Advertisement
ಮಂಡ್ಯದಲ್ಲಿ ಇದು ನಡೆಯುತ್ತಿರುವ 3ನೇ ಸಾಹಿತ್ಯ ಸಮ್ಮೇಳನ. 1974ರ ಮೇ 31, ಜೂ.1 ಹಾಗೂ 2 ರಂದು ಮೊದಲ ಸಮ್ಮೇಳನ ನಡೆದಿತ್ತು. ಆಗ ಕವಿಯತ್ರಿ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷತೆ ವಹಿಸಿದ್ದರು. 2ನೇ ಬಾರಿಗೆ ಅಂದರೆ, 1994ರ ಫೆ.11, 12 ಹಾಗೂ 13ರಂದು ಚದುರಂಗ ಅವರ ಸರ್ವಾಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನುಡಿಜಾತ್ರೆ ಜರಗಿತ್ತು.
Related Articles
Advertisement
ಮೆರವಣಿಗೆ ವೇಳೆ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಸಿಂಹಾಸನ ಮಾದರಿಯ ದರ್ಬಾರ್ ರಥದಲ್ಲಿ ಕುಳಿತುಕೊಳ್ಳಲಿದ್ದಾರೆ. ರಥದ ಮಧ್ಯಭಾಗದಲ್ಲಿ ಸಿಂಹಾಸನ ಇರಲಿದೆ. ದರ್ಬಾರ್ ಸಿಂಹಾ ಸನದ ಮೇಲೆ ಛತ್ರಿ ಅಳವಡಿಸಲಾಗಿದ್ದು, ಪಕ್ಕ ನವಿಲು ಹಾಗೂ ಮುಂದೆ ಸಿಂಹಗಳ ಮೂರ್ತಿಯನ್ನು ಜೋಡಿಸಲಾಗುತ್ತಿದೆ. ರಥದ ಸುತ್ತ ಹೊಯ್ಸಳ ಶೈಲಿಯ ಶಿಲ್ಪ ಕಲಾ ಮಾದರಿ ವಿನ್ಯಾಸ ಮಾಡಲಾಗಿದೆ. ರಥದ ಮುಂಭಾಗದಲ್ಲಿ ಮಂಡ್ಯದ ಜೀವ ನದಿ “ಕಾವೇರಿ’ ಮಾತೆ ಪ್ರತಿಮೆ ಅಳ ವಡಿಸಲಾಗಿದೆ. ರಥದ ಎಡಬದಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಬಲಬದಿಯಲ್ಲಿ 7 ತಾಲೂಕುಗಳ ಪ್ರವಾಸಿ ತಾಣಗಳ ದೃಶ್ಯಗಳನ್ನು ಜೋಡಿಸಲಾಗಿದೆ.
ನಿತ್ಯ 1 ಲಕ್ಷ ಮಂದಿಗೆ ಊಟ!
ನಿತ್ಯ ಸುಮಾರು 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗು ತ್ತದೆ. 1 ಲಕ್ಷ ಹೋಳಿಗೆ, 1 ಲಕ್ಷ ಲಾಡು, 1 ಲಕ್ಷ ಬಾದೂಷ, 50,000 ಕೊಬ್ಬರಿ ಮಿಠಾಯಿ, 50,000 ಡ್ರೈ ಜಾಮೂನು, 30,000 ಜನರಿಗೆ ಆಗುವಂತೆ ಕ್ಯಾರೆಟ್ ಹಲ್ವ ತಯಾ ರಿ ಸ ಲಾ ಗುತ್ತಿದೆ. ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಮುದ್ದೆ, ಹೋಳಿಗೆ, ರಾಗಿ ದೋಸೆ ಸೇರಿ ವಿವಿಧ ಖಾದ್ಯಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ದೃಷ್ಟಿವಿಹೀನ ಕವಿಗಳ ಗೋಷ್ಠಿ
ಇದೇ ಮೊದಲ ಬಾರಿಗೆ ದೃಷ್ಟಿವಿಹೀನ ಕವಿಗಳ ವಿಚಾರಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಯನ್ನು ಮಧ್ಯಾಹ್ನ 3.30ರಿಂದ 4.30ರ ವರೆಗೆ ಹಮ್ಮಿಕೊಳ್ಳಲಾಗಿದೆ. 10 ಮಂದಿ ದೃಷ್ಟಿವಿಹೀನ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಬಹುಹಿಂದಿನಿಂದಲೂ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ದೃಷ್ಟಿವಿಹೀನರ ಕೊರಗನ್ನು ನೀಗಿಸುವ ಪ್ರಯತ್ನಕ್ಕೆ ಸಮ್ಮೇಳನ ಸಾಕ್ಷಿಯಾಗಲಿದೆ.
ಬಿದಿರಿನ ಬುಟ್ಟಿಯಲ್ಲಿ ಪುಸ್ತಕ ಮೆರವಣಿಗೆ
ಮೆರವಣಿಗೆ ವೇಳೆ “ವೈಚಾರಿಕತೆಗೆ ಮಹಿಳಾ ನಡೆ’ ಎಂಬ ಹಿನ್ನೆಲೆಯಲ್ಲಿ ಮಹಿಳಾ ಸಮಿತಿಯಿಂದ 87 ಮಹಿಳೆಯರು ವೈವಿಧ್ಯಮಯ ಪುಸ್ತಕಗಳು, ಕನ್ನಡ ಬಾವುಟ ಹಾಗೂ ಸಾಹಿತ್ಯ ಪರಿಷತ್ತಿನ ಚಿಹ್ನೆಗಳನ್ನು ಹಿಡಿದು ಬಿದಿರಿನ ಬುಟ್ಟಿಯನ್ನು ಹೊತ್ತು ಸಾಗಲಿದ್ದಾರೆ. ಬುಟ್ಟಿಯಲ್ಲಿ ಸಾಧಕರು, ಸಾಹಿತಿಗಳು, ಮಹಿಳಾ ಸಾಹಿತಿಗಳು, ವಿಜ್ಞಾನ, ಅಭಿನಂದನಾ ಗ್ರಂಥ, ಇತಿಹಾಸಕಾರರ ಪುಸ್ತಕಗಳು ಇರಲಿವೆ.
18 ದೇಶಗಳ ಕನ್ನಡಿಗರು ಭಾಗಿ
ಸಮ್ಮೇಳನದಲ್ಲಿ 18 ದೇಶಗಳ ಸುಮಾರು 200ಕ್ಕೂ ಹೆಚ್ಚು ವಿದೇಶಿ ಮೂಲದ ಕನ್ನಡಿಗರು ಭಾಗವಹಿಸುತ್ತಿ ರುವುದು ವಿಶೇಷ. ಸಮ್ಮೇಳನಕ್ಕೆ ಅಮೆರಿಕ, ಆಸ್ಟ್ರೇ ಲಿಯಾ, ಯುರೋಪ್, ರಷ್ಯಾ ಸೇರಿ ನಾನಾ ದೇಶ ಗಳಲ್ಲಿರುವ ಕನ್ನಡಿಗರು ಆಗಮಿಸುತ್ತಿದ್ದಾರೆ. ಪುತಿನ ಅವರ ಪುತ್ರಿ ಅಲಮೇಲು, ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಮೊಮ್ಮಗಳು ನಿರ್ಮಲಾ ಕರ್ಪೂರ, ಫರ್ಡಿನೆಂಡ್ ಕಿಟಲ್ ಅವರ ವಂಶಸ್ಥರು ಬರುತ್ತಿರುವುದು ವಿಶೇಷ.
ʼಪೊಲೀಸ್ ಬ್ಯಾಂಡ್‘ಗೂ ಅವಕಾಶ
ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.22ರ ಸಂಜೆ 6ಕ್ಕೆ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಮೇಳೈಸಲಿದೆ. ಸಮ್ಮೇಳ ನದ ಕೊನೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪೊಲೀಸ್ ಬ್ಯಾಂಡ್‌ನಿಂದ 45 ನಿಮಿಷಗಳ ಕಾಲ 10ಕ್ಕೂ ಹೆಚ್ಚು ಹಾಡುಗಳಿಗೆ ವಾದ್ಯವೃಂದದವರು ಸಂಗೀತ ಪ್ರಸ್ತುತಪಡಿಸಲಿದ್ದಾರೆ. ದಾಸರ ಕೀರ್ತನೆಗಳು, ಭಕ್ತಿ ಗೀತೆಗಳು, ಕನ್ನಡದ ಗೀತೆಗಳು ಸೇರಿ 10ಕ್ಕೂ ಹೆಚ್ಚು ಗೀತೆಗಳನ್ನು ನುಡಿಸಲಿದ್ದಾರೆ.
ಅನಿವಾಸಿ ಕನ್ನಡಿಗರಿಂದ ವಿಶೇಷ ಗೋಷ್ಠಿ ಇದೇ ಮೊದಲ ಬಾರಿಗೆ ಅನಿವಾಸಿ ಕನ್ನಡಿಗರಿಂದ ವಿಶೇಷ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಡಿ.22ರಂದು ರವಿವಾರ ಬೆಳಗ್ಗೆ 9.30ರಿಂದ “ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ’ ಗೋಷ್ಠಿ ನಡೆಯಲಿದೆ. ಅಮೆರಿಕದ ಅಮರನಾಥ ಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಹ್ರೈನ್‌ನ ಕಿರಣ್ ಉಪಾಧ್ಯಾಯ, ಕತಾರ್‌ನ ಎಚ್.ಕೆ.ಮಧು, ಇಂಗ್ಲೆಂಡ್‌ನ ಅಶ್ವಿನ್ ಶೇಷಾದ್ರಿ, ಯುಎಇಯ ಶಶಿಧರ ನಾಗರಾಜಪ್ಪ , ಜರ್ಮನಿಯ ರಶ್ಮಿ ನಾಗರಾಜ್ ತಮ್ಮ ಪ್ರಬಂಧ ಮಂಡಿಸಲಿದ್ದಾರೆ.
ಪ್ರತಿನಿಧಿಗಳಿಗೆ ಸಿಹಿ ಬೆಲ್ಲ ಕಾಣಿಕೆ
ಆಗಮಿಸುವ ಎಲ್ಲ ಸದಸ್ಯರಿಗೆ ಜಿಲ್ಲೆಯ ಸವಿ ನೆನಪಿಗಾಗಿ ಸಾವಯವ ಬೆಲ್ಲ ವಿತರಿಸುತ್ತಿ ರುವುದು ಸಮ್ಮೇಳನದ ವಿಶೇಷ. ಒಟ್ಟು 7 ಸಾವಿರ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಎಲ್ಲ ಪ್ರತಿನಿಧಿ ಗಳಿಗೆ ಹಾಗೂ ಗಣ್ಯರಿಗೆ ಅರ್ಧ ಕೆ.ಜಿ. ಬೆಲ್ಲ ನೀಡಲಾಗುತ್ತದೆ.
ನುಡಿ ಜಾತ್ರೆಯಲ್ಲಿ “ಸ್ವರ ಯಾತ್ರೆ‘ ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.21ರಂದು ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.22ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಂಡ್ಯದ ಕನ್ನಡದ ಕಟ್ಟಾಳುಗಳ ಪಟ್ಟಿ
ಡಾ| ಅಂಬರೀಷ್, ನಟ
ಎಸ್.ಎಂ.ಕೃಷ್ಣ, ಮಾಜಿ ಸಿಎಂ
ಜಿ. ಮಾದೇಗೌಡ, ಹೋರಾಟಗಾರ
ಬಿ.ಎಂ.ಶ್ರೀಕಂಠಯ್ಯ, ಸಾಹಿತಿ
ಎ.ಎನ್.ಮೂರ್ತಿರಾವ್, ಸಾಹಿತಿ
ಕೆ.ಎಸ್.ನರಸಿಂಹಸ್ವಾಮಿ, ಕವಿ
ತ್ರಿವೇಣಿ, ಕಾದಂಬರಿಕಾರ್ತಿ
ಬಿ.ಸಿ.ರಾಮಚಂದ್ರ ಶರ್ಮ, ಕವಿ
ಜಿ.ನಾರಾಯಣ, ವಿದ್ವಾಂಸ
ವೇದಿಕೆಗಳು
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ
ಕರ್ನಾಟಕ ಚಕ್ರವರ್ತಿ ಚಿಕ್ಕ ದೇವರಾಜ ಒಡೆಯರ್ ಸಮಾನಾಂತರ ವೇದಿಕೆ- 1
ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞೆ ತ್ರಿವೇಣಿ ಸಮಾನಾಂತರ ವೇದಿಕೆ- 2
ಮಂಡ್ಯ ಜಿಲ್ಲೆಯ ವಿಶೇಷತೆಗಳು
- ಅತೀ ಹೆಚ್ಚು ಕನ್ನಡಿಗರಿರುವ ಜಿಲ್ಲೆ: ರಾಜ್ಯದ ಯಾವುದೇ ಜಿಲ್ಲೆಗೆ ಹೋಲಿಸಿದರೆ ಕನ್ನಡಿಗರು ಹೆಚ್ಚು ಇರುವುದು ಇಲ್ಲಿ. ಮಂಡ್ಯದಲ್ಲಿರುವ ಜನರಲ್ಲಿ ಶೇ.95ರಷ್ಟು ಕನ್ನಡಿಗರು. ಪರಭಾಷಿಕರ ಸಂಖ್ಯೆ ಶೇ.5 ಮಾತ್ರ!
- ಒರಟು ಭಾಷೆ, ಮೃದು ಹೃದಯ: ಯಾಕ್ಲಾ?… ಹೋಗ್ಲಾ… ಬರ್ಲಾ ಎಂಬ ವಿಭಿನ್ನ ಶೈಲಿಯ ಭಾಷಾ ಸೊಗಡನ್ನು ಹೊಂದಿರುವಂಥ ಮಂಡ್ಯ ಜಿಲ್ಲೆಯಲ್ಲಿ ನಮ್ಮ ಕನ್ನಡತನ ಇನ್ನೂ ಜೀವಂತವಾಗಿದೆ. ಇಲ್ಲಿನ ಮಾತು ಒರಟಾಗಿದ್ದರೂ, ಕೇಳಲು ಬಲು ಸೊಗಸು.
- ಕಾವೇರಿ ಜೀವನಾಡಿ: ಕಾವೇರಿ ನದಿಯಿಂದ ಜಿಲ್ಲೆ ಹಸುರಾಗಿದ್ದು, ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜಸಾಗರ ಜಲಾಶಯ ವಿಶ್ವ ಪ್ರಸಿದ್ಧಿ ಹೊಂದಿದೆ.
- ಕಬ್ಬಿನ ನಾಡು: ಜಿಲ್ಲೆಯ ರೈತರ ಆರ್ಥಿಕತೆಯ ಮೂಲವಾಗಿರುವ ಕಬ್ಬು ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 40,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ.
- ಸಕ್ಕರೆ ಬೀಡು: ಜಿಲ್ಲೆಯಾದ್ಯಂತ 5 ಸಕ್ಕರೆ ಕಾರ್ಖಾನೆಗಳಿದ್ದು, ಸಕ್ಕರೆ ಉತ್ಪಾದಿಸುವ ಮೂಲಕ ಸಕ್ಕರೆ ಜಿಲ್ಲೆಯಾಗಿಯೂ ಮಂಡ್ಯ ಪ್ರಸಿದ್ಧಿ ಪಡೆದಿದೆ. ಸಕ್ಕರೆ ಕಾರ್ಖಾನೆಗಳ ಜತೆಗೆ ಆಲೆಮನೆಗಳೂ ಬೆಲ್ಲವನ್ನು ಉತ್ಪಾದಿಸುತ್ತಿವೆ.
- ಮದ್ದೂರು ವಡೆ: 1917ರಲ್ಲಿ ರಾಮಚಂದ್ರ ಬುಧ್ಯ ಅವರು ಮದ್ದೂರು ರೈಲು ನಿಲ್ದಾಣದಲ್ಲಿ ಪರಿಚಯಿಸಿದ್ದ ಮದ್ದೂರು ವಡೆ ಈಗ ಫೇಮಸ್. ಈ ಖಾದ್ಯ ಮೈಸೂರು ರಾಜಮನೆತನದವರಿಗೆ ಬಹಳ ಅಚ್ಚುಮೆಚ್ಚು.
- ನಾಗಮಂಗಲದ ಬೆಣ್ಣೆ: ಗುಣಮಟ್ಟದ ಬೆಣ್ಣೆ ತಯಾರಿಗೆ ಹೆಸರುವಾಸಿಯಾದ ನಾಗಮಂಗಲ ತಾಲೂಕು ಹಲವು ರೈತರ ಜೀವನೋಪಾಯಕ್ಕೆ ಆಧಾರವಾಗಿದೆ. ತಾಲೂಕಿನ ಬಿಂಡಿಗನವಿಲೆ, ಬೆಳ್ಳೂರು, ಕದಬಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ರೈತರು ಗುಣಮಟ್ಟದ ಬೆಣ್ಣೆ ತಯಾರಿಸಿ ಮಾರಾಟ ಮಾಡುವ ಮೂಲಕ ತಮ್ಮ ಬದುಕಿನ ಆದಾಯಕ್ಕೆ ದಾರಿ ಮಾಡಿಕೊಂಡಿದ್ದಾರೆ. ■ ಮೋಹನ್‌ಕುಮಾರ್ .ಎಚ್.ಆರ್.