Advertisement
ಪ್ರಥಮ ಹಂತದಲ್ಲಿ ರಸ್ತೆ ಸುರಕ್ಷತೆಯಡಿ ಗುರುವಾಯನಕೆರೆ ಕೆರೆ ಏರಿಯಾಗಿ ಪೊಟ್ಟು ಕೆರೆವರೆಗೆ 1.2 ಕಿ.ಮೀ. ರಸ್ತೆಯನ್ನು 4.95 ಕೋ.ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ಹಾಗೂ ಪೊಟ್ಟು ಕೆರೆಯಿಂದ ಸುಲ್ಕೇರಿ ವರೆಗೆ 12 ಕಿ.ಮೀ. ನ್ನು 20 ಕೋ. ರೂ. ವೆಚ್ಚದಲ್ಲಿ ದ್ವಿಮುಖ ರಸ್ತೆ ನಿರ್ಮಿಸುವ ಯೋಜನೆ ಯನ್ನು ನಡೆಸಲು ಲೋಕೋ ಪಯೋಗಿ ಇಲಾಖೆಯಡಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಗುತ್ತಿಗೆ ಪಡೆದಿದ್ದಾರೆ. ಈಗಾಗಲೇ ಗುರುವಾಯನಕೆರೆ ಕೆರೆ ಏರಿಯಾಗಿ ಪೊಟ್ಟುಕೆರೆವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 1.2 ಕಿ.ಮೀ. ರಸ್ತೆಯ ಎರಡು ಬದಿ 21 ಅಡಿ ಅಗಲವಾಗಲಿದೆ. ಮಧ್ಯ 1 ಮೀಟರ್ ಮೀಡಿಯನ್ ಇರಲಿದ್ದು ಮಧ್ಯ ಹೈಮಾಸ್ಟ್ ದೀಪ ಅಳವಡಿಕೆಯಾಗಲಿದೆ. ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
Related Articles
Advertisement
ಒಂದೆಡೆ ಗುರುವಾಯನಕೆರೆಯಿಂದ- ಪೊಟ್ಟುಕೆರೆ ವರೆಗೆ 1.2 ಕಿ.ಮೀ. ಚತುಷ್ಪಥ ರಸ್ತೆ ಹಾಗೂ ಡಿವೈಡರ್ ಕಾರ್ಯ ಕೈಗೆತ್ತಿಕೊಂಡಿದ್ದು ಮುಂದಿನ ಹಂತದಲ್ಲಿ ಅಳದಂಗಡಿ ಪೇಟೆಯಲ್ಲಿ ಹಾಗೂ ಸುಲ್ಕೇರಿ ಗ್ರಾಮ ಪಂಚಾಯತ್ ವಠಾರದಲ್ಲಿ ಎರಡು ಕಡೆಗಳಲ್ಲಿ ವಿಭಜಕದೊಂದಿಗೆ ಸರ್ಕಲ್ ರಚನೆಯಾಗಲಿದೆ.
ಪ್ರವಾಸೋದ್ಯಮ ಕಲ್ಪನೆಯಡಿ ಮೇಲ್ದರ್ಜೆಗೆ
ವಿವಿಧೆಡೆಯಿಂದ ಧರ್ಮಸ್ಥಳ, ಕಾರ್ಕಳ, ಹೊರನಾಡು, ಶೃಂಗೇರಿ, ಉಡುಪಿ, ಕೊಲ್ಲೂರು ಭಾಗಕ್ಕೆ ಸಂಚರಿಸುವ ಯಾತ್ರಾರ್ಥಿಗಳು, ಪ್ರವಾಸಿಗರಿಗೆ, ಎರಡೂ ಜಿಲ್ಲೆಯ ಜನಾಮಾನ್ಯರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಹಾಗೂ ಆರ್ಥಿಕ ವ್ಯವಹಾರ ಕೇಂದ್ರವಾಗಿ ರಾಜ್ಯ ಹೆದ್ದಾರಿಯಡಿ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಕಾರ್ಕಳ ಸಂಪರ್ಕ ರಸ್ತೆಗಳು ಈಗಾಗಲೇ ಮೇಲ್ದರ್ಜೆಗೇರಿದ್ದು, ಉಡುಪಿ ಜಿಲ್ಲೆ ಮಾದರಿಯಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಯಾಗಬೇಕೆಂಬ ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಸರಕಾರಕ್ಕೆ ಮನವಿ ಮಾಡಿ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ವಿಸ್ತರಣೆಗೆ ಕ್ಷಣಗಣನೆ
ಈಗಾಗಲೇ ಜಿಲ್ಲೆಯ ಅನೇಕ ರಸ್ತೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಳೆದ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ಪುಂಜಾಲಕಟ್ಟೆ- ಬಿ.ಸಿ.ರೋಡ್ ರಸ್ತೆಯೂ ಒಂದು. ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ಕಾಯುತ್ತಿದೆ. ಈಗಾಗಲೇ ವಾಹನ ದಟ್ಟಣೆ ಮಿತಿ ಮೀರಿದ್ದರಿಂದ ಗುರುವಾಯನಕೆರೆ ಪೇಟೆಯಲ್ಲಿ ರಸ್ತೆ ವಿಸ್ತರಣೆ ಅವಶ್ಯವಾಗಿದೆ.
ಪ್ರವಾಸೋದ್ಯಮ ತಾಲೂಕಿನ ಪ್ರಮುಖ ಭಾಗವಾಗಿ ಬೆಳೆಯುತ್ತಿದೆ. ಈ ನೆಲೆಯಲ್ಲಿ ಉಭಯ ಜಿಲ್ಲೆಯನ್ನು ಸಂಪರ್ಕಿಸಲು ಈ ರಸ್ತೆ ಅನುಕೂಲವಾಗಲಿದೆ. ರಸ್ತೆಯೊಂದಿಗೆ ಬಸ್ ಬೇ ನಿರ್ಮಿಸಲಿದ್ದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಚಿಂತನೆಯಿದೆ. -ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ
ಪ್ರಥಮ ಹಂತದ ಅಭಿವೃದ್ಧಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ ರಸ್ತೆ ಸುರಕ್ಷತೆಯಡಿ 25 ಕೋ.ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಡಿ ಗುರುವಾಯನಕೆರೆ-ನಾರಾವಿ ರಸ್ತೆಯ ಸುಲ್ಕೇರಿವರೆಗೆ ಪ್ರಥಮ ಹಂತದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. –ಶಿವಪ್ರಸಾದ್ ಅಜಿಲ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ