ಕಲಬುರಗಿ: ಅಫಜಲಪುರ-ಕಲಬುರಗಿ ರಸ್ತೆಯ ಶರಣಸಿರಸಗಿ ಗ್ರಾಮದ ಸೀಮಾಂತರದಲ್ಲಿ ಸೋಮವಾರ ತಡರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಚಲಿಸುತ್ತಿದ್ದ ಕಾರಿಗೆ ಮತ್ತೂಂದು ಕಾರಿನಿಂದ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಜೇವರ್ಗಿ ತಾಲೂಕಿನ ಮಯೂರ ಗ್ರಾಮದ ಶಿವಲಿಂಗ ಭಾವಿಕಟ್ಟಿ (46) ಕೊಲೆಯಾದ ಕಾರ್ಯಕರ್ತ. ಪ್ರಕರಣದಲ್ಲಿ ಜೇವರ್ಗಿಯ ಜಿ.ಪಂ. ಕಾಂಗ್ರೆಸ್ ಸದಸ್ಯರೊಬ್ಬರ ಹೆಸರು ಕೇಳಿ ಬಂದಿದೆ. ಮಯೂರ ಗ್ರಾಮದಲ್ಲಿನ ಗಲಾಟೆ ಮತ್ತು ಹಳೇ ವೈಷಮ್ಯದಿಂದ ಜಿಪಂ ಸದಸ್ಯರ ಅಳಿಯಂದಿರ ತಂಡದಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಶಿವಲಿಂಗ ಸೋಮವಾರ ರಾತ್ರಿ ಕಲಬುರಗಿಯಿಂದ ತನ್ನ ಸಹೋದರ ಮಹಾಂತಪ್ಪ ಭಾವಿಕಟ್ಟಿ ಜೊತೆ ಚೌಡಾಪುರಕ್ಕೆ ಟೆರೆನೋ ನಿಶಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಸಮಯ ಸಾಧಿಸಿದ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬೆನ್ನಟ್ಟಿದ್ದರು.
ಇದನ್ನು ಗಮನಿಸಿದ ಶಿವಲಿಂಗ ಕಾರನ್ನು ವೇಗವಾಗಿ ಚಲಾಯಿಸಿದ್ದು, ದುಷ್ಕರ್ಮಿಗಳು ತಮ್ಮ ಸ್ಕಾರ್ಪಿಯೋ ಕಾರಿನಿಂದ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಶಿವಲಿಂಗನ ಕಾರು ರಸ್ತೆ ಪಕ್ಕದ ಹೊಲದೊಳಗೆ ನುಗ್ಗಿತ್ತು. ಶಿವಲಿಂಗ ಕಾರಿನಿಂದ ಇಳಿಯುತ್ತಿದ್ದಂತೆಯೇ ಆತನ ಕೈ, ಮುಖ, ಭುಜವನ್ನು ಮಾರಕಾಸ್ತ್ರಗಳಿಂದ ಕೊಚ್ಚಲಾಗಿದೆ.
ತೀವ್ರ ರಕ್ತಸ್ರಾವವಾಗಿ ಶಿವಲಿಂಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜತೆಗಿದ್ದ ಆತನ ಸಹೋದರ ಮಹಾಂತಪ್ಪ ತಪ್ಪಿಸಿಕೊಂಡಿದ್ದಾರೆ. ಹಂತಕರನ್ನು ತಾನು ನೋಡಿದ್ದಾಗಿ ಮಹಾಂತಪ್ಪ ಆರೋಪಿಗಳ ಹೆಸರುಗಳ ಸಮೇತ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ತಮ್ಮ ಕಾರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಹಣಮಂತ ಕೂಡಲಗಿ, ರವಿ ಹೊಸಮನಿ, ರಾಜು ಹೊಸಮನಿ, ಪ್ರಕಾಶ ಕೂಡಲಗಿ, ಸಂತೋಷ ಚನ್ನೂರು, ಖಾಜಪ್ಪ ಹೊಸಮನಿ ಸೇರಿ ಇತರರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. ಇದರ ಬೆನ್ನಲ್ಲೇ ಸ್ಥಳಕ್ಕೆ ಬಂದ ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ ಹಾಗೂ ಬಸವರಾಜ ಮತ್ತಿ ತರರು ವಾಹ ನ ದಲ್ಲಿ ಹಂತಕರನ್ನು ಕರೆದುಕೊಂಡು ಹೋದರು ಎಂದು ಮಹಾಂತಪ್ಪ ದೂರಿನಲ್ಲಿ ಉಲ್ಲೇಖೀಸಿದ್ದಾರೆ.