ಮುಂಬಯಿ: ದೇಶದ ಬೃಹತ್ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವಿಡ್ ದಿಗ್ಬಂಧನದ ವೇಳೆ ಜನರ ಜತೆಗೆ ಬಲವಾಗಿ ನಿಂತಿದೆ.
ಈ ಸಂಕಷ್ಟದ ಸಮಯದಲ್ಲಿ ಅದು ಸರಣಿ ಸರಣಿಯಾಗಿ ಯೋಜನೆಗಳನ್ನು ಪ್ರಕಟಿಸುತ್ತಿದೆ. ಈಗ ತನ್ನ ಗ್ರಾಹಕರಿಗೆ ಕೇವಲ 45 ನಿಮಿಷದಲ್ಲಿ 5 ಲಕ್ಷ ರೂ. ತುರ್ತು ಸಾಲ ಮಂಜೂರು ಮಾಡುವ ಯೋಜನೆ ಘೋಷಣೆ ಮಾಡಿದೆ.
ಗ್ರಾಹಕರು ಯೋನೊ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಅಥವಾ ನೇರವಾಗಿ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ತುರ್ತು ಸಾಲದ ಮೇಲೆ ಶೇ.10.5ರಷ್ಟು ಬಡ್ಡಿಯಿರುತ್ತದೆ. 6 ತಿಂಗಳ ಅನಂತರ ಮಾಸಿಕ ಕಂತು ಆರಂಭವಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?: ಗ್ರಾಹಕರು ಮೊದಲು ತಮಗೆ ಸಾಲ ಪಡೆದುಕೊಳ್ಳುವ ಅರ್ಹತೆ ಇದೆಯಾ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಅದಕ್ಕಾಗಿ PAPL ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು, ಎಸ್‌ಬಿಐ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು, 567676ಕ್ಕೆ ಕಳುಹಿಸಬೇಕು.
ಮೊಬೈಲ್‌ನಲ್ಲಾದರೆ ಗ್ರಾಹಕರು ಯೋನೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಪ್ರೀ ಅಪ್ರೂವ್ಡ್ ಲೋನ್ ಎಂಬ ಆಯ್ಕೆ ಮೇಲೆ ಒತ್ತಬೇಕು. ನಂತರ ಸಾಲದ ಅವಧಿ, ಮೊತ್ತವನ್ನು ಖಚಿತಪಡಿಸಬೇಕು. ಆಗ ಒಟಿಪಿ (ಒನ್‌ಟೈಮ್ ಪಾಸ್‌ವರ್ಡ್) ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದು ಸಲ್ಲಿಕೆಯಾದರೆ ಹಣ ನೀಡುವುದನ್ನು ಖಚಿತಪಡಿಸಲಾಗುತ್ತದೆ.