Advertisement
10ನೇ ತರಗತಿಯ ಗಣಿತ ಭಾಗ-1, ಭಾಗ-2 ಮತ್ತು ಸಮಾಜ ವಿಜ್ಞಾನ ಭಾಗ-1 ಪಠ್ಯ ಪುಸ್ತಕ ಹಾಗೂ ಭಾಷಾ ಪಠ್ಯ ಪುಸ್ತಕಗಳಾದ ಸಂಸ್ಕೃತ, ಹಿಂದಿ, ಕನ್ನಡ ಮತ್ತು ಉರ್ದು ಪುಸ್ತಕಗಳು ಇನ್ನೂ ಕೂಡಾ ಲಭ್ಯವಾಗಿಲ್ಲ. ಇದರಲ್ಲಿ ಗಣಿತ, ಸಮಾಜ ವಿಜ್ಞಾನ ಮತ್ತು ಸಂಸ್ಕೃತ ಪುಸ್ತಕಗಳು ಒಂದೂ ಲಭ್ಯವಾಗದೇ ಇದ್ದು, ಕೆಲವೆಡೆಗಳಲ್ಲಿ ಶಿಕ್ಷಕರು ಅಂತರ್ಜಾಲದಿಂದ ಪಠ್ಯವನ್ನು ಪಡೆದು ಪಾಠ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಎಸೆಸೆಲ್ಸಿ ತರಗತಿ ನಡೆಸಲು ಮುಖ್ಯವಾಗಿ ಬೇಕಿರುವ ಇಂಗ್ಲಿಷ್, ಉರ್ದು, ಹಿಂದಿ, ಗಣಿತ ಪಠ್ಯ ಪುಸ್ತಕಗಳ ಕೊರತೆ ಹೆಚ್ಚಿನ ಕಡೆಗಳಲ್ಲಿ ಕಂಡು ಬಂದಿದೆ. ಇದರಲ್ಲಿ ಕೆಲವೊಂದು ಸರಕಾರಿ ಶಾಲೆಗಳಿಗೆ ಬಹುತೇಕ ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದರೆ, ಹೆಚ್ಚಿನ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಒಂದೂ ಪುಸ್ತಕಗಳು ವಿತರಣೆಯಾಗಿಲ್ಲ ಎನ್ನುವುದು ವಿಷಾದನೀಯವಾಗಿದೆ. ಕೆಲವು ಶಾಲೆಗಳಿಗೆ ಕನಿಷ್ಠ ಸಂಖ್ಯೆಯ ಪಠ್ಯಪುಸ್ತಕಗಳೂ ಪೂರೈಕೆಯಾಗದೇ ಇರುವುದರಿಂದ ಶಾಲಾ ಮುಖ್ಯಸ್ಥರಿಗೆ ಪಠ್ಯ ಪುಸ್ತಕಕ್ಕಾಗಿ ಸಂಬಂಧಪಟ್ಟ ನೋಡಲ್ ಕೇಂದ್ರದಲ್ಲಿ ವಿಚಾರಣೆ ನಡೆಸುವುದೇ ದೊಡ್ಡ ಕೆಲಸವಾಗಿ ಬಿಟ್ಟಿದೆ. ಶಿಕ್ಷಣ ಇಲಾಖೆ ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
ರಾಜ್ಯದ ಶೇ. 90ರಷ್ಟು ಪಠ್ಯ ಪುಸ್ತಕಗಳು ಲಭ್ಯವಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಸಚಿವರು, ಶೈಕ್ಷಣಿಕ ವರ್ಷಾರಂಭಕ್ಕೆ ಮೊದಲೇ ಪಠ್ಯ ಪುಸ್ತಕಗಳನ್ನು ಪೂರೈಸುವುದಾಗಿ ಭರವಸೆ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳು ಇನ್ನೂ ಕೂಡಾ ಕೆಲವು ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪೂರೈಸಿಲ್ಲ. ಹಾಗಾದರೆ ಎಲ್ಲಿ ಹೋದವು ಈ ಪಠ್ಯ ಪುಸ್ತಕಗಳು ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರಲಾರಂಭಿಸಿದೆ.
Advertisement
ಶಿಕ್ಷಕರಿಗೇ ಲಭ್ಯವಿಲ್ಲದ ಪಠ್ಯಪುಸ್ತಕ ಈ ಬಾರಿ 10ನೇ ತರಗತಿಗೆ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆಯಾಗಿದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕವೂ ಸಂಪೂರ್ಣ ಹೊಸತು. 10ನೇ ತರಗತಿಯ ಗಣಿತ ಭಾಗ-1, ಭಾಗ-2 ಮತ್ತು ಸಮಾಜ ವಿಜ್ಞಾನ ಭಾಗ-1 ಪಠ್ಯ ಪುಸ್ತಕ ಹಾಗೂ ಭಾಷಾ ಪಠ್ಯ ಪುಸ್ತಕಗಳು ಉಡುಪಿ ತಾಲೂಕಿನ ಹೆಚ್ಚಿನ ಶಾಲೆಗಳಿಗೆ ಬಂದಿಲ್ಲ. ಹೆಚ್ಚಿನ ಶಾಲೆಗಳಲ್ಲಿ 8 ಮತ್ತು 9ನೇ ತರಗತಿಯ ಪಠ್ಯ ಪುಸ್ತಕಗಳು ಶೇ. 60 ರಷ್ಟು ಮಾತ್ರ ಪೂರೈಕೆಯಾಗಿದ್ದು, ಇದರಿಂದ ಹೆಚ್ಚಿನ ತೊಂದರೆ ಎದುರಿಸುವಂತಾಗಿದೆ ಎನ್ನುತ್ತಾರೆ ಶಿಕ್ಷಕರು. ಶೀಘ್ರ ಸಮಸ್ಯೆ ಪರಿಹಾರಕ್ಕೆ ಯತ್ನ
ಉಡುಪಿ ವಲಯದಲ್ಲಿ ಶೇ. 86ರಷ್ಟು ಪುಸ್ತಕಗಳು ಪೂರೈಕೆಯಾಗಿದೆ. ಪುಸ್ತಕಗಳು ಬಂದಂತೆ ಹಂತ ಹಂತವಾಗಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಭಾಷಾ ಪಠ್ಯ ಕ್ರಮಗಳು, ಎಸೆಸೆಲ್ಸಿಯ ಗಣಿತ ಮತ್ತು ವಿಜ್ಞಾನ ಪುಸ್ತಕಗಳ ಕೊರತೆ ಕಾಡುತ್ತಿದ್ದು, ಅದಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಬ್ರಹ್ಮಾವರದಲ್ಲಿ ಹೆಚ್ಚುವರಿ ಪುಸ್ತಕ
ಗಳಿದ್ದು ಅದನ್ನು ತರಿಸಿಕೊಂಡು ಪೂರೈಕೆ ಮಾಡಲಾಗುವುದು. ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ತಾರತಮ್ಯ ಇಲ್ಲದೇ ಪುಸ್ತಕ ವಿತರಿಸಲಾಗುತ್ತಿದೆ .
– ಲೋಕೇಶಪ್ಪ
ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ