Advertisement

ರಾಜ್ಯಮಟ್ಟದ ರ್‍ಯಾಂಕಿಂಗ್‌: ಉಡುಪಿ ನಗರಸಭೆ ಕುಸಿತ

01:00 AM Mar 12, 2019 | Team Udayavani |

ಉಡುಪಿ: ಕೇಂದ್ರ ಸರಕಾರದ ಸ್ವತ್ಛ ಭಾರತ ಅಭಿಯಾನದಲ್ಲಿ ನಡೆದ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯ ರಾಷ್ಟ್ರ ಹಾಗೂ ರಾಜ್ಯಮಟ್ಟದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಉಡುಪಿ ನಗರ ವಿಫ‌ಲವಾಗಿದೆ.

Advertisement

ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಸ್ವತ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಈ ಬಾರಿಯ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯ ರಾಷ್ಟ್ರ ಮಟ್ಟದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಡುಪಿ ನಗರ 198ಸ್ಥಾನದಿಂದ 254 ಸ್ಥಾನಕ್ಕೆ ಕುಸಿತ ಕಂಡಿದೆ. ರಾಜ್ಯ ಮಟ್ಟದಲ್ಲಿ 5ನೇ ಸ್ಥಾನದಿಂದ 8ಸ್ಥಾನಕ್ಕೆ ಕುಸಿದಿದೆ.

ರಾಜ್ಯಮಟ್ಟದಲ್ಲಿ ರ್‍ಯಾಂಕಿಂಗ್‌ ಕುಸಿತ
ಕಳೆದ ಬಾರಿ ಸ್ವತ್ಛ ಸರ್ವೇಕ್ಷಣಾದಲ್ಲಿ ಕೇವಲ 471 ನಗರ ಇದ್ದು, ಈ ಬಾರಿ ಅದನ್ನು 4,022 ನಗರಗಳಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ರ್‍ಯಾಂಕಿಂಗ್‌ ಕುಸಿಯುವುದು ಸಹಜ. ಆದರೆ ರಾಜ್ಯಮಟ್ಟದಲ್ಲಿಯೂ ಅಗ್ರಸ್ಥಾನ ಕಾಯ್ದು ಕೊಳ್ಳುವಲ್ಲಿ ಉಡುಪಿ ನಗರ ಸೋತು ಹೋಗಿದೆ.

ಸ್ವತ್ಛತೆ ಆಧಾರದ ಮೇಲೆ ರ್‍ಯಾಂಕಿಂಗ್‌
ಸ್ವತಂತ್ರ ಸಂಸ್ಥೆಗಳ ಅಧಿಕಾರಿಗಳು ಆಯಾ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಸ್ವತ್ಛತೆ ಪರಿಶೀಲನೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದ, ಸಾರ್ವಜನಿಕ ಸ್ಥಳ ಸ್ವತ್ಛತೆ, ಸಾರ್ವಜನಿಕ ಶೌಚಾಲಯದ ಸ್ಥಿತಿಗತಿ, ತ್ಯಾಜ್ಯ ವಿಲೇವಾರಿ, ಗಟಾರ, ಒಳಚರಂಡಿ ವ್ಯವಸ್ಥೆ, ಕಸ ಸಂಗ್ರಹಣೆ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಮೀಕ್ಷೆ, ನೇರ ಭೇಟಿಯ ಜತೆಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಸಿಬಂದಿ ಕೊರತೆ ರ್‍ಯಾಂಕಿಂಗ್‌ ಕುಸಿತಕ್ಕೆ ಕಾರಣವೇ?
ಉಡುಪಿ ನಗರಸಭೆಯಲ್ಲಿ ಸಿಬಂದಿಗಳ ಕೊರತೆಯಿಂದ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಅಸಫ‌ಲರಾದರೇ ಎನ್ನುವ ಅನುಮಾನ ಕಾಡುತ್ತಿದೆ.

Advertisement

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 156 ಪೌರಕಾರ್ಮಿಕರ ಹುದ್ದೆ ಖಾಲಿಯಿದ್ದು, ಅದರಲ್ಲಿ ದಿನಕೂಲಿ ಆಧಾರದ ಮೇಲೆ ಸುಮಾರು 118 ಸಿಬಂದಿಗಳನ್ನು ಪೌರಕಾರ್ಮಿಕ ಹುದ್ದೆಗೆ ನೇಮಿಸಿಕೊಂಡು ನಿರ್ವಹಿಸಲಾಗುತ್ತಿದೆ. ಈ ಸಿಬಂದಿಗಳು ಇತ್ತೀಚಿಗೆ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಕಾಣ ಸಿಗುವುದೆ ಅಪರೂಪ. ಚುನಾವಣೆ ಮುಗಿದು ಕೆಲವು ತಿಂಗಳು ಕಳೆದರೂ ಆಯ್ಕೆಯಾದ ಜನಪ್ರತಿನಿಧಿಗಳಿನ್ನೂ ಅಧಿಕಾರ ಸ್ವೀಕರಿಸದಿರುವುದೂ ಅವ್ಯವಸ್ಥೆಗೆ ಇನ್ನೊಂದು ಕಾರಣವೆನ್ನಲಾಗಿದೆ. ಇವೆಲ್ಲ ಕಾರಣಗಳು ಸೇರಿ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯ ರಾಜ್ಯಮಟ್ಟದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಡುಪಿ ನಗರ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ವಿಫ‌ಲವಾಗಿದೆ ಎನ್ನಲಾಗುತ್ತಿದೆ. 

ಸಾರ್ವಜನಿಕರ ಅಭಿಪ್ರಾಯವೂ ಕಾರಣ?
ಸಾರ್ವಜನಿಕರು ಸ್ವತ್ಛತೆಯ ಬಗ್ಗೆ ನೀಡುವ ಋಣಾತ್ಮಕ ಹೇಳಿಕೆಗಳು ಸಹ ರ್‍ಯಾಂಕಿಂಗ್‌ ನಿರ್ಧರಿಸಲಿದೆ. ಸರ್ವೇಕ್ಷಣಾ ತಂಡಗಳು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸದೆ ಸಾರ್ವಜನಿಕರಿಂದಲೂ ಮಾಹಿತಿ ಪಡೆಯುವ ಕಾರಣ ಅಲ್ಲೊಂದಿಷ್ಟು ವಾಸ್ತವಾಂಶ ಬೆಳಕು ಕಾಣುತ್ತದೆ. ಸ್ವತ್ಛತೆ ಬಗ್ಗೆ ನಗರಾಡಳಿತ ನಿರ್ಲಕ್ಷ ವಹಿಸಿದರೆ ಸಾರ್ವಜನಿಕರ ಮಾಹಿತಿಯಿಂದಲೂ ವಾಸ್ತವ ಗೋಚರವಾಗುತ್ತದೆ.

ಎಲ್ಲ ವಿಭಾಗಗಳಲ್ಲೂ ಉತ್ತಮ ನಿರ್ವಹಣೆ ಅಗತ್ಯ
ನಗರ ಸ್ವತ್ಛತೆಗೆ ಸಂಬಂಧಿಸಿದಂತೆ ವಾಹನಗಳು, ಪರಿಕರಗಳು ಹಾಗೂ ಮೂಲ ಸೌಕರ್ಯಗಳ ಅಗತ್ಯವಿದೆ. ಎಲ್ಲ ವಿಭಾಗಗಳಲ್ಲೂ ಉತ್ತಮ ನಿರ್ವಹಣೆ ಇದ್ದರೆ ಮಾತ್ರ  ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಬಹುದು.
-ರಾಫ‌ವೇಂದ್ರ, ಪರಿಸರ ಎಂಜಿನಿಯರ್‌, ನಗರಸಭೆ ಉಡುಪಿ 

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next