Advertisement

ಸರಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿ: ಅರವಿಂದ ಬೆಲ್ಲದ

10:03 PM Mar 21, 2022 | Team Udayavani |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಇದರಿಂದ ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಸರಕಾರಿ ಶಾಲೆಗೆ ಮಕ್ಕಳನ್ನೂ ಕಳುಹಿಸುತ್ತಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸಲಹೆ ನೀಡಿದರು.

Advertisement

ವಿಧಾನ ಸಭೆಯಲ್ಲಿ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಇಲ್ಲದಿರುವುದರಿಂದ ಪಾಲಕರು ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ರಾಜ್ಯ ಸರಕಾರ ಎಲ್‌ಕೆಜಿ ಯುಕೆಜಿ 1 ಸಾವಿರ ಶಾಲೆಗಳನ್ನು ತೆರೆಯುವುದಾಗಿ ಹೇಳಿತ್ತು. ಆದರೆ, ಇದುವರೆಗೂ ತೆರೆಯಲಾಗಿಲ್ಲ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಅಲ್ಲದೇ ಉರ್ದು ಶಾಲೆ ಮತ್ತು ಕನ್ನಡ ಶಾಲೆಗಳನ್ನು ಪ್ರತ್ಯೇಕ ನಿರ್ಮಾಣ ಮಾಡುವುದರಿಂದ ಮಕ್ಕಳಲ್ಲಿ ಭೇದಭಾವ ಮೂಡಿಸಿದಂತಾಗುತ್ತದೆ. ಅದರ ಬದಲು ಒಂದೇ ಶಾಲೆಯಲ್ಲಿ ಮಕ್ಕಳು ಕಲಿಯುವಂತಾಗಬೇಕು. ಉರ್ದು ವಿಷಯ ಕಲಿಯುವಾಗ ಆ ವಿಷಯ ಕಲಿಯುವ ಮಕ್ಕಳು ಹಾಜರಾಗಲು ಅವಕಾಶ ಕಲ್ಪಿಸಬೇಕು. ಇದರಿಂದ ಶಿಕ್ಷಕರು ಉಳಿಯುತ್ತಾರೆ. ಅವರನ್ನು ಖಾಲಿ ಇರುವ ಶಾಲೆಗಳಲ್ಲಿ ಬಳಸಿಕೊಳ್ಳಬಹುದು ಎಂದವರು ಹೇಳಿದರು.

ಇದನ್ನೂ ಓದಿ:ಆರ್‌ಆರ್‌ಆರ್‌ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ ಆಮಿರ್‌ ಖಾನ್‌

ಸರಕಾರಿ ಶಿಕ್ಷಕರು ಸರಕಾರಿ ಶಾಲೆಗಳನ್ನು ಸುಧಾರಿಸದಿದ್ದರೆ, ಪರಿಸ್ಥಿತಿ ಗಂಭೀರವಾಗಲಿದೆ. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಸದಸ್ಯರ ಆಯ್ಕೆಗೆ ಆ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಪಾಲಕರು ಮತ ಹಾಕುವ ವ್ಯವಸ್ಥೆ ಜಾರಿಗೆ ಬರಬೇಕು. ಆಗ ಪಾಲಕರು ಶಾಲೆಗಳ ಬಗ್ಗೆ ಆಲೋಚನೆ ಮಾಡುತ್ತಾರೆ ಎಂದರು.

Advertisement

ಈ ಸಂದರ್ಭ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಎ.ಎಸ್‌.ಪಾಟೀಲ್‌ ನಡಹಳ್ಳಿ, ಸಮಗ್ರ ಶಿಕ್ಷಣ ವ್ಯವಸ್ಥೆ ಸುಧಾರಿಸುವ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದೆ ಎಂದರು.

ಮಾತು ಮುಂದುವರಿಸಿದ ಅರವಿಂದ ಬೆಲ್ಲದ, ನಮ್ಮ ರಾಜ್ಯದ ಸಂಪತ್ತು ಸೃಷ್ಟಿಸುವ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಕೇವಲ ಶೇ 12% ರಷ್ಟು ಅನುದಾನ ನೀಡಲಾಗುತ್ತಿದೆ. ಸರಕಾರಿ ಶಾಲೆಗಳ ಸ್ಥಿತಿ ಸುಧಾರಿಸಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕವಾಗಬೇಕು. ಸರಕಾರಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ವಾರ್ಷಿಕ 40 ಸಾವಿರ ರೂ. ಖರ್ಚು ಮಾಡುತ್ತಿದ್ದೇವೆ. ಆದರೆ, ಅದರ ಫ‌ಲ ಎಷ್ಟು ಬರುತ್ತಿದೆ ಎನ್ನುವುದನ್ನು ಗಮನಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next