Advertisement

ಶೇಖಮಲೆ: ರಾಜ್ಯ ಹೆದ್ದಾರಿಯಲ್ಲಿ ಬೃಹತ್‌ ಕುಸಿತ

08:41 PM Sep 08, 2017 | Team Udayavani |

ಪುತ್ತೂರು: ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಸೇತುವೆಯ ಬಳಿ ಹೆದ್ದಾರಿ ಕುಸಿತ ಉಂಟಾಗಿದೆ. ಸುಮಾರು 1 ಅಡಿ ಆಳಕ್ಕೆ ಕುಸಿತ ಉಂಟಾಗಿರುವುದರಿಂದ ಸಂಚಾರಕ್ಕೆ ತೊಡಕಾಗಿದೆ. ಕುಸಿತ ಸಂಭವಿಸಿ ವಾರ ಕಳೆದಿದ್ದು, ವಾಹ ನಗಳ ಸಂಚಾರಕ್ಕೆ ಅಪಾಯಕಾರಿಯಾಗಿತ್ತು. 4 ದಿನಗಳ ಬಳಿಕ ಹೆದ್ದಾರಿಗೆ ಸಂಬಂಧಿಸಿದ ಗುತ್ತಿಗೆದಾರು ಕುಸಿತದ ಸುತ್ತಲೂ ಗುರುತು ಹಾಕಿದ್ದಾರೆ. ಆದರೆ ಘನ ವಾಹನಗಳು ಸಂಚರಿಸುವುದರಿಂದ ಕುಸಿತ ಸಂಭವಿಸಿದ ಜಾಗದಲ್ಲೇ ಸಂಚಾರ ಅನಿವಾರ್ಯ. ಇದರಿಂದ ಕುಸಿತದ ಪ್ರಮಾಣವೂ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ.

Advertisement

ಹಳೆಯ ಸೇತುವೆ
ಈ ಬೃಹತ್‌ ಗಾತ್ರದ ರಸ್ತೆ ಕುಸಿತವು ಹಳೆಯ ಸೇತುವೆಯ ಒಂದು ತುದಿಯಲ್ಲಿ ಸಂಭವಿಸಿರುವುದರಿಂದ ಹೆಚ್ಚು ಅಪಾಯಕಾರಿ ಎಣಿಸಿದೆ. ಸೇತುವೆಗೆ ತಾಗಿಕೊಂಡಂತೆ ಒಳಭಾಗದಲ್ಲಿ ಎಷ್ಟು ಪ್ರಮಾಣದ ಕುಸಿತ ಉಂಟಾಗಿದೆ ಎಂಬುದು ತಿಳಿಯುತ್ತಿಲ್ಲ. ಈ ಕುರಿತಂತೆ ಹೆದ್ದಾರಿಗೆ ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕಷ್ಟೆ.

ಮನವಿ ಮಾಡಲಾಗಿದೆ: ಕುಸಿತ ಸಂಭವಿಸಿರುವ ಕುರಿತು ಎಕ್ಸಿಕ್ಯೂಟಿವ್‌ ಎಂಜಿನಿಯರ್‌ರನ್ನು ಸಂಪರ್ಕಿಸಿದ್ದೇವೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮೌಖೀಕವಾಗಿ ಸೂಚಿಸಿದ ಮೇರೆಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ತತ್‌ಕ್ಷಣ ದುರಸ್ತಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ. ಶಾಸಕರಿಗೂ ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್‌ ಒಳಮೊಗ್ರು ಗ್ರಾಮ ಸಮಿತಿ ಕಾರ್ಯದರ್ಶಿ ಸಂತೋಷ್‌ ಭಂಡಾರಿ ಚಿಲ್ಮೆತ್ತಾರು ತಿಳಿಸಿದ್ದಾರೆ.

ದುರಸ್ತಿ ಯಾವಾಗ?
ರಾಜ್ಯ ಹೆದ್ದಾರಿಯಾಗಿರುವುದರಿಂದ ಹೆದ್ದಾರಿಯಲ್ಲಿ ಘನ ವಾಹನಗಳ ಸಹಿತ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಕುಸಿತ ಉಂಟಾಗಿ ವಾರ ಕಳೆದರೂ ಸಂಬಂಧಿಸಿದ ಗುತ್ತಿಗೆದಾರ ಸಂಸ್ಥೆಯವರು ಸರಿಪಡಿಸುವ ಕಾಮಗಾರಿಗೆ ಮುಂದಾಗಿಲ್ಲ. ಮಳೆಗಾಲವೂ ಆಗಿರುವುದರಿಂದ ಕುಸಿತದ ಪ್ರಮಾಣ ಇನ್ನಷ್ಟು ಅಧಿಕವಾಗುವ ಸಾಧ್ಯತೆ  ಇದೆ. ಸಂಭಾವ್ಯ ಅನಾಹುತಕ್ಕೆ ಮುನ್ನ ಎಚ್ಚೆತ್ತುಕೊಂಡರೆ ಉತ್ತಮ.

ಶುಕ್ರವಾರ ದುರಸ್ತಿ ಕಾಮಗಾರಿ 
ಮಳೆಗಾಲದಲ್ಲಿ ತೇವಾಂಶ ಅಧಿಕವಾದ ಸಂದರ್ಭದಲ್ಲಿ ವಾಹನಗಳ ಒತ್ತಡ ಜಾಸ್ತಿಯಾದ ಕಾರಣ ರಸ್ತೆ ಕುಸಿತ ಉಂಟಾಗಿದೆ. ಕೆಲಸಗಾರರು ಊರಲ್ಲಿ ಇರಲಿಲ್ಲ. ಶುಕ್ರವಾರದಿಂದ ದುರಸ್ತಿ ಕಾಮಗಾರಿ ಆರಂಭಿಸಲಾಗುತ್ತದೆ.
– ಲಿಂಗೇಗೌಡ, ಡಿ.ಇ., ಕೆಆರ್‌ಡಿಸಿಎಲ್‌ ಸಂಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next