ಹಾಸನ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ಇಂಗ್ಲಿಷ್ ಭಾಷಾ ಪರೀಕ್ಷೆ ಗುರುವಾರ ಜಿಲ್ಲೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆದಿದ್ದು, ಮೂರು ತಿಂಗಳು ವಿಳಂಬವಾಗಿ ಆರಂಭವಾಗುತ್ತಿರುವ ಪರೀಕ್ಷೆಗೆ ವಿದ್ಯಾರ್ಥಿಗಳು ಕೋವಿಡ್ 19 ಆತಂಕದ ನಡುವೆಯೂ ಉತ್ಸಾಹದಿಂದ ಹಾಜರಾದರು. ಪರೀಕ್ಷೆಗೆ ಒಟ್ಟು 924 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.
ಸುರಕ್ಷತಾ ಕ್ರಮ: ಕೆಲವು ಪರೀಕ್ಷಾ ಕೇಂದ್ರಗಳ ಬಳಿ ಬೆಳಗ್ಗೆ 7.30 ರ ವೇಳೆಗೆ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹಾಜರಿದ್ದರು. ಪರೀಕ್ಷಾ ಕೇಂದ್ರದ ಬಳಿ ಬಂದ ವಿದ್ಯಾರ್ಥಿಗಳಿಗೆ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ಥರ್ಮಲ್ ಸ್ಕ್ಯಾನ್ ಮಾಡಿ, ಸ್ಯಾನಿಟೈಸರ್ ನೀಡಿ ಪರೀಕ್ಷಾ ಕೊಠಡಿಗೆ ಕಳುಹಿಸಿದರು. 9.15 ರ ವರೆಗೂ ಪರೀಕ್ಷಾ ಕೊಠಡಿಯಲ್ಲಿ ಓದಿಕೊಳ್ಳಲು ಅವಕಾಶ ನೀಡಲಾಯಿತು. ಮಾಸ್ಕ್ ಇಲ್ಲದೇ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ಗಳನ್ನು ವಿತರಿಸಲಾಯಿತು.
ಶಾಸಕ ಪ್ರೀತಂ ಜೆ. ಗೌಡ ಅವರು ಹಾಸನದ ಆರ್.ಸಿ.ರಸ್ತೆ ಗಂಧದಕೋಠಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಚನ್ನರಾಯಪಟ್ಟಣ ತಾಲೂಕು ನುಗ್ಗೇ ಹಳ್ಳಿಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲ ಸ್ವಾಮಿ ಅವರು ಪರೀಕ್ಷೆ ಮುಗಿಸಿ ಹೊರ ಬಂದ ಪರೀಕ್ಷಾರ್ಥಿಗಳನ್ನು ಅಭಿನಂದಿಸಿ, ಇನ್ನುಳಿದ ವಿಷಯಗಳ ಪರೀಕ್ಷೆಯನ್ನೂ ಧೈರ್ಯವಾಗಿ ಬರೆಯಬೇಕೆಂದು ಆತ್ಮ ಹೊನ್ನಶೆಟ್ಟಿಹಳ್ಳಿಯಲ್ಲಿ ಸ್ಥೈರ್ಯ ತುಂಬಿಸಿದರು.
ಡೀಸಿ ಪರಿಶೀಲನೆ: ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಪರೀಕ್ಷೆ ಸುಗಮವಾಗಿ ನಡೆಯುತ್ತಿರು ವುದನ್ನು ಖಚಿತಪಡಿಸಿಕೊಂಡರು. ಏನಾದರೂ ಕೊರತೆಗಳಿವೆಯೇ ಎಂದೂ ಸಿಬ್ಬಂದಿಯನ್ನು ವಿಚಾರಿಸಿದರು. ಪರೀಕ್ಷಾ ಕೇಂದ್ರಗಳಿಂದ ಹೊರ ಬಂದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಂಟೈನ್‌ಮೆಂಟ್ ಝೋನ್‌ನಿಂದ ಇಬ್ಬರು ಮಕ್ಕಳು ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ. ಹೊರ ಜಿಲ್ಲೆಗಳ 502 ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ ಪರೀಕ್ಷೆಯು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆದಿದೆ ಎಂದರು.