ಬೆಳಗಾವಿ: ಬರದ ಸಂಕಷ್ಟದಲ್ಲಿ ಸಿಲುಕಿರುವ ರೈತರ ಸಾಲವನ್ನು 15-20 ದಿನಗಳೊಳಗೆ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳದಿದ್ದರೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ರೈತರ ಪರ ನಿಂತು ಹೋರಾಟಕ್ಕಿಳಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ನಗರದಲ್ಲಿ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಹೋರಾಟವನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಬರಗಾಲಕ್ಕೆ ತುತ್ತಾಗಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಲು ಮುಖ್ಯಮಂತ್ರಿ ತಕ್ಷಣ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗೆ ತಿರುಗಿ ಹೋರಾಟ ಮಾಡುತ್ತೇನೆ. ನೀವೆಲ್ಲರೂ ಒಗ್ಗಟ್ಟಾದರೆ ಈ ಸರಕಾರದ ಮೂಗು ಹಿಡಿದು ಕೆಲಸ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.
ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ರೂ. ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರ ಸ್ಥಿತಿ ಸಂಕಷ್ಟದಲ್ಲಿದೆ. ರೈತರ ಸಂಕಷ್ಟಕ್ಕೆ ಏಕೆ ಸ್ಪಂದಿಸುತ್ತಿಲ್ಲ. ಮುಸ್ಲಿಮರನ್ನು ತೃಪ್ತಿಪಡಿಸುವ ಬದಲಿಗೆ ನಾಡಿಗೆ ಅನ್ನ ನೀಡುವ ರೈತರ ನೆರವಿಗೆ ಬರುತ್ತಿಲ್ಲ. ಈ ಅಧಿವೇಶನ ಮುಗಿದ ಬಳಿಕ ಎಲ್ಲ ಮುಖಂಡರು ಸೇರಿ ರೈತ, ಜನ ವಿರೋಧಿ ಸರಕಾರದ ವಿರುದ್ಧ ಹೋರಾಡುತ್ತೇವೆ. ಈ ಸರಕಾರ ಅಧಿಕಾರ ಬಿಟ್ಟು ಕೆಳಗೆ ಇಳಿಯುವವರೆಗೂ ನಾನು ಮನೆ ಸೇರುವುದಿಲ್ಲ ಎಂದು ಪ್ರಕಟಿಸಿದರು.