ಮಹಾನಗರ: ಸ್ಟೇಟ್‌ಬ್ಯಾಂಕ್ ಬಳಿಯ ಸರ್ವಿಸ್ ಬಸ್ ನಿಲ್ದಾಣ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದ್ದು, ಕೊನೆಗೂ ಶೆಲ್ಟರ್ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ.
ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ ಕಾಮಗಾರಿ ಸುಮಾರು ಏಳು ತಿಂಗಳುಗಳಿಂದ ಸಾಗುತ್ತಿದ್ದು, ಬಸ್ ಶೆಲ್ಟರ್ ಅಳವಡಿಸಲು ಇರುವ ಗೊಂದಲದ ಪರಿಣಾಮ ಕಾಮಗಾರಿ ಅರ್ಧಕ್ಕೆ ಸ್ಥಗಿತ ಗೊಂಡಿತ್ತು. ಪಿಪಿಪಿ ಮಾದರಿ ಯಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್ ವಹಿಸಿ ಕೊಳ್ಳಲು ಯಾರೂ ಆಸಕ್ತಿ ವಹಿಸದ ಕಾರಣ, ಕಾಮಗಾರಿ ಆರಂಭಗೊಂಡಿರಲಿಲ್ಲ. ಕೊನೆಗೂ ಶೆಲ್ಟರ್ ಅಳವಡಿಸಲು ಸಂಸ್ಥೆಯೊಂದು ಮುಂದೆ ಬಂದಿದ್ದು, ಸದ್ಯ ಕಾಮಗಾರಿ ಪ್ರಾರಂಭವಾಗಿದೆ.
ಶೆಲ್ಟರ್ ಅಳವಡಿಸದ ಕಾರಣಕ್ಕೆ ಬಸ್ ನಿಲ್ದಾಣದಲ್ಲಿ ಕೊಡೆ ಹಿಡಿದು ಬಸ್ ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ಈ ಕಾರಣಕ್ಕೆ “ಶೆಲ್ಟರ್ ಗೊಂದಲ; ಸರ್ವಿಸ್ ಬಸ್ ನಿಲ್ದಾಣ ಕಾಮಗಾರಿಗೆ ಹಿನ್ನಡೆ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಕಾಮಗಾರಿಗೆ ಪಾಲಿಕೆ ವೇಗ ನೀಡಿದ್ದು, ಬಸ್ ಶೆಲ್ಟರ್ ಅಳವಡಿಸಲಾಗುತ್ತಿದೆ.
ವಿಸ್ತರಣೆಯಾಗಿದೆ ಬಸ್ ನಿಲ್ದಾಣ
ಸ್ಟೇಟ್‌ಬ್ಯಾಂಕ್‌ನ ಸರ್ವಿಸ್ ಬಸ್ ನಿಲ್ದಾಣ ಅಭಿವೃದ್ಧಿಯ ಜತೆ ವಿಸ್ತರಣೆ ಯಾಗಿದೆ. ಬಸ್ ನಿಲ್ದಾಣ ಸಂಪರ್ಕಿತ ಸರ್ವಿಸ್ ರಸ್ತೆಯನ್ನು ಕೆಡಹಿ ಅಲ್ಲಿಯ ವರೆಗೆ ನಿಲ್ದಾಣ ವಿಸ್ತರಿಸಲಾಗಿದೆ. ಪೂರ್ಣ ಮಟ್ಟದ ಅಭಿವೃದ್ಧಿಗೆಂದು ಪಾಲಿಕೆಯಿಂದ 15ನೇ ಹಣಕಾಸು ನಿಧಿಯಲ್ಲಿ 1 ಕೋಟಿ ರೂ., ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 2.2 ಕೋಟಿ ರೂ. ಮತ್ತು ಮುಡಾದಿಂದ 1 ಕೋಟಿ ರೂ. ಭರಿಸಲಾಗಿದ್ದು, ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.