Advertisement

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

03:13 PM Dec 26, 2024 | Team Udayavani |

ಕುಂದಾಪುರ: ಜಮ್ಮುಕಾಶ್ಮೀರದ ಪೂಂಛ್‌ನಲ್ಲಿ ಡಿ.25ರ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಡಿ.26ರ ಗುರುವಾರ ಮಧ್ಯಾಹ್ನ ಅವರ ಹುಟ್ಟೂರಾದ ಬೀಜಾಡಿಗೆ ಮೆರವಣಿಗೆ ಮೂಲಕ ತರಲಾಗಿದೆ. ಈ ವೇಳೆ ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು.

Advertisement

ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಡಿ.26ರ ಬುಧವಾರ ತಡರಾತ್ರಿ ಬಜ್ಪೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.

ತೆರೆದ ವಾಹನದಲ್ಲಿ ಮೆರವಣಿಗೆ:

ಡಿ.26ರ ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಅವರ ಪಾರ್ಥೀವ ಶರೀರವನ್ನು ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಇದೀಗ ಹುಟ್ಟೂರಾದ ಬೀಜಾಡಿಗೆ ತರಲಾಗಿದೆ.

Advertisement

ಕೋಟೇಶ್ವರ, ಬೀಜಾಡಿ, ಗೋಪಾಡಿಯಲ್ಲಿ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು 4000ಕ್ಕೂ ಮಿಕ್ಕಿ ಗ್ರಾಮಸ್ಥರು ಭಾಗವಹಿಸಿದ್ದರು.

ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ:

ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅವರು ಕಲಿತ ಬೀಜಾಡಿಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಪ್ತರು, ಸಾರ್ವಜನಿಕರು, ಶಾಲಾ ಮಕ್ಕಳು, ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.

ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಅನೂಪ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಪತ್ನಿ ಮಂಜುಶ್ರೀಗೆ ತ್ರಿವರ್ಣ ದ್ವಜ ಹಸ್ತಾಂತರಿಸಲಾಯಿತು. ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅವರ ಅಂತ್ಯಸಂಸ್ಕಾರ ನಡೆಯಿತು. ಅನೂಪ್ ಪಾರ್ಥಿವ ಶರೀರಕ್ಕೆ ಅವರ ಸಹೋದರ ಅಗ್ನಿಸ್ಪರ್ಷ ಮಾಡಿದರು. ಅಂತಿಮ ವಿಧಿ-ವಿಧಾನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್‌ ಗಂಟೆಹೊಳೆ ಸೇರಿದಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಿದ್ದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next