Advertisement

ರಾಜ್ಯಕ್ಕೆ ಹೆಚ್ಚಿನ ಸೌರಶಕ್ತಿ ಬ್ಲಾಕ್‌ಗಳಿಗಾಗಿ ಕೇಂದ್ರ ಸಚಿವರಿಗೆ ಬಿ‌.ಸಿ.ಪಾಟೀಲ್ ಮನವಿ

08:57 PM Aug 28, 2020 | Hari Prasad |

ಹೊಸದಿಲ್ಲಿ: ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ ಸಿಂಗ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಉಭಯ ಸಚಿವರು ಸೌರಶಕ್ತಿ ಬಲವರ್ಧನೆ ಸಂಬಂಧ ಚರ್ಚಿಸಿದರು.

ಮತ್ತು ರಾಜ್ಯಕ್ಕೆ ಸೌರಶಕ್ತಿಗಾಗಿ ಹೆಚ್ಚುವರಿ 10 ಬ್ಲಾಕ್‌ಗಳನ್ನು ನೀಡುವಂತೆ ಸಚಿವ ಬಿ.ಸಿ. ಪಾಟೀಲ್ ಅವರು ಕೇಂದ್ರ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.

ಭಾರತ ಸೌರಶಕ್ತಿ ಬಳಕೆಗೆ ಹೆಚ್ಚು ಸೂಕ್ತವಾದ ಭೂಪ್ರದೇಶ ಹೊಂದಿರುವುದರಿಂದ ಕೃಷಿಯಲ್ಲಿ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯವಶ್ಯಕವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕೃಷಿ ನೀರಾವರಿಗೆ ಸೌರಶಕ್ತಿಯನ್ನು ಬಳಸುವುದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ.

Advertisement

ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಸೌರಶಕ್ತಿ ಯೋಜನೆ ಬಲವರ್ಧನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಟೀಲ್ ಅವರು ಮನವಿ ಮಾಡಿದರು.

ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ‌ ಮತ್ತು ರಾಜ್ಯದ ರೈತರಿಗೆ ಯೂರಿಯಾ ಗೊಬ್ಬರ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಕೇಂದ್ರ ರಸಾಯನಿಕ ಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ‌ ಎಂದರು.

ಇದೇ ಸಂದರ್ಭದಲ್ಲಿ, ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿ ನಡೆಸಿ ಅಂಕೋಲಾ – ಹುಬ್ಬಳ್ಳಿ ರೈಲ್ವೆ ಯೋಜನೆ ಬಗ್ಗೆ ಚರ್ಚಿಸಲಾಗಿದೆ‌. ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಬಗ್ಗೆ ಪ್ರಕಾಶ ಜಾವಡೇಕರ್ ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಪಾಟೀಲ್ ತಿಳಿಸಿದರು.

ಹಾಗೆಯೇ ಸಂಸದ ಪ್ರಹ್ಲಾದ್ ಜೋಶಿ ಅವರ ಮುಂದೆಯೂ ಇಲಾಖೆ ಪರವಾಗಿ ಹಲವು ಬೇಡಿಕೆಗಳನ್ನು ಇಡಲಾಗಿದೆ‌ ಮತ್ತು ಕೇಂದ್ರ ಇಂಧನ ಸಚಿವ ಆರ್.ಕೆ ಸಿಂಗ್ ಭೇಟಿ ಮಾಡಿ ಸೋಲಾರ್ ಬ್ಲಾಕ್ ನೀಡುವ ಬಗ್ಗೆ ಮನವಿ ಮಾಡಿರುವುದಾಗಿ ಬಿ.ಸಿ. ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿಯಾಗುತ್ತಿರುವ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮಾಹಿತಿ ನೀಡಲಾಗಿದೆ ಹಾಗೂ ಈ ಆ್ಯಪ್ ಸಮೀಕ್ಷೆಯಿಂದಾಗುತ್ತಿರುವ ಅನುಕೂಲದ ಬಗ್ಗೆಯೂ ವಿವರಿಸಲಾಗಿದೆ‌.

ಅಲ್ಲದೇ ರಾಜ್ಯದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿರುವುದಾಗಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ನಡೆದ ದಾಂಧಲೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜ್ ಇಬ್ಬರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ.

ಇಂತಹ ಹೋರಾಟಗಾರರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಪ್ರಯತ್ನಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿರುವುದು ದುರದೃಷ್ಟಕರ ಬೆಳವಣಿಗೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next