Advertisement

ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣ ದುರಸ್ತಿಗೆ ಪಾಲಿಕೆ ನಿರ್ಧಾರ

07:35 PM Jan 06, 2022 | Team Udayavani |

ಸ್ಟೇಟ್‌ಬ್ಯಾಂಕ್‌ : ನಗರದ ಬಹುಮುಖ್ಯ ಬಸ್‌ನಿಲ್ದಾಣವಾದ ಸ್ಟೇಟ್‌ಬ್ಯಾಂಕ್‌ನ ಸರ್ವಿಸ್‌ ಬಸ್‌ನಿಲ್ದಾಣ ದುರಸ್ತಿಗೆ ಮಹಾನಗರ ಪಾಲಿಕೆ ನಿರ್ಧರಿಸಿದ್ದು, 1 ಕೋ.ರೂ ಮೀಸಲಿಡಲು ತೀರ್ಮಾನಿಸಿದೆ.

Advertisement

ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮೂಲ ವ್ಯವಸ್ಥೆಗಳು ಸಮರ್ಪಕವಾಗಿಲ್ಲದ ಕಾರಣದಿಂದ ಪ್ರಯಾಣಿಕರಿಗೆ ನಿತ್ಯ ಸಮಸ್ಯೆ ಆಗುತ್ತಿತ್ತು. ಈ ಬಗ್ಗೆ “ಸರ್ವಿಸ್‌ ಬಸ್‌ ನಿಲ್ದಾಣ; ಪ್ರಯಾಣಿಕರ ಬವಣೆ ಪರಿಹರಿಸಿ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ ನ. 25ರಂದು ವರದಿಯನ್ನೂ ಪ್ರಕಟಿಸಿತ್ತು.

ಸರ್ವಿಸ್‌ಬಸ್‌ ನಿಲ್ದಾಣದಲ್ಲಿ ಎಲ್ಲ ಸೌಕರ್ಯವನ್ನು ಕಲ್ಪಿಸಿದ ನಂತರ ಸಿಟಿ ಬಸ್‌ಗಳನ್ನು ಇದೇ ಭಾಗದಲ್ಲಿ ನಿತ್ಯ ನಿಲುಗಡೆಗೆ ಅವಕಾಶ ನೀಡುವ ಸಂಬಂಧ ಪಾಲಿಕೆ ಚಿಂತನೆ ನಡೆಸಿದ್ದು, ತೀರ್ಮಾನ ಇನ್ನಷ್ಟೇ ಆಗಬೇಕಿದೆ.

ಸರ್ವಿಸ್‌ ಬಸ್‌ನಿಲ್ದಾಣ ಪಂಪ್‌ವೆಲ್‌ಗೆ ಸ್ಥಳಾಂತರವೂ ಆಗಿಲ್ಲ; ಸ್ಟೇಟ್‌ಬ್ಯಾಂಕ್‌ ಬಸ್‌ನಿಲ್ದಾಣ ಸುಸಜ್ಜಿತವಾಗಿಯೂ ಇಲ್ಲ ಎಂಬ ಪರಿಸ್ಥಿತಿಯಿಂದ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಬಸ್‌ನಿಲ್ದಾಣದ ಒಳಭಾಗದಲ್ಲಿರುವ ಛಾವಣಿ ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ. ಜತೆಗೆ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಈ ಮಧ್ಯೆ ಇರುವ ಕೆಲವು ಆಸನದಲ್ಲಿ ಕೆಲವರು ಮಲಗಿರುವುದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶವಿಲ್ಲ. ಇದರಿಂದ ವೃದ್ಧರು, ಮಕ್ಕಳು, ಮಹಿಳೆಯರ ಸಮಸ್ಯೆ ಹೇಳತೀರದಾಗಿದೆ. ದೂರದೂರಿನಿಂದ ಬರುವ ಬಹುತೇಕ ಪ್ರಯಾಣಿಕರು ಇದೇ ನಿಲ್ದಾಣವನ್ನು ಅವಲಂಬಿಸಿರುವ ಕಾರಣದಿಂದ ನಿತ್ಯ ಸಮಸ್ಯೆ ಪರಿಹಾರವಾಗದೆ ಪ್ರಯಾಣಿಕರಿಗೆ ತಲೆನೋವಾಗಿತ್ತು.

ಸ್ಥಳೀಯ ಕಾರ್ಪೋರೆಟರ್‌, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ ಅವರು “ಸುದಿನ’ ಜತೆಗೆ ಮಾತನಾಡಿ, “ಬಸ್‌ನಿಲ್ದಾಣದ ಈಗಿನ ಛಾವಣಿಯನ್ನು ತೆಗೆದು ಹೊಸ ಛಾವಣಿ ಅಳವಡಿಸ ಲಾಗುವುದು. ಬಸ್‌ ನಿಲ್ದಾಣಕ್ಕೆ ಕಾಂಕ್ರೀಟ್‌ ಕಾಮಗಾರಿ, ಶೌಚಾಲಯ ದುರಸ್ತಿ, ವಿದ್ಯುತ್‌ ವ್ಯವಸ್ಥೆ ಸಹಿತ ಮೂಲ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಟೆಂಡರ್‌ ಆಗಿ ಇದರ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.

Advertisement

ಬಸ್‌ನಿಲ್ದಾಣದಲ್ಲಿ ಮೂಲ ಸೌಕರ್ಯ
ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ನಿಲ್ದಾಣದಲ್ಲಿ ವಿವಿಧ ಮೂಲ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಅನುದಾನ ಕೂಡ ಮೀಸಲಿಡಲಾಗಿದೆ. ಪ್ರಯಾಣಿಕರ ಅನುಕೂಲತೆಗೆ ಬೇಕಾದ ವಿವಿಧ ಕಾಮಗಾರಿಯನ್ನು ಇಲ್ಲಿ ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು.
– ಪ್ರೇಮಾನಂದ ಶೆಟ್ಟಿ, ಮೇಯರ್‌, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next