Advertisement

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

03:32 AM Dec 22, 2024 | Team Udayavani |

ಪುತ್ತೂರು: ಕೋಲಾರ ಜಿಲ್ಲೆಯಲ್ಲಿ ಆರಂಭಿಸಿದ ಗೃಹ ಆರೋಗ್ಯ ಯೋಜನೆ ಯಶಸ್ಸು ಕಂಡಿದ್ದು, ಶೀಘ್ರವೇ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಪತ್ರಕರ್ತರ ಜತೆ ಮಾತನಾಡಿದ ಅವರು, ರಕ್ತದೊತ್ತಡ, ಮಧು ಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ರಮೇಣ ಇದು ಬೇರೆ ಕಾಯಿಲೆಗಳಿಗೂ ದಾರಿ ಮಾಡುತ್ತದೆ. ಗೃಹ ಆರೋಗ್ಯ ಯೋಜನೆ ಯಡಿ ಕೋಲಾರದಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಇದರಿಂದ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.

ಆರು ತಾಲೂಕುಗಳಲ್ಲಿ ಹೊಸ ತಾಲೂಕು ಸರಕಾರಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದರಲ್ಲಿ 4 ಕಾಂಗ್ರೆಸ್‌ ಬೆಂಬಲಿತ ಶಾಸಕರ ಕ್ಷೇತ್ರವಾಗಿದ್ದರೆ, ಎರಡು ಬಿಜೆಪಿ ಬೆಂಬಲಿತ ಶಾಸಕರ ಕ್ಷೇತ್ರ. ನಮ್ಮ ಸರಕಾರ ಅಗತ್ಯ ಆಧಾರದಲ್ಲಿ ಯೋಜನೆಗಳನ್ನು ನೀಡುತ್ತಿದೆಯೇ ಹೊರತು ರಾಜಕೀಯದಿಂದಲ್ಲ ಎಂದರು.

ಸಿ.ಟಿ. ರವಿ ಹೇಳಿಕೆ : ಸಮರ್ಥನೆ ದುರದೃಷ್ಟಕರ
ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಸಚಿವೆ ವಿರುದ್ಧದ ಅಶ್ಲೀಲ ಪದ ಪ್ರಯೋಗವನ್ನು ಬಿಜೆಪಿ ಸಮರ್ಥಿಸುತ್ತಿರುವುದು ಖಂಡನೀಯ ಎಂದು ಹೇಳಿದ ಸಚಿವರು, ಇದು ಕಟ್ಟುಕಥೆ ಎನ್ನುವ ವಿಪಕ್ಷಗಳ ಹೇಳಿಕೆ ಸುಳ್ಳಿನಿಂದ ಕೂಡಿದೆ. ಇದು ಹಲವು ಜನಪ್ರತಿನಿಧಿಗಳ ಮುಂದೆಯೇ ನಡೆದ ಘಟನೆ. ಇದನ್ನು ಸಹಿಸಲಾಗದು. ಇದರ ವಿರುದ್ಧ ಕಾನೂನು ಕ್ರಮ ಆಗಲೇಬೇಕು. ಧರ್ಮ, ಹೆಣ್ಣಿನ ಬಗ್ಗೆ ಭಾಷಣ ಮಾಡುವ ಬಿಜೆಪಿ ಮತ್ತು ಸಂಘ ಪರಿವಾರವು ಸಿ.ಟಿ. ರವಿ ಹೇಳಿಕೆ ಬಗ್ಗೆ ಮೌನವಾಗಿರುವುದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು. ಶಾಸಕ ಅಶೋಕ್‌ ಕುಮಾರ್‌ ರೈ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಪ್ರಸಾದ್‌ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next