Advertisement

ರಾಜ್ಯದಲ್ಲಿ ಬಾಡಿಗೆ ಇಲ್ಲದೇ ನಿಂತಿವೆ 20,000 ಲಾರಿಗಳು!

06:15 AM Aug 07, 2017 | |

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಪರಿಣಾಮ ರಾಜ್ಯ ದಲ್ಲಿ ಬರೋಬ್ಬರಿ 20,000ಕ್ಕೂ ಹೆಚ್ಚು ಲಾರಿ ಗಳು ಬಾಡಿಗೆ ಇಲ್ಲದೆ ನಿಲ್ಲುವಂತಾಗಿವೆ !

Advertisement

ಹೌದು, ಜಿಎಸ್‌ಟಿ ಜಾರಿಯಾದ ಬಳಿಕ ಸರಕು- ಸೇವೆಗಳ ಸಾಗಣೆ ವಹಿವಾಟು ದಿಢೀರ್‌ ಶೇ. 50ರಷ್ಟು ಕುಸಿದಿದ್ದು, ಜುಲೈ 1ರಿಂದಲೇ ರಾಜ್ಯಾದ್ಯಂತ ಹೆಚ್ಚು ಕಡಿಮೆ 20,000 ಲಾರಿಗಳು ಬಾಡಿಗೆಯೇ ಇಲ್ಲದೆ ನಿಂತಿವೆ. ಇದರಿಂದಾಗಿ ನಿತ್ಯ ಸುಮಾರು 4 ಕೋಟಿ ರೂ.ನಂತೆ ಈವರೆಗೆ 120 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.

ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಅನಂತರ ಉತ್ಪಾದನೆ, ಪೂರೈಕೆ ವಲಯದಲ್ಲೂ ವ್ಯತ್ಯಯ ವಾಗಿರುವುದರಿಂದ ಸರಕು ಸಾಗಣೆ ವ್ಯವಹಾರ ದಲ್ಲೂ ಭಾರೀ ಇಳಿಕೆಯಾಗಿದೆ. ಇದರಿಂದ ಲಾರಿ ಮಾಲಕರು ಸಂಕಷ್ಟಕ್ಕೆ ಸಿಲುಕಿ, ಸಾಲದ ಕಂತಿನ ಪಾವತಿಗೂ ಪರದಾಡುವಂತಾಗಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದ ಕೇಂದ್ರ-ರಾಜ್ಯ ಅಬಕಾರಿ ತೆರಿಗೆ, ವ್ಯಾಟ್‌, ನಾನಾ ಸೆಸ್‌ಗಳು, ಪ್ರವೇಶ ತೆರಿಗೆ ಸಹಿತ ಎಲ್ಲ ತೆರಿಗೆ ರದ್ದಾಗಿ ಕೇವಲ ಕೇಂದ್ರ- ರಾಜ್ಯ ಜಿಎಸ್‌ಟಿ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಯಾಯಿತು. ಈ ಹೊಸ ವ್ಯವಸ್ಥೆಯಡಿ ತೆರಿಗೆ ಪ್ರಮಾಣ ನಿಗದಿ, ದರ ಪರಿಷ್ಕರಣೆ, ಹಳೆಯ ದಾಸ್ತಾನು ವಿಲೇವಾರಿ, ಹೊಸ ಉತ್ಪನ್ನದ ಮಾರಾಟ ಇತರ ವಿಚಾರಗಳ ಬಗ್ಗೆ ಉತ್ಪಾದಕರು, ವಿತರಕರು, ಸಗಟುದಾರರು, ವರ್ತಕರಿಗೆ ಸ್ಪಷ್ಟತೆ ಇಲ್ಲದ ಕಾರಣ ಉತ್ಪಾದನೆ, ಪೂರೈಕೆಯಲ್ಲಿ ವ್ಯತ್ಯಯ ವಾಗಿದೆ. ಇದರ ಪರಿಣಾಮ ಸರಕು ಸಾಗಣೆ ಉದ್ಯಮದ ಮೇಲೂ ಬೀರಿದೆ.

ಗೊಂದಲ, ಭೀತಿ: 
ತಗ್ಗಿದ ವಹಿವಾಟು

ಕೇವಲ ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡಿರುವ ಉತ್ಪಾದಕರು, ವಿತರಕರಷ್ಟೇ ವ್ಯವಹಾರ ಮುಂದುವರಿಸಿದ್ದು, ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳದವರು ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಉತ್ಪಾದನೆ ಪ್ರಮಾಣ ಕುಸಿದಿದೆ. ಪರಿಣಾಮವಾಗಿ ಸರಕು ಸಾಗಣೆಗೆ ಬೇಡಿಕೆ ತಗ್ಗಿದೆ. ತಿಂಗಳಿಗೆ ಕನಿಷ್ಠ 20 ರೌಂಡ್‌ ಟ್ರಿಪ್‌ (ಅಂದರೆ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ತೆರಳಿ ಬಳಿಕ ಮತ್ತೆ ಅದೇ ಸ್ಥಳದಿಂದ ಸರಕು ಹೊತ್ತು ಮೂಲ ಸ್ಥಳಕ್ಕೆ ಹಿಂತಿರುಗುವುದು) ಪಡೆಯುತ್ತಿದ್ದ ಲಾರಿಗಳಿಗೆ ಕಳೆದ ಒಂದು ತಿಂಗಳಲ್ಲಿ ಐದಾರು ಟ್ರಿಪ್‌ಗ್ಳಷ್ಟೇ ಸಿಕ್ಕಿವೆ ಎಂದು ಲಾರಿ ಮಾಲಕರು ಅಳಲು ತೋಡಿಕೊಂಡಿದ್ದಾರೆ.

Advertisement

120 ಕೋಟಿ ರೂ. ನಷ್ಟ
ಒಂದು ಲಾರಿ ಬಾಡಿಗೆ ಸಿಗದೆ ಒಂದು ದಿನ ನಿಂತರೆ ಸಾಲದ ಬಡ್ಡಿ, ವಿಮಾ ಶುಲ್ಕ, ತೆರಿಗೆ, ಚಾಲಕರ ವೇತನ, ನಿರ್ವಹಣೆಯೂ ಸೇರಿ 2,000 ರೂ. ಎಂದು ಲೆಕ್ಕಾ ಹಾಕಿದರೂ ನಿತ್ಯ 4 ಕೋಟಿ ರೂ. ನಷ್ಟ ಉಂಟಾಗುತ್ತದೆ. ಜುಲೈ ಒಂದರಿಂದ ಇದೇ ಪರಿಸ್ಥಿತಿ ಇದ್ದು, ಈವರೆಗೆ ಸುಮಾರು 120 ಕೋಟಿ ರೂ.ಗಿಂತ ಹೆಚ್ಚು ನಷ್ಟ ಸಂಭವಿಸಿದೆ. ಒಂದು ಲಾರಿಗೆ ಒಂದೂ ಬಾಡಿಗೆ ಸಿಗುತ್ತಿಲ್ಲ ಎಂದರ್ಥವಲ್ಲ. ಬಾಡಿಗೆ ಸಿಗುವ ಪ್ರಮಾಣ ಕಡಿಮೆಯಾಗಿರುವುದರಿಂದ ವಹಿವಾಟು ಕುಸಿದಿದೆ. ಅಧಿಕಾರಿ ಗಳು ಜಿಎಸ್‌ಟಿ ಬಗೆಗಿನ ಕೆಲ ಗೊಂದಲ ಗಳನ್ನು ತ್ವರಿತವಾಗಿ ನಿವಾರಿಸಬೇಕು. ಹಾಗೆಯೇ ಸಾಫ್ಟ್ವೇರ್‌ ಬಳಕೆಯಲ್ಲಿನ ದೋಷಗಳನ್ನು ಸರಿಪಡಿಸಿದರಷ್ಟೇ ವ್ಯವಹಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಅವರು ಹೇಳಿದ್ದಾರೆ.

ತಿಂಗಳಲ್ಲಿ 2 ಕೋಟಿ ರೂ. 
ವಹಿವಾಟು ಇಳಿಕೆ

ಎಲ್ಲ ರೀತಿಯ ಸರಕು ಸಾಗಣೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಜಿಎಸ್‌ಟಿ ಜಾರಿಗೂ ಮುನ್ನ ತಿಂಗಳಿಗೆ 3.50 ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಆದರೆ ಕಳೆದ ಜುಲೈನಲ್ಲಿ ಕೇವಲ 1.50 ಕೋಟಿ ರೂ. ವಹಿವಾಟು ನಡೆದಿದೆ. ಯಾವುದೇ ರೀತಿಯ ಪ್ಯಾಕಿಂಗ್‌ ಇರುವ ವಸ್ತುಗಳಿಗೆ ಶೇ.18ರಷ್ಟು ತೆರಿಗೆಯಿದ್ದು, ಅವುಗಳ ಸಾಗಣೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರು ಒಟ್ಟು ಶೇ.23ರಷ್ಟು ತೆರಿಗೆ ಭರಿಸಬೇಕಾಗುತ್ತದೆ. ಹಾಗಾಗಿ ಬೇಡಿಕೆ ಇಳಿಕೆಯಾಗಿದೆ. ಮನೆ ಸ್ಥಳಾಂತರಿಸುವವರು ಗೃಹೋಪಯೋಗಿ ವಸ್ತುಗಳನ್ನು ಪ್ಯಾಕ್‌ ಮಾಡದೆಯೇ ಸಾಗಿಸುವಂತೆ ಸೂಚಿಸಿ ಶೇ.5ರಷ್ಟು ತೆರಿಗೆ ಭರಿಸಲು ಮುಂದಾಗುತ್ತಿದ್ದಾರೆ. ಪ್ಯಾಕ್‌ ಮಾಡದೆ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸುವುದು ಕಷ್ಟಕರವಾಗಿದ್ದು, ತಲೆನೋವಾಗಿ ಪರಿಣಮಿಸಿದೆ ಎಂದು ಪೀಣ್ಯದ ಪ್ಯಾಕರ್ ಮತ್ತು ಮೂವರ್ ಸಂಸ್ಥೆಯ ಮಾಲಕರೊಬ್ಬರು ತಿಳಿಸಿದರು.

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next