿರಬಹುದು. ಪುಟ್ಟ ಕಂದಮ್ಮನ ಈ ನರಳು ವೈದ್ಯಕೀಯ ಲೋಕಕ್ಕೊಂದು ಸವಾಲಾಯಿತು. ತಕ್ಷಣ ಅಳುವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದ ವೈದ್ಯರು ಮಗುವಿನ ತಂದೆ- ತಾಯಿಗೆ ಅಪರೂಪದ ನೂರರಲ್ಲಿ ಒಬ್ಬರಿಗೆ ಬರುವ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (ಇದನ್ನು ಸುಲಭವಾಗಿ ಮೂಳೆ ಕಾಯಿಲೆ ಎಂದೂ ಕರೆಯುತ್ತಾರೆ) ರೋಗದಿಂದ ತತ್ತರಿಸುತ್ತಿದ್ದಾಳೆ ಎನ್ನುವ ಮಾತನ್ನು ಹೇಳುತ್ತಾರೆ.
ಸಾಧಾರಣ ಮಧ್ಯಮ ಕುಟುಂಬದ ಹಿನ್ನಲೆಯವರಾಗಿದ್ದ ಲತೀಶಾ ಅನ್ಸಾರಿಯ ತಂದೆ ತಾಯಿಗೆ ವೈದ್ಯರ ಈ ಮಾತು ಗರ ಬಡಿದಂತೆ ಆಘಾತವನ್ನುಂಟು ಮಾಡುತ್ತದೆ. ಆದರೆ ಅದನ್ನು ತನ್ನ ಮಗಳ ಮುಂದೆ ತೋರಿಸಿಕೊಳ್ಳದೆ ಮಗಳಿಗೆ ಯಾವ ತೊಂದರೆಯೂ ಉಂಟು ಆಗದಂತೆ ಸಮಾನ ಪ್ರೀತಿಯಲ್ಲಿ ಬೆಳೆಸುತ್ತಾರೆ. ಅರೈಕೆ ಮಾಡುತ್ತಾರೆ, ಸಲಹುತ್ತಾರೆ.
ನೋವು, ಅವಮಾನ ಹಾಗೂ ಸವಾಲು : ಲತೀಶಾತಿರಿಗೆ ಬಾಧಿತವಾದ ಕಾಯಿಲೆ. ಅಂಥ ಇಂಥದ್ದಲ್ಲ.ಪ್ರತಿ ಕ್ಷಣವೂ ನೋವಿನಲ್ಲಿ ಚೀರಾಡಯವಂಥದ್ದು. ಮೂಳೆ ಕಾಯಿಲೆಯಿಂದ ಲತೀಶಾಳ ದೇಹ ಕುಬ್ಜವಾಗಿ ಬೆಳೆಯುತ್ತದೆ. ವಯಸ್ಸು ಮೀರಿದರೂ ದೇಹದ ಅಂಗಾಂಗಗಳು ಬೆಳೆಯದೇ ಹಾಗೆಯೇ ಉಳಿಯುತ್ತದೆ. ತಂದೆ-ತಾಯಿ ಮಗಳಿಗೆ ಉತ್ತಮ ಶಿಕ್ಷಣ ಕೂಡಿಸುವ ಇರಾದೆಯಿಂದ ಸ್ಥಳೀಯ ಶಾಲೆಯೊಂದಕ್ಕೆ ಹೋಗುತ್ತಾರೆ. ಆದರೆ ಅಲ್ಲಿ ಲತೀಶಾಳ ಪರಿಸ್ಥಿತಿ ನೋಡಿ ದಾಖಲಿಸಲು ನಿರಾಕರಿಸುತ್ತಾರೆ. ಪೋಷಕರು ಅಲ್ಲಿಂದ ಮಗಳನ್ನು ಬೇರೆಯೊಂದು ಶಾಲೆಯಲ್ಲಿ ದಾಖಲಾತಿ ಮಾಡುತ್ತಾರೆ.ಲತೀಶಾ ತನ್ನ ವೈಫಲ್ಯ ಹಾಗೂ ನೂನ್ಯತೆಗಳ ಬಗ್ಗೆ ಚಿಂತಿಸದೇ ಓದು-ಬರಹವನ್ನು ಕಲಿಯುತ್ತಾಳೆ.
ಗಾಯದ ಮೇಲೆ ಬರೆ ಎಳೆದ ಉಸಿರಾಟದ ತೊಂದರೆ : ಲತೀಶಾಳ ಮೂಳೆ ಸಂಬಂಧಿತ ಕಾಯಿಲೆ ಎಷ್ಟು ಸೂಕ್ಷ್ಮ ಅಂದರೆ ನಮ್ಮ ನಿಮ್ಮ ಹಾಗೆ ಹಾಯಾಗಿ ಬೆಡ್ ಮೇಲೆ ಅಥವಾ ಸೋಫಾದ ಮೇಲೆ ಕೂತುಕೊಳ್ಳುಕ್ಕೊ ನೂರು ಸಲಿ ಯೋಚಿಸಬೇಕಾದ ಪರಿಸ್ಥಿತಿ. ಏಕಂದರೆ ಒಂದೇ ಒಂದು ಸಣ್ಣ ಹಸ್ತಲಾಘವ ಮಾಡಿದರೂ ಲತೀಶಾಳ ಮೂಳೆಗಳಿಗೆ ಹಾನಿಯುಂಟಾಗುತ್ತದೆ.ದಿನೇ ದಿನೇ ಈ ಸಮಸ್ಯೆ ಹೆಚ್ಚಾಗುತ್ತ ಹೋದಂತೆ ಶ್ವಾಸಕೋಶದ ಅಧಿಕ ರಕ್ತದೊತ್ತಡವೂ ಉಂಟಾಗುತ್ತದೆ ಇದರಿಂದ ಉಸಿರಾಟದ ತೊಂದರೆಯುಂಟಾಗುತ್ತದೆ. ಇದು ಹೆಚ್ಚಿಗೆ ಆಗುತ್ತಿದ್ದಂತೆ ದಿನಂಪ್ರತಿ ಉಸಿರಾಟದ ಸಹಾಯಕ್ಕೆ ಆಮ್ಲಜನಕದ ಸಿಲಿಂಡರ್ ಅನ್ನು ಉಪಯೋಗಿಸುವ ಅನಿವಾರ್ಯತೆ ಉಂಟಾಗುತ್ತದೆ. ಲತೀಶಾಳ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ಅಂದರೆ, ಆಕ್ಸಿಜನ್ ಸಿಲಿಂಡರ್ ಇಲ್ಲದೆ ಅರ್ಧ ಗಂಟೆಕ್ಕಿಂತ ಹೆಚ್ಚು ಇರಲಾಗದ ಸಂದಿಗ್ಧ ಸ್ಥಿತಿಗೆ ತಲುಪುತ್ತಾಳೆ.
ಮುನ್ನುಗ್ಗುವ ಬಲ , ಸಾಧಿಸುವ ಛಲ : ಇಷ್ಟೆಲ್ಲಾ ಆದರೂ ಲತೀಶಾ ಕಲಿಯುವುದರಲ್ಲಿ ಹಿಂದೆ ಬೀಳಲ್ಲ.ಏನಾದರೂ ಆಗಲಿ ತಾನು ನೊಂದವರಿಗೆ ಪ್ರೇರಣೆಯಾಗಬೇಕೆನ್ನುವ ಹಟ ಗಟ್ಟಿಯಾಗುತ್ತದೆ. ಎದ್ದು ನಡೆಯಲಾಗದೆ ವೀಲ್ ಚೇರ್ ನಲ್ಲೇ ಕೂತು ದಿನದೂಡುವ ಸ್ಥಿತಿಯಲ್ಲೂ ತನ್ನ ಓದು ನಿಲ್ಲಿಸದೆ ಮುಂದೆ ಸಾಗುತ್ತಾಳೆ. ಕಲಿಯುವುದರಲ್ಲಿ ಸದಾ ಮುಂದೆ, ಹಾಗೂ ಪ್ರತಿಭಾವಂತೆ ವಿದ್ಯಾರ್ಥಿಯಾಗುವ ಲತೀಶಾರಿಗೆ ಸಹಪಾಠಿಗಳು ಹಾಗೂ ಶಿಕ್ಷಕರು ನೋಟ್ಸ್ ನಿಂದಿಡಿದು ಮಾನಸಿಕವಾಗಿ ಬೆಂಬಲವಾಗಿ ನಿಲ್ಲುತ್ತಾರೆ. ಹೈಸ್ಕೂಲ್ ,ಕಾಲೇಜು ಕೊನೆಗೆ ಎಂ.ಕಾಮ್ ಪದವಿಯನ್ನು ಪೂರ್ತಿಗೊಳಿಸಿ ಅಂದುಕೊಂಡು ಮುನ್ನುಗ್ಗಿದ್ದರೆ ಎಲ್ಲವೂ ಸಾಧ್ಯ ಅನ್ನುವ ಮಾತಿಗೆ ಮುನ್ನುಡಿ ಬರೆಯುತ್ತಾರೆ.
ಐ.ಎ.ಎಸ್ ಅಧಿಕಾರಿ ಆಗುವ ಕನಸು : ತನ್ನ ಎಂ.ಕಾಮ್ ಪದವಿಯ ಸಮಯದಲ್ಲೇ ತಾನು ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆನ್ನುವ ಗುರಿಯನ್ನು ಇಟ್ಟುಕೊಳ್ಳುತ್ತಾರೆ. ಅದಕ್ಕಾಗಿ ದಿನ,ತಿಂಗಳು ಹೀಗೆ ಮೂರು ವರ್ಷ ತಯಾರಿ ನಡೆಸಿಕೊಂಡು ನಾಗರಿಕ ಸೇವೆಯಂತಹ ಕಠಿಣ ಪರೀಕ್ಷೆ ಬರೆಯಲು ಸಿದ್ದರಾಗುತ್ತಾರೆ. ತಾನು ವೀಲ್ ಚೇರ್ ನಲ್ಲಿದ್ದೇನೆ ತನಗೆ ಮೂಳೆ ಸಂಬಂಧಿತ ಕಾಯಿಲೆ ಇದೆ,ತಾನು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದೇನೆ,ಸರಿಯಾಗಿ ಎದ್ದು ಕೂರಲು ಆಗದಂತ ಪರಿಸ್ಥಿತಿಯಲ್ಲಿದ್ದೇನೆ ಎನ್ನುವ ಯಾವ ಅಡೆತಡೆಯ ಯೋಚನೆಯೂ ಲತೀಶಾರಿಗೆ ಕಾಡಲಿಲ್ಲ. ಕಾಡಿದ್ದು ತಾನು ಸಾಧಿಸಬೇಕು, ನನ್ನಂತೆ ಇರುವ ಇನ್ನೊಬ್ಬರಿಗೆ ಪ್ರೇರಣೆ ಆಗಬೇಕೆನ್ನುವ ಒಂದೇ ಗುರಿ.
ಆಮ್ಲಜನಕ ಸಿಲಿಂಡರ್ ನೊಂದಿಗೆ ಪರೀಕ್ಷೆ ಕೊಠಡಿ ಪ್ರವೇಶಿದಳು .! : ನಾಗರಿಕ ಸೇವಾ ಪರೀಕ್ಷೆ ಬರೆಯಲು ಕೇರಳದ ಕೊಟ್ಟಾಯಂನ ಪರೀಕ್ಷಾ ಕೇಂದ್ರಕ್ಕೆ ಹೋಗುವ ಲತೀಶಾ ಹಾಗೂ ಆಕೆಯ ಪೋಷಕರಿಗೆ ಪರೀಕ್ಷಾ ನಿಯಮಗಳನ್ನು ಕೇಳಿ ಒಮ್ಮೆ ನಿರಾಶೆ ಉಂಟಾಗುತ್ತದೆ. ಲತೀಶಾಳಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಅವಕಾಶವಿದ್ರೂ ಆಮ್ಲಜನಕ ಸಿಲಿಂಡರ್ ನೊಂದಿಗೆ ಪರೀಕ್ಷೆ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗುವ ಬಗ್ಗೆ ಯಾವ ನಂಬಿಕೆಯೂ ಇರಲಿಲ್ಲ. ಆದರೆ ಇದನ್ನು ಮನಗಂಡ ಅಲ್ಲಿಯ ಪರೀಕ್ಷಾ ಅಧಿಕಾರಿ ಸುಧೀರ್ ಎನ್ನುವವರು ಲತೀಶಾಳಿಗೆ ಆಮ್ಲಜನಕ ಸಿಲಿಂಡರ್ ನೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತಾರೆ. ಇತ್ತೀಚೆಗಷ್ಟೇ ಆಮ್ಲಜನಕ ಸಿಲಿಂಡರ್ ನೊಂದಿಗೆ ಪರೀಕ್ಷೆ ಬರೆದ ಲತೀಶಾ ಅನ್ಸಾರಿ ಎನ್ನುವ ಸುದ್ದಿ ರಾಷ್ಟ್ರ ವ್ಯಾಪಿ ಹರಡುತ್ತದೆ. ನಾಗರಿಕ ಸೇವೆಯ ಮೊದಲ ಪ್ರಯತ್ನವನ್ನು ಲತೀಶಾ ಆತ್ಮವಿಶ್ವಾಸದಿಂದ ಪೂರ್ತಿಗೊಳಿಸಿದ್ದಾರೆ.
ಸಾಧಕಿಯ ಜೊತೆ ಈಕೆ ಸಮಾಜ ಸೇವಕಿ : ಲತೀಶಾ ‘ಅಮೃತ ವರ್ಷಿನಿ’ ಎನ್ನುವ ಸ್ವಯಂ ಸೇವಾ ಸಂಘದ ಸಕ್ರಿಯ ಕಾರ್ಯಕರ್ತೆ. ಇಲ್ಲಿ ಆಕೆ ಸಮಾಜದಲ್ಲಿ ತನ್ನಂತೆ ಮೂಳೆ ರೋಗದಿಂದ ತತ್ತರಿಸುತ್ತಿರುವ ವ್ಯಕ್ತಿಗಳಿಗೆ ಭರವಸೆ ತುಂಬುವ ಸ್ಪೂರ್ತಿದಾಯಕಿ ಆಗಿ ಕಾರ್ಯ ನಿಭಾಯಿಸುತ್ತಿದ್ದಾಳೆ.
ಇಷ್ಟು ಮಾತ್ರವಲ್ಲ ಲತೀಶಾ ಗಾಜಿನ ಚಿತ್ರಗಳನ್ನು ಮಾಡುವ ಕಲಾವಿದೆ.ಇವಳ ಗಾಜಿನ ಚಿತ್ರಗಳಿಗೆ ಬೇಡಿಕೆಯ ಒಟ್ಟಿಗೆ ಸೆಳೆಯುವ ಗುಣವೂ ಇದೆ.ಇದರ ಜೊತೆಗೆ ಕೀಬೋರ್ಡ್ ನುಡಿಸುವ ಕಲೆಯೂ ಇವರಿಗೆ ಕರಗತವಾಗಿದೆ. ಹಲವಾರು ರಿಯಾಲಿಟಿ ಶೋನಲ್ಲಿ ಕೀರ್ಬೋಡ್ ನುಡಿಸುವ ಮೂಲಕ ಹಣ ಸಂಪಾದನೆಯನ್ನು ಮಾಡಿದ್ದಾರೆ. ಇಷೆ ಮಾತ್ರವಲ್ಲದೆ ನಾನಾ ಕಡೆಗಳಿಗೆ ಹೋಗಿ ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ.
ಇದುವರೆಗೆ ಲತೀಶಾಳ ದೇಹದ ಮೂಳೆಗಳು ಸಾವಿರಕ್ಕೂ ಹೆಚ್ಚು ಬಾರಿ ಹಾನಿ ಆಗಿದೆ. ವೈದ್ಯರ ಪ್ರಕಾರ ಇಷ್ಟು ವರ್ಷ ಲತೀಶಾ ಬದುಕಿರೋದೇ ಆಶ್ಚರ್ಯವಂತೆ. ತನ್ನ ಮಗಳ ಚಿಕಿತ್ಸೆಗೆ ಹಣ ಸಂದಾಯ ಮಾಡಲು ಕಷ್ಟವಾಗುತ್ತಿದ್ದರೂ ಇದುವರೆಗೆ ಯಾರ ಬಳಿಯೂ ಕೈ ಚಾಚಿಲ್ಲ, ತಲೆ ತಗ್ಗಿಸಿಲ್ಲ. ತಂದೆ ತಾಯಿ ಪ್ರೀತಿಯ ಮುಂದೆ ಲತೀಶಾ ಆತ್ಮವಿಶ್ವಾಸದಿಂದಲೇ ಬದುಕನ್ನು ಮುನ್ನಡೆಸುತ್ತಿದ್ದಾಳೆ. ಮುಂದೆ ದೊಡ್ಡ ಸಾಧಕಿ ಹಾಗೂ ಸಮಾಜಕ್ಕೊಂದು ಮಾದರಿ ಆದರೆ ಅಚ್ಚರಿ ಏನಿಲ್ಲ..
– ಸುಹಾನ್ ಶೇಕ್