Advertisement

ನಿಷೇಧಿತ ಮೀನುಗಾರಿಕೆ ವಿರುದ್ಧ ರಾಜ್ಯಾದ್ಯಂತ ಏಕಕಾಲಕ್ಕೆ ಕ್ರಮ’

06:20 AM Jul 21, 2018 | |

ಕೋಟ: ನಿಷೇಧಿತ ಲೈಟ್‌ ಫಿಶಿಂಗ್‌, ಬುಲ್‌ಟ್ರೋಲ್‌ ಮೀನುಗಾರಿಕೆ ಮಟ್ಟಹಾಕಲು ಈಗಾಗಲೇ ಅಧಿಕಾರಿಗಳೊಂದಿಗೆ  ಸಭೆ ನಡೆಸಲಾಗಿದೆ. ಮೀನುಗಾರಿಕೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ರಾಜ್ಯಾದ್ಯಂತ ಎಕ ಕಾಲಕ್ಕೆ ಇದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.ಅವರು ಗುರುವಾರ ಕೋಡಿಕನ್ಯಾಣದ ಮೀನುಗಾರಿಕೆ ಜಟ್ಟಿಯಲ್ಲಿ ಮೀನುಗಾರರ ಜತೆ ಸಭೆ ನಡೆಸಿ ಮಾತನಾಡಿದರು.

Advertisement

ಕೆಮಿಕಲ್‌ ಲೇಪನದ ಬಗ್ಗೆ
ಮಾಹಿತಿ ಕಾರ್ಯಾಗಾರ 

ಮೀನಿಗೆ ವಿಷಕಾರಿ ದ್ರಾವಣ ಲೇಪಿಸಲಾಗುತ್ತದೆ ಎನ್ನುವ ಸುದ್ದಿಯಿಂದ ಮೀನು ವ್ಯಾಪಾರದ ಮೇಲೆ ದೊಡ್ಡ ಮಟ್ಟದ ಹೊಡೆತ ಬಿದಿದ್ದೆ. ಹೀಗಾಗಿ ಈ ವದಂತಿ ತಡೆಯುವ ನಿಟ್ಟಿನಲ್ಲಿ  ಪರೀಕ್ಷಿಸಲು ಮಾರುಕಟ್ಟೆಯಲ್ಲೇ  ಸರಳ ವ್ಯವಸ್ಥೆ ಮಾಡಬೇಕು ಎಂದು ಸಾಸ್ತಾನದ ಮೀನುಗಾರ ಮಹಿಳೆಯರು ಸಚಿವರಿಗೆ ಮನವಿ ಸಲ್ಲಿಸಿದರು.  ಈ ಕುರಿತು ಮಾತನಾಡಿದ ಸಚಿವರು, ಮೀನಿಗೆ ನಿಜವಾಗಿ ಕೆಮಿಕಲ್‌ ಲೇಪಿಸುವವರ ವಿರುದ್ಧ ಆರೋಗ್ಯ ಇಲಾಖೆಯೊಂದಿಗೆ ಸೇರಿ ಕಠಿಣ ಕ್ರಮಕೈಗೊಳ್ಳಲಾಗುವುದು ಹಾಗೂ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕೆಮಿಕಲ್‌ ಲೇಪನದ ಕುರಿತು ಮಾಹಿತಿಗಾಗಿ  ಕಾರ್ಯಗಾರಗಳನ್ನು ಮಾಡಲಾಗುವುದು ಎಂದರು.

ಆಧುನಿಕ ಪದ್ಧತಿ ಅಳವಡಿಸಿಕೊಳ್ಳಿ
ಮೀನುಗಾರರು ಹಳೆಯ ವಿಧಾನವನ್ನು ಬಳಸುವುದರಿಮದ ನಷ್ಟದ ಪ್ರಮಾಣ ಹೆಚ್ಚುತ್ತದೆ.  ಹೀಗಾಗಿ ಆಧುನಿಕ ಬೋಟ್‌, ಬಳೆಗಳ ಬಳಕೆ ಮಾಡುವ ಮೂಲಕ ನಷ್ಟ ತಪ್ಪಿಸಬೇಕಿದೆ ಎಂದರು.

ಕೋಡಿಕನ್ಯಾಣ ಜಟ್ಟಿ ಹೂಳೆತ್ತುವ ಕಾಮಗಾರಿ ಹೊಸ ಟೆಂಡರ್‌ ಮೂಲಕ ನಡೆಯಲಿದೆ ಹಾಗೂ 300ಮೀ ಜಟ್ಟಿ ವಿಸ್ತರಣೆ, ಹರಾಜು ಕೇಂದ್ರ ಮುಂತಾದ ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಮಲ್ಪೆ ಬಂದರಿನ ಒತ್ತಡ ಕಡಿಮೆಯಾಗಬೇಕಾದರೆ ಕೋಡಿ ಕನ್ಯಾಣ ಮುಂತಾದ ಸಣ್ಣ ಜಟ್ಟಿಗಳ ಅಭಿವೃದ್ಧಿ ಅಗತ್ಯ ಎಂದು ಮೀನುಗಾರ ಮುಖಂಡ ಬಿ.ಬಿ. ಕಾಂಚನ್‌ ಮನವಿ ಮಾಡಿದರು.

Advertisement

ಈ ಸಂದರ್ಭ ಮೀನುಗಾರರ ಪರವಾಗಿ ಸಚಿವರನ್ನು ಸಮ್ಮಾನಿಸಲಾಯಿತು. ಹಲವು ಬೇಡಿಕೆಗಳನ್ನು ಸಲ್ಲಿಸಲಾಯಿತು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌, ಜೇಡಿಎಸ್‌ ಜಿಲ್ಲಾಧ್ಯಕ್ಷ ಯೋಗೇಶ ಶೆಟ್ಟಿ, ಹುಸೇನ್‌ ಹೈಕಾಡಿ, ವಾಸುದೇವ ರಾವ್‌, ಮನ್ಸೂರ್‌, ತಾ.ಪಂ. ಸದಸ್ಯೆ ಜ್ಯೋತಿ ಕುಂದರ್‌,  ಕೋಡಿ ಮೀನುಗಾರರ ಸಂಘದ ಚಂದ್ರ ಕಾಂಚನ್‌, ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿಯ ರಾಜೇಂದ್ರ ಸುವರ್ಣ, ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿ ವಿರಪ್ಪ ಗೌಡ, ಕಾಶೀನಾಥ, ವಿರೂಪಕ್ಷ,  ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರು, ಜನಪ್ರತಿನಿಧಿಗಳು  ಉಪಸ್ಥಿತರಿದ್ದರು.

ಶಂಕರ್‌ ಬಂಗೇರ ಸ್ವಾಗತಿಸಿ, ಜಿ.ಪಂ. ಮಾಜಿ ಸದಸ್ಯ ಶಂಕರ್‌ ಕುಂದರ್‌ ಪ್ರಾಸ್ತಾವಿಕ ಮಾತುಗಳ ಮೂಲಕ ಮೀನುಗಾರರ ಸಮಸ್ಯೆ ತಿಳಿಸಿದರು.  ಪ್ರಭಾಕರ ಮೆಂಡನ್‌ ಕಾರ್ಯಕ್ರಮ ನಿರೂಪಿಸಿದರು.

ಮೀನುಗಾರರ ಸಾಲ ಮನ್ನಾ ಕುರಿತು ಚಿಂತನೆ 
ಜೇಡಿಎಸ್‌ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಮೀನುಗಾರರ ಸಾಲ ಮನ್ನಾ ಮಾಡುವ ಭರವಸೆ ನೀಡಿ ಮಾತು ತಪ್ಪಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಆದರೆ ನಮ್ಮ ಚುನಾವಣೆ ಪ್ರಣಾಳಿಕೆ ಐದು ವರ್ಷವನ್ನು ಗಮನದಲ್ಲಿಟ್ಟು ಕೊಂಡು ರೂಪಿಸಲಾಗಿದೆ. ಹೀಗಾಗಿ ಎಲ್ಲವನ್ನೂ ಒಮ್ಮೆಗೆ ನೀಡಲು ಸಾಧ್ಯವಿಲ್ಲ.ಮುಂದಿನ ದಿನದಲ್ಲಿ ಮೀನುಗಾರರ ಸಾಲ ಮನ್ನಾ ಕುರಿತು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಮೀನುಗಾರರ ಕುರಿತು ನಿರ್ಲಕ್ಷ್ಯವಿಲ್ಲ
ಮೀನುಗಾರ ಮಹಿಳೆಯರಿಗೆ ಶೇ.0 ಬಡ್ಡಿದರದಲ್ಲಿ ಸಾಲ ನೀಡುವ ನಿರ್ಧಾರ ಹಾಗೂ ಸ್ಥಗಿತಗೊಂಡಿರುವ ಡೀಸಿಲ್‌ ಸಬ್ಸಿಡಿ ಮರು ವ್ಯವಸ್ಥೆ, ಜಟ್ಟಿಗಳ ಅಭಿವೃದ್ಧಿ, ಬಂದರು ಅಭಿವೃದ್ಧಿ ಹೀಗೆ ಹಲವಾರು ರೀತಿಯಲ್ಲಿ ಮೀನುಗಾರರ ಪರವಾದ ನಿರ್ಣಯಗಳನ್ನು ಕೃಗೊಳ್ಳಲಾಗಿದೆ. ಆದ್ದರಿಂದ ನಮ್ಮ ಸರಕಾರಕ್ಕೆ ಮೀನುಗಾರರ ಕುರಿತು ನಿರ್ಲಕ್ಷ್ಯವಿಲ್ಲ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next