Advertisement
ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಕ್ಷೇತ್ರವನ್ನು ಆಳಿದ್ದ, ಹಳ್ಳಿ ಮಟ್ಟಕ್ಕೂ ತಲುಪಲು ಕಾರಣವಾಗಿದ್ದ ಭಾರತೀಯ ಸಂಚಾರ ನಿಗಮ ಲಿ. (ಬಿಎಸ್‌ಎನ್‌ಎಲ್) ಎಷ್ಟು ಉತ್ತುಂಗದಲ್ಲಿತ್ತೋ ಅಷ್ಟೇ ಪಾತಾಳಕ್ಕೂ ಜಾರಿದ್ದು ನಿಜ. ಬಳಿಕ ಮೇಲೇಳಲು ಸಾಕಷ್ಟು ತಿಣುಕಾಟವನ್ನು ನಡೆಸಿದೆ. ಈಗ ಮತ್ತೆ ಪುಟಿಯಲು ಸಿದ್ಧವಾಗಿದೆ. ತನ್ನ ಅಸ್ತಿತ್ವಕ್ಕಾಗಿ ಹೋರಾಟಕ್ಕೆ ಮುಂದಾಗಿದೆ. ಇದರ ಪುನರುತ್ಥಾನಕ್ಕೆ ಕೇಂದ್ರ ಸರಕಾರಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ, ಕೈಗೊಳ್ಳು ತ್ತಲೂ ಇದೆ. ಈಗ ಬಿಎಸ್ಸೆನ್ನೆಲ್ ತೋರುತ್ತಿರುವ ಬದ್ಧತೆ, ಪ್ರದರ್ಶನವು ಇದೇ ಗತಿಯಲ್ಲಿ ಸಾಗಿದ್ದೇ ಹೌದಾದಲ್ಲಿ ಖಂಡಿತ ತನ್ನ ಹಳೇ ವೈಭವಕ್ಕೆ ಮರಳಲಿದೆ.
Related Articles
Advertisement
2008-2010ರ ಅವಧಿಯಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಖಾಸಗಿ ಟೆಲಿಕಾಂ ಕಂಪೆನಿಗಳು ಪ್ರವೇಶ ಪಡೆದವು. ಗ್ರಾಹಕರನ್ನು ಸೆಳೆಯಲು ಈ ಕಂಪೆನಿಗಳು ಆಫರ್‌ಗಳ ಮೇಲೆ ಆಫರ್‌ಗಳನ್ನು ನೀಡಿದವು. ಉತ್ತಮ ಸೇವೆಗಳನ್ನು ನೀಡಲಾರಂಭಿಸಿದವು. ಬಳಿಕದ ವರ್ಷಗಳಲ್ಲಿ 4ಜಿ/5ಜಿ ಸೇವೆಗಳನ್ನು ನೀಡಲು ಪ್ರಾರಂಭಿಸಿದವು. ಆದರೆ, ಏರ್‌ಟೆಲ್ ಸೇರಿ ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡಲು ಬಿಎಸ್ಸೆನ್ನೆಲ್‌ಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಗ್ರಾಹಕರನ್ನು ದಿನೇ ದಿನೆ ಕಳೆದುಕೊಳ್ಳತೊಡಗಿತು. ಅದೂ ಅಲ್ಲದೆ, 2ಜಿಯಲ್ಲೇ ಬಹುತೇಕ ಸಮಯ ಕಳೆದುಬಿಟ್ಟಿತು. 4ಜಿ ತಂತ್ರಜ್ಞಾನವನ್ನು ತಡವಾಗಿ ಅಳವಡಿಸಿಕೊಂಡು ಮಾರುಕಟ್ಟೆ ಯನ್ನು ಪ್ರವೇಶಿಸಿತಾದರೂ ಅಷ್ಟರಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಪಾರುಪತ್ಯವನ್ನು ಸಾಧಿಸಿದ್ದವು.
ಮೂಡಿದ ಹೊಸ ಭರವಸೆ
ಇತ್ತೀಚಿನ ಕೆಲವು ವರ್ಷಗಳಲ್ಲಿ ಏರ್‌ಟೆಲ್, ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್ ಮುಂದಾಗುತ್ತಿದೆ. ಇಷ್ಟು ವರ್ಷಗಳವರೆಗೆ ಸಾಲದ ಸುಳಿಯಲ್ಲಿದ್ದ ಸಂಸ್ಥೆ, 3 ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ತನ್ನ ಸಾಲವನ್ನು ತೀರಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ 2022ರ ಮಾರ್ಚ್ 31ರ ವೇಳೆಗೆ 40,400 ಕೋಟಿ ರೂ. ಇದ್ದ ಸಾಲವು, 2023ರ ಮಾರ್ಚ್ 31ರ ವೇಳೆಗೆ 28,092 ಕೋಟಿ ರೂ.ಗೆ ಇಳಿಕೆಯಾಗಿದೆ. ಅದೇ 2024 ಮಾರ್ಚ್ 31ರ ವೇಳೆಗೆ 23,297 ಕೋಟಿ ರೂ. ಗೆ ಸಾಲದ ಪ್ರಮಾಣ ಇಳಿದಿದೆ.
2 ವರ್ಷಕ್ಕೆ ಆದಾಯ ಗುರಿ!
2025 ಮತ್ತು 2026ನೇ ಸಾಲಿನಲ್ಲಿ ಆರ್ಥಿಕ ಪ್ರಗತಿ ಸಾಧಿಸುವ ಗುರಿಯನ್ನು ಬಿಎಸ್ಸೆನ್ನೆಲ್ ಹಾಕಿಕೊಂಡಿದೆ. 2025ರಲ್ಲಿ 24,428 ಕೋಟಿ ಮತ್ತು 2026ನೇ ಸಾಲಿನಲ್ಲಿ 28,476 ಕೋಟಿ ಆದಾಯ ಗುರಿ ಹೊಂದಲಾಗಿದೆ. ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಯಾಗಿದೆ. ಈಚೆಗೆ ಖಾಸಗಿ ಕಂಪೆನಿಗಳು ತಮ್ಮ ರೀಚಾರ್ಜ್ ಪ್ಲ್ರಾನ್‌ಗಳ ದರವನ್ನು ಹೆಚ್ಚಳ ಮಾಡಿದ ಬಳಿಕ ಲಕ್ಷಾಂತರ ಮಂದಿ ಬಿಎಸ್ಸೆನ್ನೆಲ್‌ನತ್ತ ಮುಖ ಮಾಡಿದ್ದಾರೆ. ಟ್ರಾಯ್ ಪ್ರಕಾರ, 2024ರ ಜುಲೈಯಲ್ಲಿ 29.4 ಲಕ್ಷ ಗ್ರಾಹಕರು ಹಾಗೂ ಆಗಸ್ಟ್‌ನಲ್ಲಿ 25 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದರೆ, ಸೆಪ್ಟಂಬರ್‌ನಲ್ಲಿ 8 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ಹೀಗಾಗಿ ಬಿಎಸ್ಸೆನ್ನೆಲ್‌ನ ಒಟ್ಟು ಗ್ರಾಹಕರ ಸಂಖ್ಯೆ 9.19 ಕೋಟಿಗೆ ತಲುಪಿದೆ. ಜಿಯೋ ಬಳಿ 46 ಕೋಟಿ ಚಂದಾ ದಾರರಿದ್ದರೆ, ಏರ್‌ಟೆಲ್ ಬಳಿ 38 ಕೋಟಿ ಹಾಗೂ ವೋಡಾ ಫೋನ್ ಬಳಿ 21 ಕೋಟಿ ಚಂದಾದಾರರಿದ್ದಾರೆ.
ಪುನಃಶ್ಚೇತನಕ್ಕೆ ಕ್ರಮ
1. 3.2 ಲಕ್ಷ ಕೋಟಿ ಪ್ಯಾಕೇಜ್
ಬಿಎಸ್ಸೆನ್ನೆಲ್ ಪುನಃಶ್ಚೇತನಕ್ಕೆ ಕೇಂದ್ರ ಸರಕಾರವು ಈವರೆಗೆ 3.2 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡಿದೆ. 2019ರಲ್ಲಿ 69,000 ಕೋಟಿ ರೂ., 2022ರ ಜುಲೈಯಲ್ಲಿ 1.64 ಲಕ್ಷ ಕೋಟಿ ರೂ., 2023ರ ಜೂನ್‌ನಲ್ಲಿ 89,047 ಕೋಟಿ ರೂ. ಪ್ಯಾಕೇಜ್ ನೀಡಿದೆ. ಇದರಲ್ಲಿ 4 ಜಿ -5 ಜಿ ಸ್ಪೆಕ್ಟ್ರಮ್ ಹಂಚಿಕೆಯೂ ಸೇರಿದೆ.
2. ಮೂಲಸೌಕರ್ಯಕ್ಕೆ ಹೂಡಿಕೆ
ಖಾಸಗಿ ಕಂಪೆನಿಗಳು 4ಜಿ ಸೇವೆ ಪ್ರಾರಂಭಿಸಿ 8 ವರ್ಷಗಳ ಬಳಿಕ ಕಾಲಿಡುತ್ತಿರುವ ಬಿಎಸ್ಸೆನ್ನೆಲ್, 4ಜಿ ಮತ್ತು 5ಜಿ ಸೇವೆಗಳಲ್ಲಿ ಭಾರೀ ಹಿಂದಿದೆ. ಹೀಗಾಗಿ 4ಜಿ ಸೇವೆಗಳನ್ನು ಈಗಾಗಲೇ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟಾಟಾ ಕನ್‌ಸಲ್ಟೆನ್ಸಿ ಸರ್ವೀಸಸ್ ಮತ್ತು ಎಲ್‌ಆ್ಯಂಡ್‌ಟಿ ಟೆಕ್ ಸರ್ವಿಸಸ್ ಕಂಪೆನಿಗಳ ಜತೆ ಸಹಭಾಗಿತ್ವ ಹೊಂದಿದೆ.
3. ಗ್ರಾಮೀಣ ಸಂಪರ್ಕ
ಗ್ರಾಮೀಣ ಭಾಗದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಯನ್ನು ವಿಸ್ತರಿಸಿರುವ ಬಿಎಸ್ಸೆನ್ನೆಲ್‌ನ ಯೋಜನೆಗೆ ಸರಕಾರ ಸಹಾಯ ಮಾಡುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಲು ಮುಂದಾಗಿದೆ.
4. ವಿಆರ್‌ಎಸ್ ಯೋಜನೆ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ಬಿಎಸ್ಸೆನ್ನೆಲ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾನವ ಸಂಪನ್ಮೂಲ ಇದೆ. ಇದು ಭಾರೀ ವೆಚ್ಚಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಆರ್‌ಎಸ್ ಪಡೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ.
5. ತಂತ್ರಜ್ಞಾನ ಅಳವಡಿಕೆ
ಇದು 5ಜಿ ಯುಗ ಆಗಿದ್ದರಿಂದ ಸಾಕಷ್ಟು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. 1 ಲಕ್ಷಕ್ಕೂ ಅಧಿಕ ಆರ್‌ಎಎನ್ (ರೇಡಿಯೋ ಆ್ಯಕ್ಸೆಸ್ ನೆಟ್‌ವರ್ಕ್ – ಸೆಲ್ಯುಲರ್ ರೇಡಿಯೋ ನೆಟ್‌ವರ್ಕ್) ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಈ ಮೂಲಕ ತರಂಗಾಂತರಗಳು ಮೊಬೈಲ್ ನೆಟ್‌ವರ್ಕ್ ಗಳಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶವಿದೆ.
ಮುಂದಿರುವ ಸವಾಲು
1. ಖಾಸಗಿ ಕಂಪೆನಿಗಳ ಜತೆ ಸ್ಪರ್ಧೆ
ಜಿಯೋ, ಏರ್‌ಟೆಲ್, ವೋಡಾಫೋನ್ ಗಳಂಥ ದೈತ್ಯ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡಬೇಕಾದ ಅನಿವಾರ್ಯತೆ ಇದೆ. ಈ ಕಂಪೆನಿಗಳಲ್ಲಿ ಹೆಚ್ಚು ಆಕರ್ಷಕ ರಿಯಾಯಿತಿಗಳ (ಒಟಿಟಿ ಸೇವೆ ಸಹಿತ) ರಿಚಾರ್ಜ್ ಪ್ಲ್ರಾನ್‌ಗಳಿವೆ. ಈ ನಿಟ್ಟಿನಲ್ಲಿ ಗಮನಹರಿಸುವುದು.
2. ತಂತ್ರಜ್ಞಾನಗಳ ಸುಧಾರಣೆ
4ಜಿ ಮತ್ತು 5ಜಿ ತಂತ್ರಜ್ಞಾನಗಳ ಅಳವಡಿಕೆಯನ್ನು ಚುರುಕುಗೊಳಿಸಬೇಕಿದೆ. ಏಕೆಂದರೆ ಖಾಸಗಿ ಕಂಪೆನಿಗಳು 5ಜಿ ಸೇವೆಯನ್ನು ಆರಂಭಿಸಿದ್ದರೆ, ಬಿಎಸ್ಸೆನ್ನೆಲ್ ಇನ್ನೂ 4ಜಿ ಪೂರ್ಣಗೊಳಿಸುವ ಹಂತದಲ್ಲಿದೆ.
3. ಆರ್ಥಿಕ ಹೊರೆ ತಗ್ಗಿಸುವುದು
ಹೆಚ್ಚು ಕಾರ್ಯಾಚರಣ ವೆಚ್ಚ, ಹಳೇ ಬಾಕಿ ಪಾವತಿಗಳು ಬಿಎಸ್ಸೆನ್ನೆಲ್‌ನ ಆರ್ಥಿಕ ಸ್ಥಿತಿಗತಿಗೆ ಮತ್ತಷ್ಟು ಹೊರೆಯಾಗಿದೆ. ಇದು ಮೂಲಸೌಕರ್ಯಗಳ ಮೇಲಿನ ಹೂಡಿಕೆಗೆ ತೊಡಕಾಗಿದೆ. ಜತೆಗೆ ಹೊಸ ಯೋಜನೆಗಳೊಂದಿಗೆ ಮುನ್ನುಗ್ಗಲು ಅಡ್ಡಿಪಡಿಸುತ್ತದೆ.
4. ಇನ್ನೂ ಹಳೆ ವ್ಯವಸ್ಥೆ
ಬಿಎಸ್ಸೆನ್ನೆಲ್ ಇನ್ನೂ ಹಳೆ ವ್ಯವಸ್ಥೆಯಲ್ಲಿಯೇ ಇದ್ದು, ಖಾಸಗಿ ಕಂಪೆನಿಗಳಲ್ಲಿ ಅಳವಡಿಕೆಯಾಗಿರುವ ಮುಂದುವರಿದ ತಂತ್ರಜ್ಞಾನವಾಗಲಿ, ಫೀಚರ್‌ಗಳನ್ನಾಗಲಿ ಹೊಂದಿಲ್ಲ. ಇದರಿಂದ ಗುಣಮಟ್ಟದ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ. ಇವುಗಳನ್ನು ನಿವಾರಿಸಬೇಕಿದೆ.
5. ತ್ವರಿತ ಅನುಷ್ಠಾನ
ದಿನೇ ದಿನೆ ತಂತ್ರಜ್ಞಾನ ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ತಕ್ಕಂತೆ ಸೇವೆ ಗಳು ಬದಲಾಗಬೇಕು. ಆದರೆ, ಈ ನಿಟ್ಟಿ ನಲ್ಲಿ ಬಿಎಸ್ಸೆನ್ನೆಲ್ ಇದುವರೆಗೆ ವಿಫಲ ವಾಗಿದೆ. ಹೀಗಾಗಿ ತತ್‌ಕ್ಷಣದ ನಿರ್ಣಯ ಹಾಗೂ ತ್ವರಿತ ಕಾರ್ಯಗೊಳಿಸುವಿಕೆಗೆ ಒತ್ತು ನೀಡುವ ಅಧಿಕಾರ ಹಾಗೂ ಸೌಕರ್ಯವನ್ನು ನೀಡಬೇಕಿದೆ.
ದೇಶಿ ಉಪಕರಣಗಳ ಬಳಕೆ
ಬಿಎಸ್ಸೆನ್ನೆಲ್ ತನ್ನ 4ಜಿ ಮತ್ತು 5ಜಿ ಸೇವೆಗಳನ್ನು ದೇಶವ್ಯಾಪಿ ಪೂರೈಸಬೇಕಿದೆ. ಇದಕ್ಕಾಗಿ ದೇಶಾದ್ಯಂತ 4ಜಿ ಸೈಟ್‌ಗಳ ಸ್ಥಾಪನೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಉಪಕರಣಗಳ ಅಳವಡಿಕೆ ಕಾರ್ಯ ಶುರುವಾಗಿದೆ. 2024ರ ಅಕ್ಟೋಬರ್ 31ರ ವೇಳೆಗೆ 50,708 4ಜಿ ಸೈಟ್‌ಗಳನ್ನು ಸ್ಥಾಪಿಸಲಾಗಿದ್ದು, 41,957 ಸೈಟ್‌ಗಳ ಅಳವಡಿಕೆ ಚಾಲ್ತಿಯಲ್ಲಿದೆ. ಈ ಉಪಕರಣಗಳನ್ನು 5ಜಿಗೆ ನವೀಕರಿಸಬಹುದಾಗಿದೆ.
3.2 ಲಕ್ಷ ಕೋಟಿ ರೂ.- ಪುನಃಶ್ಚೇತನಕ್ಕೆ ಕೇಂದ್ರ ನೀಡಿದ ಪ್ಯಾಕೇಜ್
23297 ಕೋಟಿ ರೂ.- ಬಿಎಸ್ಸೆನ್ನೆಲ್‌ನ ಈಗಿರುವ ಸಾಲ ಮೊತ್ತ
40400ಕೋಟಿ ರೂ. -2022ರಲ್ಲಿದ್ದ ಬಿಎಸ್ಸೆನ್ನೆಲ್‌ನ ಸಾಲ
9.19ಕೋಟಿ ರೂ.- ಬಿಎಸ್ಸೆನ್ನೆಲ್ ಹೊಂದಿರುವ ಗ್ರಾಹಕರು
■ ಆದರ್ಶ ಎಸ್.ಅಂಚೆ