ಗದಗ: ಧರ್ಮದ ಹಾದಿಯಲ್ಲಿ ಬದುಕು ಸಾಗಿಸಿದರೆ, ನೆಮ್ಮದಿ, ಸುಖ, ಶಾಂತಿ ಸಿಗಲಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು. ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಕಲಬುರ್ಗಿ ಶ್ರೀ ಶರಣಬಸವೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ, ಕಳಸಾರೋಹಣ ಹಾಗೂ ಶ್ರೀ ಶರಣಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮ್ಮುಖ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬಾಹ್ಯ ಸಂಪತ್ತಿಗಿಂತ ಆಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಟ್ನೂರ-ರಾಜೂರ-ಗದಗ ಬ್ರಹನ್ಮಠದ ಷ.ಬ್ರ.ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬದುಕಿನಲ್ಲಿ ಆಸೆ ಇರಲಿ, ಅತಿಯಾಸೆ ಬೇಡ. ದೇವರು ಕೊಟ್ಟಿದ್ದನ್ನು ದೇವರಿಗೆ ನೀಡುವ ಮನೋಭಾವ ಮೂಡಿದಾಗ ಬದುಕಿನ ಅರ್ಥ ಸಿಗಲಿದೆ. ದಾನ-ಧರ್ಮವೂ ಪ್ರಮುಖ ಸ್ಥಾನ ಪಡೆಯಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಮಾತನಾಡಿ, ಜೀವನ ಸಾರ್ಥಕಗೊಳಿಸಲು ಬಡವರ ಏಳ್ಗೆ ಮತ್ತು ಸಮಾಜದ ಹಿತಕ್ಕಾಗಿ ಶ್ರಮಿಸಬೇಕು. ನ್ಯಾಯ, ನೀತಿ, ಧರ್ಮದ ಅನ್ವಯ ನಡೆಯಬೇಕು. ದುಡಿದು ಉಣ್ಣುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಂಪಾದನೆಯಲ್ಲಿ ಅಲ್ಪಸ್ವಲ್ಪವಾದರೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಗದುಗಿನ ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ, ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ| ನೀಲಮ್ಮ ತಾಯಿ ಅಸುಂಡಿ ಮಾತನಾಡಿದರು. ದೇವಸ್ಥಾನಕ್ಕೆ ಭೂದಾನ ಮಾಡಿದ ಗ್ರಾಮದ ಹಿರಿಯ ರೈತ ವೀರಪ್ಪ ನಿಂಗಪ್ಪ ಹಾಳಕೇರಿ, ಅನ್ನದಾನಿ ರಾಘವೇಂದ್ರ ರಾವ್ ಪಿ. ಹುಯಿಲಗೋಳ, ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ಮೌಲಾಸಾಬ ಹೆಬ್ಬಳ್ಳಿ, ನೀಲಪ್ಪ ಮಾಗಡಿ, ನಿಂಗಪ್ಪ ಹೊಸೂರ, ಈರಪ್ಪ ಲಕ್ಕುಂಡಿ ಸೇರಿ ಕಳಸದ ದಾನಿ ಧೀರೇಂದ್ರರಾವ ಹುಯಿಲಗೋಳ, ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡಿದ ಯಲ್ಲಪ್ಪ, ಪ್ರಥಮ ದರ್ಜೆ ಗುತ್ತಿಗೆದಾರ ನಾಗರಾಜ ಸಿ. ಮಾಗಡಿ, ದಾನಿಗಳಾದ ಮಲ್ಲಪ್ಪ ಕಲ್ಲಪ್ಪ ಹಳ್ಳಿಕೇರಿ, ಶರಣಪ್ಪ ಹುಯಿಲಗೋಳ, ಹುಯಿಲಗೋಳ ಗ್ರಾಪಂ ಅಧ್ಯಕ್ಷೆ ಹೇಮಾ ಹರಿಜನ ಮತ್ತಿತರರನ್ನು ಸನ್ಮಾನಿಸಲಾಯಿತು. ಬಸಪ್ಪ ಚಳಗೇರಿ ನಿರೂಪಿಸಿದರು. ಗ್ರಾಪಂ ಸದಸ್ಯ ಎಸ್.ಎಂ. ಹೆಬ್ಬಳ್ಳಿ ಸ್ವಾಗತಿಸಿದರು.