ಬೆಂಗಳೂರು: ಹೊಳೆನರಸಿಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ಕಣ್ಣೀರಿಟ್ಟಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಿದ್ದಾರೆ.
ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ “ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ. ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ. ಚುನಾವಣೆ ಬಂದಾಗ ಮನೆ ಮಂದಿಗೆಲ್ಲ ಕಣ್ಣೀರು! ರಾಜ್ಯ ಜನ ಈಗಲೂ ಮರುಳಾಗುವರೇ? “ಅಳವುದನ್ನೇ ಕಲೆಯಾಗಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬ ಒಂದು ದಶಕದಿಂದ ಜನರನ್ನು ಮೂರ್ಖರನ್ನಾಗಿಸಿದೆ. ವಾಸ್ತವಾಂಶ ಏನೆಂದರೆ, ಚುನಾವಣೆಗೂ ಮೊದಲು ದೇವೇಗೌಡ ಮತ್ತು ಅವರ ಕುಟುಂಬ ಅಳುತ್ತದೆ. ಚುನಾವಣಾ ನಂತರ ಅವರಿಗೆ ಓಟು ನೀಡಿದ ಕುಟುಂಬದವರು ಅಳುತ್ತಾರೆ.’ ಜಿಜೆಪಿ ಕರ್ನಾಟಕ ಟ್ವೀಟ್ ಅನ್ನೇ ಬಹುತೇಕ ನಾಯಕರು ಟ್ಯಾಗ್ ಮಾಡಿದ್ದಾರೆ.
ಸಾರ್ವಜನಿಕವಾಗಿ ಅಳುವುದಕ್ಕೂ ಹಲವು ಕಾರಣಗಳುಂಟು. ವಯಸ್ಸು, ಒತ್ತಡಗಳೂ ಪ್ರಭಾವ ಬೀರುತ್ತವೆ. ಕೆಲವರ ಸ್ವಭಾವದಲ್ಲೇ ಸೂಕ್ಷ್ಮತೆ ಇದ್ದರೆ, ಅಂಥವರಲ್ಲಿ ಅಳು ಸಾಮಾನ್ಯವಾಗಿ ಬರುತ್ತಿರುತ್ತದೆ. ಎದುರಿನವರ ಮನಸ್ಸನ್ನು ಬದಲಿಸುವುದಕ್ಕೋಸ್ಕರ ಅಳುವವರೂ ಇದ್ದಾರೆ. ಸಮೂಹವನ್ನು ಓಲೈಸಿಕೊಳ್ಳುವ ತಂತ್ರಗಾರಿಕೆ ಅವರದ್ದು ಇದ್ದಿರಬಹುದು. ಆದರೆ, ಇವು ಎದುರಿನವರ ಮನಸ್ಸಿನಲ್ಲಿ ಕೆಲವೇ ದಿನಗಳವರೆಗಷ್ಟೇ ಅಚ್ಚೊತ್ತಿರುತ್ತವೆ. ಇನ್ನು ಬೆರಳೆಣಿಕೆಯ ಮಂದಿಗೆ, ತಾವು ನಾಟಕೀಯವಾಗಿ ಅತ್ತಿದ್ದಕ್ಕೆ, ಮುಂದೆ ಪಶ್ಚಾತ್ತಾಪ ಕಾಡುವುದೂ ಉಂಟು.
● ಡಾ. ಶಿವದೇವ್, ಸೈಕಿಯಾಟ್ರಿಸ್ಟ್