Advertisement

ಆಗಸ್ಟ್‌ನಲ್ಲಿ ಸ್ಟಾರ್ ಅಬ್ಬರ

12:20 PM Apr 13, 2019 | Hari Prasad |

ಈಗ ಚುನಾವಣೆ ಕಾವು. ಈ ಚುನಾವಣೆಯಲ್ಲೂ ಸಿನಿಮಾ ಸ್ಟಾರ್ ಅಬ್ಬರಕ್ಕೇನೂ ಕಮ್ಮಿ ಇಲ್ಲ. ದಿನಪೂರ್ತಿ ರಾಜಕಾರಣಿಗಳ ಜೊತೆ ಸಿನಿಮಾ ಸ್ಟಾರ್ ಕೂಡ ಎಂದಿಗಿಂತಲೂ ಜೋರು ಸುದ್ದಿಯಾಗುತ್ತಲೇ ಇದ್ದಾರೆ. ಹಾಗಂತ, ಈ ಸ್ಟಾರ್ ಅಬ್ಬರ ಇಲ್ಲಿಗೆ ನಿಲ್ಲೋದಿಲ್ಲ ಅನ್ನೋದು ಸ್ಪಷ್ಟ. ಹೀಗೆಂದಾಕ್ಷಣ, ಚುನಾವಣೆ ಬಳಿಕ ಇನ್ಯಾವ ಅಬ್ಬರ ಶುರುವಾಗುತ್ತೆ ಎಂಬ ಪ್ರಶ್ನೆ ಎದುರಾದರೆ, ಅದಕ್ಕೆ ಉತ್ತರ ಆಗಸ್ಟ್‌. ಹೌದು. ಆಗಸ್ಟ್‌ನಲ್ಲಿ ಸ್ಟಾರ್ ಅಬ್ಬರ ಜೋರಾಗಿಯೇ ಇರಲಿದೆ. ಅಂದರೆ, ಆಗಸ್ಟ್‌ನ ವರಮಹಾಲಕ್ಷ್ಮೀ ಹಬ್ಬಕ್ಕೆ ಅಭಿಮಾನಿಗಳಿಗೆ ಡಬಲ್‌ ಧಮಾಕ ಗ್ಯಾರಂಟಿ.

Advertisement

ಸಾಮಾನ್ಯವಾಗಿ ಯಾವುದೇ ಭಾಷೆಯ ಚಿತ್ರರಂಗವಿರಲಿ, ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷ ಸ್ಥಾನಮಾನ ಇದ್ದೇ ಇದೆ. ಅದು ಕನ್ನಡ ಚಿತ್ರರಂಗದಲ್ಲಂತೂ ಕೊಂಚ ಜಾಸ್ತಿಯೇ ಎನ್ನಬಹುದು. ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದಷ್ಟು ಸಿನಿಮಾಗಳು ತರಾತುರಿಯಲ್ಲಿ ಬಿಡುಗಡೆಯಾಗುವುದು ವಾಡಿಕೆ. ಅಂತೆಯೇ, ಸ್ಟಾರ್‌ ಸಿನಿಮಾಗಳು ಸಹ ಬಿಡುಗಡೆಯ ಸಾಲಿನಲ್ಲಿವೆ ಎಂಬುದೇ ಈ ಹೊತ್ತಿನ ವಿಶೇಷ.

ಆಗಸ್ಟ್‌ನಲ್ಲಿ ಒಂದಲ್ಲ, ಎರಡಲ್ಲ, ನಾಲ್ಕು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗಿವೆ. ಈ ಮೂಲಕ ತಮ್ಮ ತಮ್ಮ ಅಭಿಮಾನಿಗಳಿಗೆ ಸಿನಿಮಾ ಹಬ್ಬದೂಟ ಉಣಬಡಿಸಲು ಮುಂದಾಗಿವೆ. ಹಾಗೆ ಹೇಳುವುದಾದರೆ, ಆಗಸ್ಟ್‌ನಲ್ಲಿ ಶಿವರಾಜಕುಮಾರ್‌, ಸುದೀಪ್‌, ಶ್ರೀಮುರಳಿ, ರಕ್ಷಿತ್‌ಶೆಟ್ಟಿ ಚಿತ್ರಗಳು ಬಿಡುಗಡೆ ಮಾಡುವ ಸುಳಿವು ನೀಡಿವೆ. ಇದು ನಾಲ್ವರು ಸ್ಟಾರ್‌ಗಳ ಕಥೆಯಾದರೆ, ಉಳಿದಂತೆ ಇನ್ನೂ ಅನೇಕ ನಾಯಕ ನಟರ ಚಿತ್ರಗಳು ಕೂಡ ಅದೇ ತಿಂಗಳ ಆರಂಭ ಅಥವಾ ಅಂತ್ಯದಲ್ಲಿ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲ.


ಶಿವರಾಜಕುಮಾರ್‌ ಅಭಿನಯದ “ಕವಚ’ ಬಿಡುಗಡೆಯಾಗಿ ಎರಡು ವಾರ ಕಳೆದಿದೆ. ಮೇ ತಿಂಗಳಲ್ಲಿ ಅವರ ಮತ್ತೂಂದು ನಿರೀಕ್ಷೆಯ ಚಿತ್ರ “ರುಸ್ತುಂ’ ಕೂಡ ಬಿಡುಗಡೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆ ಬಳಿಕ ಎರಡು ತಿಂಗಳು ಕಳೆದರೆ, ಆಗಸ್ಟ್‌ನಲ್ಲಿ ಅವರ “ಆನಂದ್‌’ ಚಿತ್ರ ಅಭಿಮಾನಿಗಳ ಮೊಗದಲ್ಲಿ “ಆನಂದ’ ಹೆಚ್ಚಿಸುವುದನ್ನು ಅಲ್ಲಗಳೆಯುವಂತಿಲ್ಲ. ಈ ಚಿತ್ರವನ್ನು ಪಿ.ವಾಸು ನಿರ್ದೇಶನ ಮಾಡುತ್ತಿದ್ದಾರೆ.

“ಶಿವಲಿಂಗ’ ನಂತರ ಪಿ.ವಾಸು ಅವರು ಶಿವರಾಜಕುಮಾರ್‌ ಅವರಿಗೆ ನಿರ್ದೇಶಿಸುತ್ತಿರುವ ಚಿತ್ರವಿದು. ನಿರ್ಮಾಪಕ ಯೋಗೀಶ್‌ ದ್ವಾರಕೀಶ್‌ ‘ಆನಂದ್‌’ ಚಿತ್ರವನ್ನು ಆಗಸ್ಟ್‌ನಲ್ಲೇ ರಿಲೀಸ್‌ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಯೂ ಇದೆ. ಅದಕ್ಕೆ ಕಾರಣ, ಶಿವರಾಜಕುಮಾರ್‌ “ಆನಂದ್‌’ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿದ್ದರು. ಈಗ ಸುಮಾರು ಮೂರುವರೆ ದಶಕದ ನಂತರ ಅದೇ ಹೆಸರಿನ ಚಿತ್ರದ ಮೂಲಕ ಮತ್ತೂಂದು ಯಶಸ್ಸಿನ ಹೆಜ್ಜೆ ಮೂಡಿಸಲು ಹೊರಟಿದ್ದಾರೆ.

Advertisement


ಆಗಸ್ಟ್‌ ನಲ್ಲೇ ಸುದೀಪ್‌ ಅವರ “ಪೈಲ್ವಾನ್‌’ ಕೂಡ ಅಖಾಡಕ್ಕೆ ಇಳಿಯಲಿದೆ ಎಂಬ ಬಗ್ಗೆ ಈಗಾಗಲೇ ನಿರ್ದೇಶಕ ಕೃಷ್ಣ ಅವರು ಸಾರಿದ್ದಾರೆ. “ಪೈಲ್ವಾನ’ ಒಂದು ಕುಸ್ತಿ ಕುರಿತಾದ ಚಿತ್ರ. ಸುದೀಪ್‌ ಅವರು ಈ ಚಿತ್ರದ ಮೂಲಕ ಸಂಪೂರ್ಣ ಹೊಸತನ್ನು ಕೊಡುವ ಉತ್ಸಾಹದಲ್ಲಿದ್ದಾರೆ. ಇದುವರೆಗೆ ನೋಡಿರುವ ಸುದೀಪ್‌ ಅವರನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಈಗಾಗಲೇ ಚಿತ್ರದ ಫೋಟೋಗಳು ಒಂದೊಂದು ಕಥೆ ಹೇಳುತ್ತಿವೆ. ಕನ್ನಡದಲ್ಲಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಕುಸ್ತಿ ಕುರಿತಾದ ಚಿತ್ರ ಬಂದಿರಲಿಲ್ಲ. ಅದನ್ನಿಲ್ಲಿ ನೀಗಿಸುವ ವಿಶ್ವಾಸದಲ್ಲಿ “ಪೈಲ್ವಾನ್‌’ ಚಿತ್ರತಂಡವಿದೆ. “ಹೆಬ್ಬುಲಿ’ ಬಳಿಕ ಕೃಷ್ಣ ಅವರು ಪುನಃ ಸುದೀಪ್‌ ಅವರಿಗಾಗಿಯೇ “ಪೈಲ್ವಾನ್‌’ ಮಾಡಿದ್ದಾರೆ. ಈ ಬಾರಿ ನಿರ್ಮಾಣವೂ ಅವರದ್ದೇ ಎಂಬುದು ವಿಶೇಷ. ಇಲ್ಲಿ ಬಾಲಿವುಡ್‌ ನಟ ಸುನೀಲ್‌ಶೆಟ್ಟಿ ಸೇರಿದಂತೆ ಅನೇಕ ಜನಪ್ರಿಯ ನಟರು ಇಲ್ಲಿದ್ದಾರೆ ಎಂಬುದೇ ಹೈಲೈಟ್‌. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ತಯಾರಿಯಲ್ಲಿದೆ ಎಂಬುದು ಚಿತ್ರತಂಡದ ಮಾತು.

ಇದೇ ಆಗಸ್ಟ್‌ನಲ್ಲಿ ಶ್ರೀಮುರಳಿ ಅಭಿನಯದ “ಭರಾಟೆ’ ಕೂಡ ಜೋರಾಗಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಕೊನೆಯ ಹಂತದ ಚಿತ್ರೀಕರಣದಲ್ಲಿರುವ “ಭರಾಟೆ’ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಶ್ರೀಮುರಳಿ ಮತ್ತು ಚೇತನ್‌ ಕುಮಾರ್‌ ಕಾಂಬಿನೇಷನ್‌ನ ಮೊದಲ ಚಿತ್ರವಿದು. ಇಬ್ಬರೂ ಸಕ್ಸಸ್‌ ಕಂಡವರು. ಹಾಗಾಗಿ “ಭರಾಟೆ’ ಕೂಡ ಯಶಸ್ಸಿನ ಹಾದಿಯಲ್ಲೇ ಸಾಗಲಿದೆ ಎಂಬ ನಂಬಿಕೆ ಅವರಿಗಿದೆ. ಈಗಾಗಲೇ ಚಿತ್ರದ ಫೋಟೋಗಳು, ಜೋರು ಸದ್ದು ಮಾಡಿರುವುದೇ ಆ ಕುತೂಹಲಕ್ಕೆ ಕಾರಣ. ಇಲ್ಲಿ ಅನೇಕ ಹೊಸತನಗಳಿವೆ. ಮೊದಲ ಬಾರಿಗೆ ಸಾಯಿಕುಮಾರ್‌ ಸಹೋದರರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದೇ ಆ ವಿಶೇಷ. ಅದನ್ನು ಹೊರತುಪಡಿಸಿದರೆ ಇನ್ನಷ್ಟು ಅಚ್ಚರಿಗಳೂ ಇವೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಅಲ್ಲಿಗೆ ಆಗಸ್ಟ್‌ನಲ್ಲಿ “ಭರಾಟೆ’ ಅಬ್ಬರಕ್ಕೆ ಕೌಂಟ್‌ಡೌನ್‌ ಶುರು.

ಈ ಸ್ಟಾರ್‌ ಚಿತ್ರಗಳ ಜೊತೆಗೆ ರಕ್ಷಿತ್‌ ಶೆಟ್ಟಿ ಅವರ “ಶ್ರೀಮನ್ನಾರಾಯಣ’ ಚಿತ್ರ ಕೂಡ ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ರಕ್ಷಿತ್‌ ಶೆಟ್ಟಿ ಅಭಿನಯದ “ಕಿರಿಕ್‌ ಪಾರ್ಟಿ’ ಕಳೆದ 2016 ರಲ್ಲಿ ತೆರೆಕಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ರಕ್ಷಿತ್‌ ಶೆಟ್ಟಿ “ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣಕ್ಕೆ ಸೀಮಿತವಾಗಿದ್ದರು. ಅತೀ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದ ಚಿತ್ರ ಎಂಬ ಹೆಗ್ಗಳಿಕೆ ಕೂಡ ಈ ಚಿತ್ರಕ್ಕಿದೆ. ಹಾಗಾಗಿ ಆಗಸ್ಟ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಆಗಸ್ಟ್‌ನಲ್ಲೇ ಈ ಎಲ್ಲಾ ಸ್ಟಾರ್‌ಗಳ ಚಿತ್ರ ಬಿಡುಗಡೆಯಾಗಲಿವೆ ಎಂಬುದಕ್ಕೆ ಕಾರಣ, ವರಮಹಾಲಕ್ಷ್ಮೀ ಹಬ್ಬ. ಆ ದಿನ ಅಥವಾ ಒಂದು ವಾರ ಹಿಂದೆ, ಮುಂದೆ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನು, ಅಲ್ಲಿಯವರೆಗೆ ಯಾವ ಸ್ಟಾರ್‌ ಚಿತ್ರಗಳೂ ಬಿಡುಗಡೆಯಾಗುತ್ತಿಲ್ಲ. ಪುನೀತ್‌ ಅಭಿನಯದ “ಯುವರತ್ನ’ ಚಿತ್ರೀಕರಣದಲ್ಲಿದೆ. ದರ್ಶನ್‌ ಅವರ “ಯಜಮಾನ’ ಇತ್ತೀಚೆಗಷ್ಟೇ ತೆರೆಕಂಡಿದೆ. ಯಶ್‌ ಅಭಿನಯದ “ಕೆಜಿಎಫ್ ಚಾಪ್ಟರ್‌ 2′ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಇನ್ನಷ್ಟೇ ಚಿತ್ರೀಕರಣವಾಗಬೇಕಿದೆ.


“ಕುರುಕ್ಷೇತ್ರ’ ಚಿತ್ರ ಸಿದ್ಧವಾಗಿದ್ದರೂ, ಅದರ ದರ್ಶನ ಯಾವಾಗ ಎಂಬುದಕ್ಕೆ ಉತ್ತರವಿಲ್ಲ. ನಿರ್ಮಾಪಕ ಮುನಿರತ್ನ ಅವರೇನಾದರೂ ಮನಸ್ಸು ಮಾಡಿದರೆ ಮಾತ್ರ ಆಗಸ್ಟ್‌ ಒಳಗೆ ಬಿಡುಗಡೆಯಾಗಬಹುದು. ಇಲ್ಲವಾದರೆ, ಅದು ರಿಲೀಸ್‌ ಆದಾಗಷ್ಟೇ ಅಭಿಮಾನಿಗಳು ಕಣ್ತುಂಬಿಕೊಳ್ಳಬೇಕು. ಉಳಿದಂತೆ ಗಣೇಶ್‌ ಅಭಿನಯದ “ಗಿಮಿಕ್‌’ ರೆಡಿಯಾಗಿದೆ. ಅದು ಯಾವಾಗ ಬೇಕಾದರೂ ತೆರೆಗೆ ಅಪ್ಪಳಿಸಬಹುದು. ಧ್ರುವ ಸರ್ಜಾ ಅವರ ಚಿತ್ರಗಳಿಗೆ ಎರಡು ವರ್ಷ ಸಮಯ ಬೇಕೇ ಬೇಕು. ಹಿಂದಿನ ಚಿತ್ರಗಳನ್ನು ಗಮನಿಸಿಕೊಂಡು ಬಂದರೆ ಒಂದೊಂದು ಚಿತ್ರ ಎರಡು ವರ್ಷ ಸಮಯ ಪಡೆದುಕೊಂಡಿವೆ. “ಪೊಗರು’ ಅದಾಗಲೇ ಎರಡು ವರ್ಷ ಮೀರಿದೆ. ಅದು ಚಿತ್ರೀಕರಣದಲ್ಲಿರುವ ಕಾರಣ ಬಿಡುಗಡೆ ಬಗ್ಗೆ ಈಗಲೇ ಏನನ್ನೂ ಹೇಳಲಾಗದು.

ಒಟ್ನಲ್ಲಿ ಸ್ಟಾರ್‌ ಚಿತ್ರಗಳು ಆಗಸ್ಟ್‌ನಲ್ಲೇ ಅಬ್ಬರಿಸಲು ಸಜ್ಜಾಗುತ್ತಿವೆ ಅನ್ನುವುದಾದರೆ, ಇನ್ನುಳಿದ ಯುವ ನಾಯಕ ನಟರ ಚಿತ್ರಗಳು ಅದಕ್ಕಿಂತ ಮುನ್ನವೇ ಗಾಂಧಿನಗರದ ಅಂಗಳಕ್ಕೆ ಧುಮುಕಿದರೆ ಯಾವ ಅಚ್ಚರಿಯೂ ಇಲ್ಲ. ಅದೇನೆ ಇರಲಿ, ಅಭಿಮಾನಿಗಳಿಗಂತೂ ಈ ವರ್ಷದ ವರಮಹಾಲಕ್ಷ್ಮೀ ಹಬ್ಬ ಡಬಲ್‌ ಧಮಾಕ ಎನ್ನುವುದಂತೂ ನಿಜ.

— ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next