Advertisement

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

10:51 AM Nov 06, 2024 | Team Udayavani |

ಬೆಂಗಳೂರು: ಒಂದು ಕಾಲದಲ್ಲಿ 70 ಲಾರಿಗಳ ಮಾಲಿಕನಾಗಿದ್ದ ಉದ್ಯಮಿಯೊಬ್ಬ ಶೋಕಿ ಜೀವನದಿಂದ ನಷ್ಟ ಹೊಂದಿ, ಸರಗಳ್ಳತನಕ್ಕಿಳಿದು ಇದೀಗ ಜೈಲು ಸೇರಿದ್ದಾನೆ.

Advertisement

ಹುಬ್ಬಳ್ಳಿಯ ಕೋಳಿ ವಾಡ ಮೂಲದ ವಿಶ್ವನಾಥ್‌(40) ಬಂಧಿತ. ಆರೋಪಿಯಿಂದ 24.15 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಬೆಂಗಳೂರು, ಧಾರ ವಾಡ, ಹೈದ್ರಾಬಾದ್‌ ಸೇರಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ 150ಕ್ಕೂ ಅಧಿಕ ಸರಗಳ್ಳತನ ಪ್ರಕರಣ ಗಳು ದಾಖಲಾಗಿದ್ದು, 8-10 ವರ್ಷಗಳಿಂದ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಮಾಹಿತಿ ನೀಡಿದರು.

ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಬನಶಂಕರಿ 3ನೇ ಹಂತದಲ್ಲಿ ವಾಸವಾಗಿದ್ದ ರಾಜಶೇಖರ್‌ ಎಂಬವರ ಮನೆ ಬಳಿ ಆ.19ರಂದು ರಾತ್ರಿ 8 ಗಂಟೆ ಸುಮಾರಿಗೆ ಹೋಗಿದ್ದು, ಅವರ ಪತ್ನಿಗೆ ರಾಜಶೇಖರ್‌ ಬಗ್ಗೆ ವಿಚಾರಿಸಿದ್ದಾನೆ. ಆಗ ಮಹಿಳೆ, ಪತಿ ಮೈಸೂರಿನಲ್ಲಿದ್ದಾರೆ ಎಂದಿದ್ದಾರೆ. ನಂತರ ಆರೋಪಿ ಮೈಸೂರಿನ ವಿಳಾಸ ಕೊಡಿ ಎಂದು ಕೇಳಿದ್ದಾನೆ. ಯಾರೋ ಪರಿಚಯಸ್ಥ ಇರಬೇಕೆಂದು ಮಹಿಳೆ ಮನೆಯೊಳಗೆ ಬನ್ನಿ ಎಂದು ಕರೆದೊಯ್ಯುತ್ತಿದ್ದಂತೆ, 40 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆದರೆ, ಆರೋಪಿ ಸುಳಿವು ಸಿಕ್ಕಿರಲಿಲ್ಲ. ಅ.11ರಂದು ಆರೋಪಿಯನ್ನು ತೆಲಂಗಾಣದ ಹೈದ್ರಾಬಾದ್‌ನ ಚೈತನ್ಯಪುರಿ ಠಾಣೆ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿರುವ ಮಾಹಿತಿ ಸಿಕ್ಕಿತ್ತು. ಬಳಿಕ ಬಾಡಿ ವಾರೆಂಟ್‌ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ ಕಳವು ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾನೆ. ಬಳಿಕ ಆರೋಪಿ ಬೆಂಗಳೂರು ರಾಜ್ಯದ ವಿವಿಧೆಡೆ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಸ್ನೇಹಿತನ ಮನೆಯಲ್ಲೂ ಚಿನ್ನಾಭರಣ ಇಟ್ಟಿದ್ದ
ಸರಗಳ್ಳತನ ಮಾಡಿದ್ದ ಚಿನ್ನಾಭರಣವನ್ನು ಹೊಸೂರು ರಸ್ತೆಯ ಗಾರ್ವೆಭಾವಿ ಪಾಳ್ಯದಲ್ಲಿ ನೆಲೆಸಿದ್ದ ಸ್ನೇಹಿತನ ಮನೆಯಲ್ಲಿ, ಸ್ನೇಹಿತನಿಗೆ ತಿಳಿಯದಂತೆ ಅಡಗಿಸಿಟ್ಟಿದ್ದ. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ತೆರಳಿ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಯಿತು. ಪೊಲೀಸರ ಕಂಡ ಆತನ ಸ್ನೇಹಿತ ವಿಚಾರ ತಿಳಿದುಕೊಂಡು ಅಚ್ಚರಿಗೊಳಗಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

2018ರಲ್ಲಿ ಕಾಲಿಗೆ ಗುಂಡೇಟು
ಆರೋಪಿ ವಿಶ್ವನಾಥ್‌ ವಿರುದ್ಧ ರಾಜ್ಯ ಹಾಗೂ ಹೊರರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಜ್ಞಾನಭಾರತಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಶೋಕಿಗಾಗಿ ಆಸ್ತಿಪಾಸ್ತಿಕಳಕೊಂಡು  ಬೀದಿಗೆ ಬಿದ್ದ ಕೋಟ್ಯಧಿಪತಿ!
ಒಂದು ಕಾಲದಲ್ಲಿ ಕೋಳಿವಾಡದಲ್ಲಿ 70 ಲಾರಿಗಳ ಮಾಲಿಕನಾಗಿದ್ದ ವಿಶ್ವನಾಥ್‌, ಗಣಿಗಾರಿಕೆ ವ್ಯವಹಾರವನ್ನು ಮಾಡುತ್ತಿದ್ದ. ಆದರೆ, ಶೋಕಿ ಜೀವನ ಹಾಗೂ ಹೆಣ್ಣಿನ ವ್ಯಾಮೋಹಕ್ಕೆ ಬಲಿಯಾಗಿ ಕೋಟ್ಯಂತರ ರೂ. ಆಸ್ತಿ-ಪಾಸ್ತಿ ಯನ್ನು ಕಳೆದುಕೊಂಡಿದ್ದಾನೆ. ಬಳಿಕ ಕುಟುಂಬದಿಂದ ದೂರವಾಗಿ, ಜೀವನ ನಿರ್ವಹಣೆ ಹಾಗೂ ತನ್ನ ಶೋಕಿ ಜೀವನಕ್ಕಾಗಿ ಸರ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ರಾಷ್ಟ್ರಮಟ್ಟದ ಬೈಕ್‌ ರೈಡರ್‌!
ಬಂಧಿತ ಆರೋಪಿ ವಿಶ್ವನಾಥ್‌ ಅವರ ವಿಚಾರಣೆಯಲ್ಲಿ ಮತ್ತೂಂದು ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ವಿಶ್ವನಾಥ್‌ ಕೋಟ್ಯಧಿಪತಿ ಮಾತ್ರವಲ್ಲ. ರಾಷ್ಟ್ರೀಯ ಮಟ್ಟದ ಬೈಕ್‌ ರೈಡರ್‌ ಕೂಡ ಆಗಿದ್ದ. ರಾಷ್ಟ್ರಿಯ ಮಟ್ಟದ ಹತ್ತಾರು ಬೈಕ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ ಎಂಬುದು ಗೊತ್ತಾಗಿದೆ. ಹೀಗಾಗಿ ಸರ ಕಳವು ಮಾಡುವ
ಮೊದಲು ಪ್ರವೇಶ ಮತ್ತು ನಿರ್ಗಮನ ರಸ್ತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದ. ಪ್ರಮುಖವಾಗಿ ಸಂಚಾರ ದಟ್ಟಣೆ ಬಗ್ಗೆ ಎಚ್ಚವಹಿಸುತ್ತಿದ್ದ. ಬಳಿಕ ಸರ ಕಳವು ಮಾಡಿ, ಕ್ಷಣಾರ್ಧದಲ್ಲೇ ಬೈಕ್‌ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ನಗರದಿಂದ ಹೊರ ಹೋಗುತ್ತಿದ್ದ. ಈತನ ಬೈಕ್‌ ಚಾಲನೆ ವೇಗಕ್ಕೆ ಯಾರು ಹಿಂಬಾಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ಅವರು ಮಾಹಿತಿ ನೀಡಿದರು.

ಮಾಡಿದ ಪಾಪ ತಟ್ಟದಂತೆ ದೇವರಿಗೆ ತಪ್ಪು ಕಾಣಿಕೆ!
ಲಾರಿ ವ್ಯವಹಾರದಲ್ಲಿ ನಷ್ಟ ಹೊಂದಿದ ಬಳಿಕ ಆರೋಪಿ ಸರಗಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ. ಬಳಿಕ ಬೇರೆಯವರ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಸೆಕೆಂಡ್‌ ಹ್ಯಾಂಡ್‌ ಬೈಕ್‌ಗಳನ್ನು ಖರೀದಿಸುತ್ತಿದ್ದ. ನಂತರ ಮನೆಯ ಗೇಟ್‌ ಮುಂಭಾಗ, ವಾಯುವಿಹಾರ ಮತ್ತು ಒಂಟಿಯಾಗಿ ನಡೆದು ಹೋಗುವ ಮಹಿಳೆಯರ ಬಳಿ ಮನೆ ವಿಳಾಸ ಹಾಗೂ ಇತರೆ ನೆಪವೊಡ್ಡಿ ಮಾತನಾಡಿಸಿ, ಕ್ಷಣಾರ್ಧದಲ್ಲೇ ಸರ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಜ್ಯುವೆಲ್ಲರಿ ಶಾಪ್‌ಗ್ಳಲ್ಲಿ ಪರಿಚಿತರ ಮೂಲಕ ಮಾರಾಟ ಮಾಡಿ, ಬಂದ ಹಣದಲ್ಲಿ ಗೋವಾ ಕ್ಯಾಸಿನೋ ಜೂಜಾಟ, ಹೆಣ್ಣಿನ ಶೋಕಿಗಾಗಿ ವ್ಯಯಿಸುತ್ತಿದ್ದ. ಹೀಗಾಗಿ ಸರಗಳವು ಮಾಡಿದ ಪಾಪ ಅಂಟಬಾರದೆಂದು, ದೇವಸ್ಥಾನಗಳ ಹುಂಡಿಗೆ ತಪ್ಪು ಕಾಣಿಕೆ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next