Advertisement

Mangaluru: ಬಂದರು ನಗರಿಯ ಕೈಗಾರಿಕೆಗಳಿಗೆ ʼಇ ಖಾತಾ’ ಇಕ್ಕಟ್ಟು!

05:50 PM Nov 11, 2024 | Team Udayavani |

ಮಹಾನಗರ: ಬಂದರು ನಗರಿ ಮಂಗಳೂರಿನ ಕೈಗಾರಿಕೆ ಪ್ರದೇಶ ವ್ಯಾಪ್ತಿಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದ ಸರಕಾರದ ಕ್ರಮ ಈಗ ಕೈಗಾರಿಕೋದ್ಯಮಿಗಳಿಗೆ ಇಕ್ಕಟ್ಟು ಸೃಷ್ಟಿಸಿದೆ. ಕೆಲವೊಂದು ಕೈಗಾರಿಕೆಗಳಿಗೆ ಡೋರ್‌ ನಂಬರ್‌ ಸಿಗದೆ ಇರುವುದು, ತಂತ್ರಾಂಶದಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಇ-ಖಾತಾ ಮಾಡಲು ಭಾರಿ ಸಮಸ್ಯೆ ಎದುರಾಗಿದೆ. ಇ-ಖಾತಾ ಇಲ್ಲದೆ ಹಲವು ಸವಲತ್ತುಗಳಿಂದ ಉದ್ಯಮಿಗಳು ವಂಚಿತರಾಗಬೇಕಾಗಿದೆ.

Advertisement

ತೆರಿಗೆ ಮತ್ತು ಇ-ಖಾತೆ ಸಂಕೋಲೆ
ಕೈಗಾರಿಕೆಗಳು ಕೆಐಎಡಿಬಿಗೆ ನಿರ್ವಹಣೆ ವೆಚ್ಚ ಎಂಬ ನೆಲೆಯಲ್ಲಿ ತೆರಿಗೆ ಪಾವತಿಸಬೇಕು, ಮಂಗಳೂರು ಪಾಲಿಕೆಗೂ ತೆರಿಗೆ ಪಾವತಿಸಬೇಕು. ಈ ಡಬಲ್‌ ತೆರಿಗೆ ವಿಚಾರದಲ್ಲಿ ಅಸಮಾಧಾನ ಇರುವುದರಿಂದ ಕೆಲವು ಕೈಗಾರಿಕೆಗಳು ಸಮರ್ಪಕವಾಗಿ ತೆರಿಗೆ ಪಾವತಿಸಿಲ್ಲ. ಸೆಸ್‌ ಆಧಿಕ ಎಂಬ ದೂರಿನ ಕುರಿತೂ ಅಂತಿಮ ತೀರ್ಮಾನ ಆಗಿಲ್ಲ. ಆದರೆ, ತೆರಿಗೆ ಸಮರ್ಪಕವಾಗಿ ಪಾವತಿಸದೆ ಇದ್ದರೆ ಡೋರ್‌ ನಂಬರ್‌ ಸಿಗುವುದಿಲ್ಲ. ಡೋರ್‌ ನಂಬರ್‌ ಸಿಗದೆ ಇ-ಖಾತೆ ಸಿಗುತ್ತಿಲ್ಲ.

ಜತೆಗೆ ಹೆಚ್ಚಿನ ಕೈಗಾರಿಕೆಗಳ ಆಸ್ತಿಗಳಿಗೆ ನಿಯಮ ಅನ್ವಯ ಇ-ಖಾತಾ ನೀಡಲು ತಂತ್ರಾಶದಲ್ಲಿನ ದೋಷದಿಂದಾಗಿ ಇ-ಖಾತಾ ನೋಂದಣಿ ಮಾಡಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಹಿಂದೆ ಅನುಸರಿಸುತ್ತಿದ್ದ ಪದ್ದತಿಯಂತೆ ಲಭ್ಯವಿರುವ ಖಾತಾಗಳ ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ನಿರ್ವಹಿಸಲು ಅವಕಾಶ ನೀಡಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹ.

ಕೈಗಾರಿಕಾ ಪ್ರದೇಶದ ನೋಟ
ಕರಾವಳಿಯ ಅತೀ ದೊಡ್ಡ ಕೈಗಾರಿಕಾ ಪ್ರದೇಶವಾದ 550 ಎಕರೆ ವ್ಯಾಪ್ತಿಯ ಬೈಕಂಪಾಡಿಯಲ್ಲಿ 650ಕ್ಕೂ ಅಧಿಕ ಕೈಗಾರಿಕೆಗಳಿವೆ. 15 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗಿಗಳಿದ್ದಾರೆ.

ರಾಜ್ಯದ 2ನೇ ಹಳೆ ಕೈಗಾರಿಕಾ ಎಸ್ಟೇಟ್‌ ಆಗಿರುವ 17.58 ಎಕರೆ ಪ್ರದೇಶದ ಯೆಯ್ನಾಡಿ ಕೈಗಾರಿಕಾ ಪ್ರದೇಶದಲ್ಲಿ 90 ಉದ್ದಿಮೆಗಳಿವೆ. 2,500ಕ್ಕೂ ಅಧಿಕ ಕಾರ್ಮಿಕರು ಇಲ್ಲಿದ್ದಾರೆ. ಕೊಲಾ°ಡು ಸೇರಿ ಜಿಲ್ಲೆಯ ಇನ್ನೂ ಕೆಲವು ಕಡೆ ಕೈಗಾರಿಕಾ ವಲಯವಿದೆ. ಎಲ್ಲರಿಗೂ ಇ-ಖಾತಾ ಬಿಕ್ಕಟ್ಟು ಎದುರಾಗಿದೆ.

Advertisement

ಸಂಕಷ್ಟಕ್ಕೀಡಾಗಿವೆ
ರಾಜ್ಯ ಸರಕಾರದ ನಿಯಮದಿಂದಾಗಿ ಅನೇಕ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಸರಕಾರ, ಪಂಚಾಯತ್‌ನ ಪೂರ್ವ ತಯಾರಿಯಿಲ್ಲದೆ ಆಸ್ತಿ ನೋಂದಣಿಗೆ ಈ-ಖಾತಾ ಕಡ್ಡಾಯಗೊಳಿಸಿ, ಈ-ಖಾತಾ ವಿಳಂಬಕ್ಕೆ ಉದ್ದಿಮೆದಾರರ ಹೊಣೆ ಮಾಡುವುದು ಸರಿಯಲ್ಲ. ಆಸ್ತಿ ನೊಂದವಣೆಯಲ್ಲಿ ಕೆಳವೊಂದು ಬದಲಾವಣೆ ಮಾಡಿಕೊಂಡು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು.
-ಎನ್‌. ಅರುಣ್‌ ಪಡಿಯಾರ್‌ , ಅಧ್ಯಕ್ಷರು, ಕೆನರಾ ಕೈಗಾರಿಕೆ ಸಂಘ

ಸಮಸ್ಯೆಗಳ ಸುಳಿ
ಸರಕಾರ ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ ಮಾಡಿದೆ. ಆದರೆ, ಕರಡು ಖಾತಾಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಆಗುತ್ತಿಲ್ಲ. ಮತ್ತೂಂದೆಡೆ ಇ ಖಾತೆ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದಿರುವುದರಿಂದ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದು ಸೇರಿ ಯಾವುದೇ ವಹಿವಾಟು ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಿಕೆ ಕಂದಾಯ ಅಧಿಕಾರಿಗಳ ಪ್ರಕಾರ, ‘ಇ ಖಾತೆ’ ಅಗತ್ಯವಾಗಿ ಮಾಡಿಸಬೇಕಾಗಿದೆ. ಆದರೆ, ಕೈಗಾರಿಕೆಯವರಿಗೆ ಘನತ್ಯಾಜ್ಯ ತೆರಿಗೆಯಲ್ಲಿ ಮೈಸೂರು ಪಾಲಿಕೆಯಲ್ಲಿ ಇದ್ದ ಹಾಗೆ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆ ಪ್ರಕ್ರಿಯೆ ಈಗ ನಡೆಯುತ್ತಿದೆ. ಆದರೂ, ಆಸ್ತಿ ಸ್ವಂತ ಹೊಂದಿದ್ದವರು ಮಾರಾಟ ಸಂದರ್ಭಕ್ಕೆ ಇ ಖಾತೆ ಮಾಡಿಸಲೇಬೇಕು.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next