Advertisement

ಖಾಸಗಿಯಿಂದ ಸರಕಾರಿ ಶಾಲೆಯತ್ತ ಹೆಜ್ಜೆ

01:47 AM Sep 10, 2020 | mahesh |

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ಹೊಸ ದಾಖಲಾತಿ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 3,160 ಮಕ್ಕಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ. ಬಹುತೇಕ ಮಕ್ಕಳು ಅನುದಾನರಹಿತ (ಖಾಸಗಿ) ಶಾಲೆಗಳಿಂದ ಬಂದವರಾಗಿದ್ದಾರೆ.

Advertisement

ದ.ಕ. ಜಿಲ್ಲೆಯ 349 ಸರಕಾರಿ ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ವರ್ಷದಲ್ಲಿ 2,160 ಮಕ್ಕಳು ಹೆಚ್ಚಾಗಿದ್ದಾರೆ. ಪ್ರತೀ ವರ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಸ್ಥಿತಿಯಲ್ಲಿದ್ದ ಸರಕಾರಿ ಶಾಲೆಗಳಲ್ಲಿ ಈ ವರ್ಷ ಆಶಾಭಾವನೆ ಚಿಗುರಿದೆ. ಅತಿ ಕಡಿಮೆ ದಾಖಲಾತಿ ಇದ್ದ ಶಾಲೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಆಗಿದ್ದು, ಶಿಕ್ಷಕರು ಖುಷಿಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 914 ಸರಕಾರಿ ಪ್ರಾಥಮಿಕ ಮತ್ತು 169 ಸರಕಾರಿ ಪ್ರೌಢಶಾಲೆಗಳಿದ್ದು, 349 ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ಕಳೆದ ವರ್ಷ 26,933 ಮಂದಿ ಮಕ್ಕಳು ಈ 349 ಶಾಲೆಗಳಲ್ಲಿ ದಾಖಲಾಗಿದ್ದರೆ, ಈ ಬಾರಿ 2,160 ಮಕ್ಕಳು ಹೆಚ್ಚುವರಿಯಾಗಿ ದಾಖಲಾಗುವ ಮೂಲಕ ಒಟ್ಟು ಹೊಸ ದಾಖಲಾತಿ 29,093 ಆಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿವಿಧ ತರಗತಿಗಳಿಗೆ ಈ ದಾಖಲಾತಿ ನಡೆದಿದೆ.

ಮೂವರಿದ್ದಲ್ಲಿ 11 ಮಕ್ಕಳು
ಕಳೆದ ವರ್ಷ 219 ಮಕ್ಕಳು ದಾಖಲಾಗಿದ್ದ ಮುಚ್ಚಾರು ಸರಕಾರಿ ಶಾಲೆಯಲ್ಲಿ ಈ ಬಾರಿ 269 ದಾಖಲಾತಿಯಾಗಿದ್ದು, 50 ಮಕ್ಕಳು ಹೊಸದಾಗಿ ಸೇರಿದ್ದಾರೆ. 178 ಮಕ್ಕಳು ಕಳೆದ ವರ್ಷ ದಾಖಲಾಗಿದ್ದ ಪುದು ಸರಕಾರಿ ಶಾಲೆಯಲ್ಲಿ ಸದ್ಯ 219 ಮಕ್ಕಳು ಹೊಸದಾಗಿ ದಾಖಲಾಗಿದ್ದಾರೆ. ಹಾಗೆಯೇ 27 ಮಕ್ಕಳು ದಾಖಲಾತಿಯಾಗಿದ್ದ ಸೂಳಬೆಟ್ಟು ಸರಕಾರಿ ಶಾಲೆ ಮತ್ತು 32 ಮಕ್ಕಳಿದ್ದ ನೆಲ್ಯಡ್ಕ ಸರಕಾರಿ ಶಾಲೆಯಲ್ಲಿ ಪ್ರಸ್ತುತ ಕ್ರಮವಾಗಿ 42 ಮತ್ತು 62 ಮಕ್ಕಳು ಹೊಸ ದಾಖಲಾತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಮೂರೇ ಮಕ್ಕಳು ದಾಖಲಾಗಿದ್ದ ತೋರಣಕಟ್ಟೆ ಸರಕಾರಿ ಶಾಲೆಯಲ್ಲಿಯೂ ಈ ಬಾರಿ 11 ಮಂದಿ ಹೊಸದಾಗಿ ದಾಖ ಲಾಗಿದ್ದಾರೆ.

ಡುಪಿ: ಖಾಸಗಿಯಿಂದ ಸರಕಾರಿ ಶಾಲೆಗೆ
ಉಡುಪಿ ಜಿಲ್ಲೆಯಲ್ಲಿ ಈ ಬಾರಿ 1 ಸಾವಿರಕ್ಕೂ ಹೆಚ್ಚು ಹೊಸ ದಾಖಲಾತಿಗಳಾಗಿದ್ದು, ಬಹುತೇಕರು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ಬಂದವರಾಗಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲವು ಪೋಷಕರು ಕೆಲಸ ಕಳೆದುಕೊಂಡಿರುವುದು, ವೇತನ ಕಡಿತದಂತಹ ಸಮಸ್ಯೆಯಲ್ಲಿ ಸಿಲುಕಿರುವುದು ಮತ್ತು ಖಾಸಗಿ
ಶಾಲೆಗಳ ಕೈಗೆಟುಕದ ಶುಲ್ಕ ಸರಕಾರಿ ಶಾಲೆಗಳನ್ನು ಪೋಷಕರು ನೆಚ್ಚಿಕೊಳ್ಳಲು ಕಾರಣ ಎಂದು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಖಾಸಗಿಯಿಂದ ಸರಕಾರಿ ಶಾಲೆಗೆ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷಗಳಿಗಿಂತ ಈ ವರ್ಷ ಸರಕಾರಿ ಶಾಲೆಗಳಲ್ಲಿ ಆಶಾಭಾವನೆ ಮೂಡಿದೆ. ಒಂದು ಸಾವಿರಕ್ಕೂ ಹೆಚ್ಚು ಹೊಸ ದಾಖಲಾತಿಯಾಗಿದ್ದು, ಬಹುತೇಕರು ಅನುದಾನರಹಿತ ಶಾಲೆಗಳಿಂದ ಬಂದವರಾಗಿದ್ದಾರೆ. ಆದರೆ ಹೊಸ ದಾಖಲಾತಿ ಹೆಚ್ಚಿರುವ ಒಟ್ಟು ಶಾಲೆಗಳ ಸಂಖ್ಯೆ ಲಭ್ಯವಿಲ್ಲ.
-ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ

ಸೆ. 30ರ ವರೆಗೆ ಅವಕಾಶ
ದ.ಕ. ಜಿಲ್ಲೆಯ 349 ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ನಡೆದಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿವಿಧ ತರಗತಿಗಳಿಗೆ ಆಗಿರುವ ದಾಖಲಾತಿಯಾಗಿದೆ. ಸೆ. 30ರ ವರೆಗೆ ಅವಕಾಶವಿದ್ದು, ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿರುವ ಬಗ್ಗೆ ಸಂತಸವಾಗಿದೆ.
– ಮಲ್ಲೇಸ್ವಾಮಿ, ದ.ಕ. ಡಿಡಿಪಿಐ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next