Advertisement

ಮಾರ್ಗಸೂಚಿಯನ್ವಯ ಕೈಗಾರಿಕೆಗಳ ಆರಂಭ

04:41 PM Apr 30, 2020 | Suhan S |

ಬೆಳಗಾವಿ:  ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮೇ 3ರ ಬಳಿಕ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ತೀರ್ಮಾನ ಹಾಗೂ ಮಾರ್ಗಸೂಚಿ ಆಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಅನುವು ಮಾಡಿಕೊಡಲಾಗುವುದು ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಯಮಿಗಳಿಗೆ ಭರವಸೆ ನೀಡಿದರು.

Advertisement

ನಗರದ ಉದ್ಯಮಭಾಗದ ಫೌಂಡ್ರಿ ಕ್ಲಸ್ಟರ್‌ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ 3ಕ್ಕೆ ಲಾಕ್‌ ಡೌನ್‌ ಮುಗಿದ ಬಳಿಕ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಕೈಗಾರಿಕೋದ್ಯಮಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅವರು ಮುಂಬರುವ ದಿನಗಳಲ್ಲಿ ಕಾರ್ಮಿಕರು-ಕೈಗಾರಿಕೋದ್ಯಮಿಗಳು ಮತ್ತು ಉತ್ಪಾದನೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಂಕು ಪತ್ತೆಯಾಗಿರುವ ಪ್ರದೇಶದಿಂದ ಕೈಗಾರಿಕೆಗಳು ದೂರದಲ್ಲಿವೆ. ಆದ್ದರಿಂದ ಕೈಗಾರಿಕೆಗಳು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಕೈಗಾರಿಕೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು. ಕಾರ್ಮಿಕರ ಆರೋಗ್ಯ, ಅವರಿಗೆ ಊಟ-ವಸತಿ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ಆಯಾ ಕೈಗಾರಿಕೋದ್ಯಮಿಗಳ ಹೊಣೆಯಾಗಿರಲಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕೈಗಾರಿಕೋದ್ಯಮಿಗಳು, ಕೋವಿಡ್ 19  ಭೀತಿಯಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಒಮ್ಮೆ ಹೀಗೆ ಕಾರ್ಮಿಕರು ಹೋದರೆ ನಂತರದ ದಿನಗಳಲ್ಲಿ ತಕ್ಷಣವೇ ಕೈಗಾರಿಕೆ ಪುನರಾರಂಭಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗಾರಿಕೆಗಳನ್ನು ಆರಂಭಿಸಲು ತಾವು ಸಿದ್ಧರಿದ್ದು, ಕಾರ್ಮಿಕರಿಗೆ ಪಾಸ್‌ ಮತ್ತು ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸಬೇಕು ಎಂದು ಉದ್ಯಮಿಗಳು ಸಚಿವರನ್ನು ವಿನಂತಿಸಿಕೊಂಡರು.

Advertisement

ಸಭೆಯಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬುಡಾ ಅಧ್ಯಕ್ಷಗೂಳಪ್ಪ ಹೊಸಮನಿ, ಜಿಲ್ಲಾ ಕೊವಿಡ್‌ -19 ನೋಡಲ್‌ ಅಧಿಕಾರಿ ರಾಜೇಂದ್ರ ಚೋಳನ್‌, ಜಿಲ್ಲಾಧಿಕಾರಿ ಡಾ.ಎಸ್‌ .ಬಿ.ಬೊಮ್ಮನಹಳ್ಳಿ, ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next