Advertisement

ಪುತ್ತಿಲ ಪರಿವಾರದ ನಡೆಯತ್ತ ಕುತೂಹಲ:ಷರತ್ತು ಇಲ್ಲದೆ ಪಕ್ಷ ಸೇರ್ಪಡೆಗೆ ರಾಜ್ಯಾಧ್ಯಕ್ಷರ ಸೂಚನೆ

10:13 AM Feb 23, 2024 | Team Udayavani |

ಪುತ್ತೂರು: “ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಪುತ್ತಿಲ ಪರಿವಾರದ ಅರುಣ್‌ ಪುತ್ತಿಲ ಅವರಿಗೆ ಸೂಚಿಸಿದ್ದೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.

Advertisement

ಅರುಣ್‌ ಪುತ್ತಿಲ ಹಾಗೂ ಬಿ.ವೈ. ವಿಜಯೇಂದ್ರ ನಡುವೆ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಕಳೆದ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಈಗ ಸ್ವತಃ ರಾಜ್ಯಾಧ್ಯಕ್ಷರೇ ಇದನ್ನು ಒಪ್ಪಿಕೊಂಡಿದ್ದು, ಪುತ್ತಿಲ ತನ್ನನ್ನು ಭೇಟಿ ಆಗಿರುವುದು ನಿಜ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಷರತ್ತು ಇಲ್ಲದೆ ಸೇರಿ

“ಬೇಷರತ್‌ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅರುಣ್‌ ಪುತ್ತಿಲ ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ’ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. “ಪುತ್ತಿಲ ವಿಚಾರವಾಗಿ ದಕ್ಷಿಣ ಕನ್ನಡದ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡುತ್ತೇನೆ. ಎಲ್ಲ ಕ್ಷೇತ್ರಗಳಲ್ಲೂ ನಮಗೆ ಬಿಜೆಪಿ, ಕಮಲ ಚಿಹ್ನೆಯಷ್ಟೇ ಅಭ್ಯರ್ಥಿ. ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲ’ ಎಂದೂ ಹೇಳಿದ್ದಾರೆ.

ಬಿಜೆಪಿಗೇ ಗಡುವು ನೀಡಿದ್ದ ಪುತ್ತಿಲ ಪರಿವಾರ

Advertisement

ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಿ ಪಕ್ಷ ಸೇರ್ಪಡೆಯಾಗುವುದಾದರೆ ಸ್ವಾಗತ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದರ ಬೆನ್ನಲ್ಲೇ ಪುತ್ತೂರಿನಲ್ಲಿ ಪರಿವಾರದ ಕಾರ್ಯಕರ್ತರ ಸಮಾಲೋಚನೆ ಸಭೆ ನಡೆಸಿದ್ದ ಪುತ್ತಿಲ, ಲೋಕಸಭಾ ಚುನಾವಣೆಗೆ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಅಲ್ಲದೆ ಈ ವಿಚಾರವಾಗಿ 3 ದಿನಗಳ ಒಳಗಾಗಿ ನಿರ್ಧಾರ ತಿಳಿಸಬೇಕು ಎಂದೂ ಬಿಜೆಪಿಗೆ ಗಡುವು ನೀಡಿದ್ದರು. ಪುತ್ತಿಲರಿಗೆ ಸ್ಥಾನಮಾನ ನೀಡುವುದಕ್ಕೆ ವರಿಷ್ಠರು ಹಸುರು ನಿಶಾನೆ ನೀಡಿದ್ದರೂ ಸ್ಥಳೀಯ ಬಿಜೆಪಿ ಹಾಗೂ ಸಂಘ ಪರಿವಾರದ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದಾಗಿ 20 ದಿನಗಳು ಕಳೆದಿದ್ದು, ಯಾವುದೇ ಬೆಳವಣಿಗೆ ನಡೆದಿಲ್ಲ.

ಕುತೂಹಲ ಮೂಡಿಸಿರುವ ಪುತ್ತಿಲ ಪರಿವಾರದ ನಡೆ

ಪುತ್ತಿಲ ಪರಿವಾರ ವಿಜಯೇಂದ್ರ ಅವರ ಹೇಳಿಕೆಯನ್ನು ಯಾವ ರೀತಿ ಸ್ವೀಕರಿಸಲಿದೆ ಎಂದು ಕಾದು ನೋಡಬೇಕಿದೆ. ಸ್ಥಾನಮಾನ ನೀಡಿಯೇ ಪುತ್ತಿಲ ಅವರನ್ನು ಸೇರ್ಪಡೆಗೊಳಿಸಬೇಕು ಎಂಬ ಪುತ್ತಿಲ ಪರಿವಾರದ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಯಾವುದೇ ಹುದ್ದೆ ಕೊಟ್ಟು ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂದು ಪರೋಕ್ಷ ವಾಗಿ ರಾಜ್ಯಾಧ್ಯಕ್ಷರೇ ತಿಳಿಸಿದ್ದು, ಪುತ್ತಿಲ ಪರಿವಾರದ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ. ಸದ್ಯ ಆಯೋಧ್ಯೆ ಪ್ರವಾಸದಲ್ಲಿರುವ ಪುತ್ತಿಲ ಅವರು ಬಂದ ಬಳಿಕವಷ್ಟೇ ಮುಂದಿನ ನಿರ್ಧಾರ ಸ್ಪಷ್ಟಗೊಳ್ಳಲಿದೆ.

ಮಂಡಲ ಅಧ್ಯಕ್ಷತೆ ಪೆಂಡಿಂಗ್‌

ದ.ಕ. ಜಿಲ್ಲೆಯಲ್ಲಿ ಪುತ್ತೂರು ಹೊರತುಪಡಿಸಿ ಉಳಿದ ಎಲ್ಲ ಮಂಡಲಗಳ ಅಧ್ಯಕ್ಷತೆಯನ್ನು ಘೋಷಿಸಲಾಗಿದೆ. ಪುತ್ತೂರನ್ನು ಬಾಕಿ ಇರಿಸಿರುವುದರ ಹಿಂದೆ ಅರುಣ್‌ ಪುತ್ತಿಲ ಅವರಿಗೆ ಅವಕಾಶ ನೀಡುವ ಬಗ್ಗೆ ನಡೆದ ಮಾತುಕತೆಯ ಪರಿಣಾಮವೂ ಅಡಗಿತ್ತು ಎನ್ನಲಾಗಿದೆ. ಇನ್ನೊಂದೆಡೆ ಜಿಲ್ಲಾ ಉಪಾಧ್ಯಕ್ಷತೆಯ ಒಂದು ಸ್ಥಾನ ಖಾಲಿ ಬಿಡಲಾಗಿದೆ. ಆದರೆ ಈ ಹುದ್ದೆಯನ್ನು ಅರುಣ್‌ ಪುತ್ತಿಲ ನಿರಾಕರಿಸಿದ್ದಾರೆ. ಹಾಗಾಗಿ ಮಂಡಲ ಅಧ್ಯಕ್ಷತೆಯನ್ನು ಪುತ್ತಿಲರಿಗೆ ಅಥವಾ ಅವರು ಸೂಚಿಸುವ ವ್ಯಕ್ತಿಗೆ ನೀಡುವುದೇ ಬಿಜೆಪಿಗೆ ಇರುವ ಒಂದು ಆಯ್ಕೆ ಯಾಗಿದೆ ಎನ್ನಲಾಗಿತ್ತು. ಈಗ ರಾಜ್ಯಾಧ್ಯಕ್ಷರು ಷರತ್ತು ರಹಿತವಾಗಿ ಬರು ವಂತೆ ತಿಳಿಸಿರುವುರಿಂದ ಅಧ್ಯಕ್ಷತೆ ಬಾಕಿ ಇರಿಸಿದ್ದರ ಒಳಗುಟ್ಟು ಇನ್ನಷ್ಟೇ ಬಹಿರಂಗವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next