ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ. 7ರಂದು ಸಂಜೆ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನ ಗಳನ್ನೊಳಗೊಂಡ 2024ನೇ ಸಾಲಿನ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಆರ್‌ಎಸ್‌ಎಸ್‌ನ ಸರಸಂಘ ಚಾಲಕ್ ಡಾ| ಮೋಹನ್‌ಜಿ ಭಾಗವತ್ ಅವರು ಭಾಗವಹಿಸಲಿದ್ದಾರೆ.
ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳ ಲಾಗಿದ್ದು, ಶುಕ್ರವಾರ ಕಲ್ಲಡ್ಕಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಗಮಿಸಿ ರಿಹರ್ಸಲ್ ನಡೆಸಿದೆ.
ಡಾ| ಭಾಗವತ್ ಅವರು ವಿಶೇಷ ಭದ್ರತಾ ವ್ಯವಸ್ಥೆ (ಝಡ್ ಪ್ಲಸ್ )ಯನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರದಿಂದಲೇ ಸಿಐಎಸ್‌ಎಫ್ ತಂಡ ವಿಶೇಷ ನಿಗಾ ಇರಿಸಿಕೊಂಡಿದೆ.
ಜತೆಗೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕೂಡ ಶುಕ್ರವಾರ ರಿಹರ್ಸಲ್ ಸಂದರ್ಭದಲ್ಲಿ ಕಲ್ಲಡ್ಕದಲ್ಲಿದ್ದು, ಶನಿವಾರ ಬೆಳಗ್ಗಿನಿಂದಲೇ ವಿಶೇಷ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಿದ್ದಾರೆ.
ಭಾಗವತ್ ಅವರು ಡಿ. 7ಕ್ಕೆ ಸಂಜೆ 4.15ಕ್ಕೆ ಮಂಗಳೂರಿನಿಂದ ಹೊರಟು 5ಕ್ಕೆ ಕಲ್ಲಡ್ಕ ತಲುಪಲಿದ್ದು, ಶ್ರೀರಾಮ ವಿದ್ಯಾಕೇಂದ್ರದ ಚಟುವಟಿಕೆಗಳನ್ನು ವೀಕ್ಷಿಸಿ 6.30ರಿಂದ ಒಂದೂವರೆ ಗಂಟೆಗಳ ಕಾಲ ಕ್ರೀಡೋತ್ಸವ ವೀಕ್ಷಣೆ ಮಾಡಿ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ ನಿರ್ಗಮಿಸಲಿದ್ದಾರೆ.
ಮಂಗಳೂರಿನಲ್ಲಿ ಸ್ವಾಗತ
ಮಂಗಳೂರು: ಆರ್‌ಎಸ್‌ಎಸ್ ಸರಸಂಘ ಚಾಲಕ್ ಡಾ| ಮೋಹನ್ ಭಾಗವತ್ ಅವರು ಶುಕ್ರವಾರ ಸಂಜೆ ಮಂಗಳೂರಿಗೆ ಆಗಮಿಸಿದರು.
ಸಂಜೆ 6ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾ| ಭಾಗವತ್ ಅವರನ್ನು ಸಂಘದ ಪ್ರಾಂತ ಪ್ರಚಾರಕರಾದ ಗುರುಪ್ರಸಾದ್, ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಮತ್ತಿತರ ಹಿರಿಯರು ಸ್ವಾಗತಿಸಿದರು.
ಅವರು ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನಕ್ಕೆ ಆಗಮಿಸಿದ್ದು ಸಂಘದ ಹಿರಿಯರೊಂದಿಗೆ ಮಾತುಕತೆ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ ಮೋಹನ್ ಭಾಗವತ್ ಅವರ ಖಾಸಗಿ ಭೇಟಿ ಇದಾಗಿದ್ದು, ಡಿ. 7ರಂದು ಸಂಜೆ 5.30ಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.