ದಾವಣಗೆರೆ: ‘ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಆಗುವುದು ತಿರುಕನ ಕನಸು ಮಾತ್ರ ವಲ್ಲ ಹೋರಿ.. ಕಥೆಯಂತಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.
ಸೋಮವಾರ(ಡಿ16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಡಿ ಅಧ್ಯಕ್ಷ ಸ್ಥಾನ ನೀಡಿದರೆ ನಾನೂ ಸಹ ಸಿದ್ಧ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಅವರು ಬಿಜೆಪಿಗೆ ಬಂದು ಎಷ್ಟು ವರ್ಷಗಳಾದವು ಎಂಬುದಕ್ಕೆ ಮೊದಲು ಉತ್ತರ ಕೊಡಲಿ’ ಎಂದರು.
‘ಸೊರಬ ಕ್ಷೇತ್ರದಲ್ಲಿ ಸೋಲಿಗೆ ಅವರೇ ಕಾರಣ. ಕಾರ್ಯಕರ್ತರು, ಮುಖಂಡರ ಕೈಗೆ ಸಿಗುತ್ತಿರಲಿಲ್ಲ. ಯಾವ ಅಭಿವೃದ್ಧಿ ಕೆಲಸ ಮಾಡುತ್ತಿರಲಿಲ್ಲ ಎಂದು ಕ್ಷೇತ್ರದ ಜನರೇ ಹೇಳುತ್ತಾರೆ. ಸ್ಥಳೀಯವಾಗಿ ಬಿಜೆಪಿಯನ್ನೇ ಮುಗಿಸಿದ್ದಾರೆ. ರಾಜ್ಯ ಅಧ್ಯಕ್ಷ ಸ್ಥಾನ ಆಡೋ ಹುಡುಗನಾ ಆಟವಾ… ನಿನಗೆ(ಕುಮಾರ್ ಬಂಗಾರಪ್ಪ) ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಲು ಯಾರು ಅಧಿಕಾರ ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.
‘ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅಷ್ಟೇ ಸತ್ಯ. ಅವರ ನೇತೃತ್ವದಲ್ಲೇ ಸ್ಥಳೀಯ ಸಂಸ್ಥೆ, ಜಿಲ್ಲಾ, ತಾಲೂಕು ಪಂಚಾಯತ್, ವಿಧಾನ ಸಭಾ ಚುನಾವಣೆ ಎದುರಿಸುತ್ತೇವೆ. ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬುದು ರಾಷ್ಟ್ರೀಯ ನಾಯಕರಿಗೆ ಚೆನ್ನಾಗಿ ಗೊತ್ತಿದೆ’ ಎಂದು ತಿಳಿಸಿದರು.
‘ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಾತ್ರವೇ ರಾಜಕೀಯ ಸಮಾವೇಶ ಮಾಡುವ ಅಧಿಕಾರ ಇದೆ. ಹಾಗಾಗಿ ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಬಳಗದವರು ಭಾನುವಾರ ದಾವಣಗೆರೆಯಲ್ಲಿ ಸಭೆ ನಡೆಸಿ, ಯಡಿಯೂರಪ್ಪ ಅವರ ಜನ್ಮ ದಿನವನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರವಾಗಿರಬಹುದು. ಆದರೆ, ರಾಜಕಾರಣದಿಂದ ನಿವೃತ್ತರಾಗಿಲ್ಲ. ಪಕ್ಷಕ್ಕೆ ಸಲಹೆ, ಮಾರ್ಗ ದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರ ಜನ್ಮ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ’ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
‘ಸೋಮವಾರ ನಾನೊಬ್ಬನೇ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ರಾಷ್ಟ್ರೀಯ ನಾಯಕರ ಭೇಟಿ ಮಾಡಲಿದ್ದೇನೆ. ಎಲ್ಲ ನಾಯಕರ ಭೇಟಿಗೆ ದಿನ ದೊರೆಯುತ್ತಿದ್ದಂತೆ ಅಭಿಮಾನಿಗಳ ಬಳಗದ ಎಲ್ಲರೂ ದೆಹಲಿಗೆ ತೆರಳಿ ಭೇಟಿ ಮಾಡಲಿ ದ್ದೇವೆ’ ಎಂದು ತಿಳಿಸಿದರು.