ಆಮಂತ್ರಣ ಪತ್ರಿಕೆಯ ಸಾಫ್ಟ್ ಕಾಪಿ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ; ವಿಡಿಯೋ ಸಂದೇಶ ಕಳುಹಿಸಿ ಮದುವೆಗೆ ಬರಲು ಆಹ್ವಾನ
ಬೆಂಗಳೂರು: ಮದುವೆಯ ಮಮತೆಯ ಕರೆಯೋಲೆ… ಈ ವಾಕ್ಯ ಲಗ್ನ ಪತ್ರಿಕೆಯಲ್ಲಿ ಕವರ್ ಮೇಲೆ ಎದ್ದು ಕಾಣಿಸುತ್ತಿತ್ತು. ಲಗ್ನ ಪತ್ರಿಕೆಯ 4 ಮೂಲೆಗಳ ತುದಿಗೆ ಅರಿಶಿಣ ಹಚ್ಚಿ, ಕವರ್ ಒಳಗೆ ಅಕ್ಷತೆ ಕಾಳು ಹಾಕಲಾಗುತ್ತಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತಿತ್ತು.
ವಿವಾಹ ತಿಂಗಳು ಇರುವಂತೆಯೇ ದೂರದ ಊರುಗಳಿಗೆ ಹೋಗಿ ಮದುವೆಯ ಆಮಂತ್ರಣವನ್ನು ಕೊಟ್ಟು ಬರಲಾಗುತ್ತಿತ್ತು. ಆದರೆ, ಈಗ ಈ ಪದ್ಧತಿ ಕಣ್ಮರೆಯಾಗಿದೆ. ಅಂಗೈನಲ್ಲಿಯೇ ಪ್ರಪಂಚ ಕಾಣುವಂತೆ ಮೊಬೈಲ್‌ನಿಂದಲೇ ಯಾವುದೇ ಮೂಲೆಯಲ್ಲಿರುವವರಿಗೂ ಆಮಂತ್ರಣವನ್ನು ಕಳುಹಿಸಿ, ಮದುವೆಗೆ ಕರೆಯಲಾಗುತ್ತಿದೆ. ಇದರಿಂದಾಗಿ ಮದುವೆ ವೆಡ್ಡಿಂಗ್ ಕಾರ್ಡ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಉದ್ಯಮದ ಮೂಲಗಳ ಪ್ರಕಾರ, ಮದುವೆ ಆಮಂತ್ರಣ ಪತ್ರಿಕೆ ವ್ಯಾಪಾರ ಶೇ.70ರಷ್ಟು ಕುಸಿತ ಕಂಡಿದೆ.
ಕೆಲವು ವರ್ಷಗಳ ಹಿಂದೆ ಮದುವೆಯ ಋತು ಪ್ರಾರಂಭವಾದರೆ ಪತ್ರಿಕೆಯ ಮುದ್ರಕರ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಜತೆಗೆ ಮದುವೆ ಮನೆಗಳಲ್ಲಿ ಎರಡ್ಮೂರು ತಿಂಗಳ ಮುಂಚೆಯಿಂದಲೇ ಸಂಭ್ರಮ ಮನೆ ಮಾಡಿರುತ್ತಿತ್ತು. ಲಗ್ನದ ದಿನಾಂಕ, ಸಮಯವನ್ನು ಬರೆಸಿದ ನಂತರ ಲಗ್ನ ಪತ್ರಿಕೆಯ ವಿನ್ಯಾಸ, ಕಲರ್, ಅಕ್ಷರಗಳ ವಿನ್ಯಾಸದ ಬಗ್ಗೆ ಕುತೂಹಲದಿಂದ ಕೂಡಿರುತ್ತಿತ್ತು. ಜತೆಗೆ ಲಗ್ನ ಪತ್ರಿಕೆ ಮುದ್ರಣದ ನಂತರ ಮನೆಯವರು ಹಾಗೂ ಸಂಬಂಧಿಕರು ಒಟ್ಟಾಗಿ ಆ ಪತ್ರಿಕೆಗಳನ್ನು ಜೋಡಿಸುವುದೇ ಒಂದು ಖುಷಿ. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ಅಥವಾ ಎರಡೇ ದಿನಗಳಲ್ಲಿ ಮದುವೆ ಮುಗಿದು ಹೋಗುತ್ತದೆ.
ಐದಾರು ವರ್ಷಗಳ ಹಿಂದೆ 2000-2,500 ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸುತ್ತಿದ್ದರು. ಈಗ ಕೇವಲ 200ರಿಂದ 300 ಆಮಂತ್ರಣಗಳನ್ನು ಮುದ್ರಿಸಲಾಗುತ್ತಿದೆ. ಮೊದಲು ಫ್ಯಾಮಿಲಿ ಪತ್ರಿಕೆಗಳು ಇದ್ದವು. ಬಳಿಕ ಫ್ರೆಂಡ್ಸ್ ಕಾರ್ಡ್‌ನ ಟ್ರೆಂಡ್ ಶುರುವಾಯಿತು. ಫ್ಯಾಮಿಲಿ ಕಾರ್ಡ್‌ಗಳಿಗಿಂತ ಫ್ರೆಂಡ್ಸ್ ಕಾರ್ಡ್ ಆಕರ್ಷಿತವಾಗಿರುವುದರಿಂದ ತುಸು ಬೆಲೆ ಹೆಚ್ಚಾಗಿರುತ್ತಿತ್ತು. ಆದರೆ ಈಗ, ಮತ್ತಷ್ಟು ಆಕರ್ಷಣೀಯವಾಗಿ ಎಲ್ಲ ಕಾರ್ಡ್‌ಗಳು ಆನ್ ಲೈನ್‌ನಲ್ಲಿಯೇ ಸಿಗಲಿವೆ. ಇದರಿಂದಾಗಿ ನಮ್ಮ ವ್ಯಾಪಾರಕ್ಕೂ ತುಸು ಕುತ್ತು ಬಂದಿದೆ ಎನ್ನುತ್ತಾರೆ ಸುಲ್ತಾನ್‌ಪೇಟೆಯ ಆಮಂತ್ರಣ ಪತ್ರಿಕೆಯ ಮಳಿಗೆಯ ಮಾಲಿಕರೊಬ್ಬರು.
ಈಗ 3ಡಿ ಮುದ್ರಣವೂ ಬಂದಿದೆ. ಕನಿಷ್ಠ 4 ರೂ.ಗಳಿಂದ ಹಿಡಿದು ಲಕ್ಷ-ಕೋಟಿ ರೂ.ವರೆಗಿನ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಬೆಲೆಯ ಕಾರ್ಡ್‌ಗಳನ್ನು ಕಡಿಮೆ ಮುದ್ರಿಸಿ, ಡಿಜಿಟಲ್ ಮೂಲಕ ಕಳುಹಿಸುವವರು ಒಂದೆಡೆಯಾದರೆ, ಸಾವಿರಾರು ರೂ.ಗಳ ಬೆಲೆಯ ಕಾರ್ಡ್‌ಗಳನ್ನು ಮುದ್ರಿಸುವವರೂ ಇದ್ದಾರೆ. ಇದರಿಂದಾಗಿ ಕಾರ್ಡ್‌ಗಳನ್ನು ಕೊಡುವ ನಮೂನೆ ಬದಲಾಗಿದೆ.
7 ವರ್ಷಗಳ ಹಿಂದೆ ಮಗಳ ಮದುವೆ ಮಾಡಿದೆ. ಆಗ ತಲಾ 8 ರೂ.ಗಳಂತೆ ಅಂದಾಜು 2,500 ಲಗ್ನ ಪತ್ರಿಕೆಗಳನ್ನು ಮುದ್ರಿಸಿ, 300 ರಿಂದ 400 ಕಿ.ಮೀ. ದೂರದಲ್ಲಿರುವ ಸ್ನೇಹಿತರಿಗೆ, ಸಂಬಂಧಿಕರಿಗೆ ಹೋಗಿ ಆಮಂತ್ರಿಸಲಾಗಿತ್ತು. ಆದರೆ, ಕಳೆದ ತಿಂಗಳು ಕಿರಿಮಗನ ಮದುವೆ ಮಾಡಲಾಯಿತು. ಆಗ ಸಮೀಪದಲ್ಲಿರುವ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಆಮಂತ್ರಿಸಲು 20 ರೂ.ಗಳಂತೆ ಕೇವಲ 500 ಪತ್ರಿಕೆಗಳನ್ನು ಮುದ್ರಿಸಿ ವಿತರಿಸಲಾಯಿತು. ಉಳಿದಂತೆ ವಾಟ್ಸಾಪ್, ಇ-ಮೇಲ್, ಫೇಸ್‌ಬುಕ್‌ಗಳ ಮೂಲಕ ಇ-ಪತ್ರಿಕೆಯನ್ನು ಹಾಗೂ ನಮಗೆ ಬೇಕಾದ ಫಾಂಟ್, ವಿನ್ಯಾಸದ ಸಾಫ್ಟ್ ಕಾಪಿಯನ್ನು ಕಳುಹಿಸಿ, ಫೋನ್ ಮೂಲಕ ಕರೆಯಲಾಯಿತು. ಇದರಿಂದಾಗಿ ಮುದ್ರಣದ ವೆಚ್ಚ, ಹೋಗಿ- ಬರುವ ಪ್ರವಾಸದ ವೆಚ್ಚದ ಜತೆಗೆ ನಮ್ಮ ಸಮಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲಾಯಿತು ಎನ್ನುತ್ತಾರೆ ಬೆಂಗಳೂರಿನ ಸದಾಶಿವನಗರದ ನಿವಾಸಿ ಮಂಜುನಾಥ್.
ಪ್ರೀ-ವೆಡ್ಡಿಂಗ್ ಶೂಟ್‌ನಲ್ಲೂ ಆಹ್ವಾನ
ಇತ್ತೀಚಿನ ದಿನಗಳಲ್ಲಿ ದೇವಸ್ಥಾನ, ಬೀಚ್, ಗುಡ್ಡ-ಬೆಟ್ಟ, ಜಲಪಾತ, ರೆಸಾರ್ಟ್, ಶೂಟಿಂಗ್ ಸ್ಪಾಟ್‌ಗಳು ಸೇರಿದಂತೆ ಇತ್ಯಾದಿ ಸ್ಥಳಗಳಲ್ಲಿ ಮದುವೆ ಮುಂಚಿತವಾಗಿಯೇ ಫೋಟೋ ಹಾಗೂ ವಿಡಿಯೋ ಚಿತ್ರಿಕರಿಸುವ ಮೂಲಕ ಪ್ರೀ-ವೆಡ್ಡಿಂಗ್ ಶೂಟ್ ಮಾಡುವುದು ಟ್ರೆಂಡ್ ಆಗಿದೆ.
ಈ ಫೋಟೋ ಹಾಗೂ ವಿಡಿಯೋಗಳ ಮೂಲಕವೇ ಮದುವೆಯ ದಿನಾಂಕವನ್ನು ಸೇರಿಸಿ “ಸೇವ್ ದಿ ಡೇಟ್’ ಎಂದು ಹಾಕಿ ವಾಟ್ಸಾಪ್, ಇನ್‌ಸ್ಟಾಗಳಲ್ಲಿ ಸ್ಟೋರಿ ಹಾಕಿಕೊಳ್ಳಲಾಗುತ್ತದೆ. ಜತೆಗೆ ಅದೇ ವಿಡಿಯೋವನ್ನು ವಾಟ್ಸಾಪ್, ಇನ್‌ಸ್ಟಾ ಗ್ರೂಪ್‌ಗಳಿಗೆ ಕಳುಹಿಸಿ ಅಥವಾ ವಿಡಿಯೋ ಸಂದೇಶಗಳ ಮೂಲಕ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಮದುವೆಗೆ ಆಹ್ವಾನಿಸಲಾಗುತ್ತದೆ.
ಕಾರ್ಡ್‌ಗಳ ಜತೆಗೆ ದುಬಾರಿ ಗಿಫ್ಟ್
ಇತ್ತೀಚಿನ ವರ್ಷಗಳಲ್ಲಿ ಹೈ ಪ್ರೊಫೈಲ್ ಮದುವೆಗಳ ಆಮಂತ್ರಣ ಪತ್ರಿಕೆಯೇ ಅದ್ಧೂರಿ, ಆಕರ್ಷಕವಾಗಿರುತ್ತದೆ. ದುಬಾರಿ ವೆಚ್ಚದ ವೆಡ್ಡಿಂಗ್ ಕಾರ್ಡ್ ಬಾಕ್ಸ್ ಮಾಡಿಸಿ, ಅದರಲ್ಲಿ ಡ್ರೈಫ್ರೋಟ್ಸ್ , ತರಹೇವಾರಿ ತಿನಿಸಿಗಳನ್ನು ಇರಿಸಿ ಆಹ್ವಾನ ನೀಡಲಾಗುತ್ತಿದೆ. ಇನ್ನು ಮುಂದುವರಿದು, ಆಮಂತ್ರಣ ಪತ್ರಿಕೆ ಜೊತೆಗೆ ಬೆಲೆ ಬಾಳುವ ವಿಗ್ರಹ, ಬಟ್ಟೆಯನ್ನು ಇರಿಸಿ ಸಂಬಂಧಿಕರು, ಆತ್ಮೀಯರಿಗೆ ಹಂಚುವ ಟ್ರೆಂಡ್ ಶುರುವಾಗಿದೆ. ಅಲ್ಲದೇ ವೆಡ್ಡಿಂಗ್ ಕಾರ್ಡ್ ನ ಒಳಗೆ ಸಸಿಗಳ ಬೀಜವನ್ನು ಕಾಣದಂತೆ ಇರಿಸಿ ಕೊಡಲಾಗುತ್ತದೆ. ವಿವಾಹ ನಂತರ ಆ ಕಾರ್ಡ್ ಅನ್ನು ಕುಂಡ ಅಥವಾ ಮಣ್ಣಿನಲ್ಲಿ ಹೂಳಿದರೆ ಸಸಿ ಬೆಳೆಯುತ್ತದೆ. ಈ ರೀತಿಯ ಪರಿಸರ ಸ್ನೇಹಿ ಕಾರ್ಡ್‌ಗಳೂ ಬಂದಿವೆ.
■
ಭಾರತಿ ಸಜ್ಜನ್