Advertisement

ಕಲ್ಲಡ್ಕ ಭಟ್‌ ವಿರುದ್ಧದ 2 ಪ್ರಕರಣಗಳಿಗೆ ತಡೆಯಾಜ್ಞೆ

06:10 AM Jul 22, 2017 | Karthik A |

ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಸಂಬಂಧ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ 2 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಸರಕಾರ ನೀಡಿದ್ದ ಪ್ರಾಸಿಕ್ಯೂಶನ್‌ ಅನುಮತಿ ಆದೇಶ, ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಹೈಕೋರ್ಟ್‌ ಮಧ್ಯಾಂತರ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳ ರದ್ದು ಕೋರಿ ಕಲ್ಕಡ್ಕ ಪ್ರಭಾಕರ್‌ ಭಟ್‌ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಮುಂದಿನ ಕಾನೂನು ಕ್ರಮಗಳಿಗೆ ತಡೆಯಾಜ್ಞೆ ನೀಡಿ ಪ್ರತಿವಾದಿಗಳಾದ ರಾಜ್ಯ ಸರಕಾರ, ಬಂಟ್ವಾಳ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌, ಎನ್‌. ಅಬುಲ್ಲಾ ನದಾಜೆ ಹಾಗೂ ಅಬೂಬುಕರ್‌ ಸಿದ್ದಿಕಿ ಅವರಿಗೆ ನೊಟೀಸ್‌ ಜಾರಿಗೊಳಿಸಿತು.

Advertisement

ಪ್ರಭಾಕರ್‌ ಭಟ್‌ ಪರ ವಾದ ಮಂಡಿಸಿದ ವಕೀಲ ಅರುಣ್‌ ಶ್ಯಾಮ್‌, ಅರ್ಜಿದಾರರು ರಾಷ್ಟ್ರೀಯ ಏಕತೆಗೆ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿದ್ದರೂ ದುರುದ್ದೇಶ ಪೂರ್ವಕವಾಗಿ ಪೊಲೀಸ್‌ ಠಾಣೆಯಲ್ಲಿ ಎರಡು ದೂರು ದಾಖಲಿಸಲಾಗಿತ್ತು. ಆದರೆ ರಾಜ್ಯ ಸರಕಾರ ಪ್ರಕರಣ ಸಂಬಂಧ ಸಮಂಜಸ ಕಾರಣಗಳನ್ನು ನೀಡದೆ, ರಾಜಕೀಯ ದುರುದ್ದೇಶದಿಂದ ಎರಡು ಪ್ರಕರಣಗಳಿಗೆ ಒಂದೇ ಪ್ರಾಸಿಕ್ಯೂಶನ್‌ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.

ಪ್ರಕರಣವೇನು?
2014ರ ಫೆ. 16ರಂದು  ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದಲ್ಲಿ  ನಡೆದ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುವ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕೋಕಾಳ ಗ್ರಾಮದ ಎನ್‌ ಅಬುಲ್ಲಾ ನದಾಜೆ ದೂರು ದಾಖಲಿಸಿದ್ದರು. ಅದೇ ವರ್ಷ ಮಾ. 2ರಂದು ಬಿ.ಸಿ. ರೋಡ್‌ನ‌ಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬಿ. ಮೂಡಾ ಗ್ರಾಮದ ಅಬೂಬುಕರ್‌ ಸಿದ್ದಿಕಿ ಅವರು ದೂರು ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಪ್ರಭಾಕರ್‌ ಭಟ್‌ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್‌ ಸಲ್ಲಿಸಲು ಪ್ರಾಸಿಕ್ಯೂಶನ್‌ಗೆ ಅನಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿದ್ದರು. ರಾಜ್ಯ ಸರಕಾರ ಈ ವರ್ಷ ಮಾ. 30ರಂದು ಎರಡು ಪ್ರಕರಣಗಳಿಗೂ ಪ್ರಾಸಿಕ್ಯೂಶನ್‌ ಅನುಮತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next