Advertisement

ಎಸೆಸೆಲ್ಸಿ ಮೌಲ್ಯಮಾಪಕರ ಎಡವಟ್ಟು; ಫೇಲಾಗಿದ್ದ 748 ವಿದ್ಯಾರ್ಥಿಗಳು ಉತ್ತೀರ್ಣ

01:43 AM Sep 12, 2020 | mahesh |

ಮಂಗಳೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಅನುತ್ತೀರ್ಣಗೊಂಡಿದ್ದ ಅವಿಭಜಿತ ದ.ಕ. ಜಿಲ್ಲೆಯ 748ಕ್ಕೂ ಹೆಚ್ಚು ಮಂದಿ ಎಸೆಸೆಲ್ಸಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನದಿಂದಾಗಿ ಉತ್ತೀರ್ಣ ಗೊಂಡಿದ್ದಾರೆ. ಇದರಿಂದ ಯಾರಧ್ದೋ ಎಡವಟ್ಟಿಗೆ ವಿದ್ಯಾರ್ಥಿಗಳು ಬಲಿಪಶು ಗಳಾಗಿರುವುದು ಸ್ಪಷ್ಟವಾಗಿದೆ ಮಾತ್ರ ವಲ್ಲದೇ ಅಂಕ ನೀಡುವಲ್ಲಿ ಅನ್ಯಾಯ ವಾಗಿತ್ತೆಂಬ ಆರೋಪಕ್ಕೆ ಪುಷ್ಟಿ ನೀಡಿದೆ.

Advertisement

ದ.ಕ. ಜಿಲ್ಲೆಯ 466ಕ್ಕೂ ಹೆಚ್ಚು (ಸುಳ್ಯ ವಲಯದ ಸಂಖ್ಯೆ ಲಭ್ಯ ವಾಗಿಲ್ಲ) ಮತ್ತು ಉಡುಪಿ ಜಿಲ್ಲೆಯ 282 ಮಂದಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಉತ್ತೀರ್ಣ ರಾಗಿದ್ದಾರೆ. ಮೌಲ್ಯ ಮಾಪಕರ ಎಡವಟ್ಟು ಇಷ್ಟೂ ವಿದ್ಯಾರ್ಥಿ ಗಳನ್ನು ಸಮಸ್ಯೆಗೆ ದೂಡಿದೆ. ಈ ಬಗ್ಗೆ “ಉದಯವಾಣಿ’ ವರದಿ ಪ್ರಕಟಿಸಿತ್ತು.

ಪ್ರತಿ ವಿಷಯಕ್ಕೆ 1,205 ರೂ.!
ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆಯಲು 405 ರೂ. ಮತ್ತು ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 805 ರೂ.ಗಳನ್ನು ಪಾವತಿಸಬೇಕು. ಮರು ಮೌಲ್ಯಮಾಪನದಲ್ಲಿ ಪ್ರತಿ ವಿಷಯದಲ್ಲಿ 6ಕ್ಕೂ ಹೆಚ್ಚು ಅಂಕ ಪಡೆದುಕೊಂಡವರಿಗೆ 805 ರೂ.ಗಳನ್ನು ಹಿಂದಿರುಗಿಸಲಾಗುತ್ತದೆ. ಆರಕ್ಕಿಂತ ಕಡಿಮೆ ಅಂಕ ಬಂದು ಉತ್ತೀರ್ಣರಾಗದವರು ಕಟ್ಟಿದ 1,205 ರೂ.ಗಳನ್ನು ಕಳೆದುಕೊಂಡಿದ್ದಾರೆ.

ಶಿಕ್ಷಕರೇ ಹಣ ಭರಿಸಿದರು !
ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಬಹುತೇಕ ವಿದ್ಯಾರ್ಥಿಗಳು ಹಣ ಹೊಂದಿಸಲಾಗದೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಭರವಸೆ ಇದ್ದದ್ದರಿಂದ ಶಿಕ್ಷಕರೇ ತಮ್ಮ ಕೈಯಿಂದ ಹಣ ಹಾಕಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

36 ಶಾಲೆಗಳಿಗೆ ಶೇ. 100 ಫಲಿತಾಂಶ
ಮರು ಮೌಲ್ಯಮಾಪನದ ಫಲಿತಾಂಶ ಬಂದ ಬಳಿಕ ಅವಿಭಜಿತ ದ.ಕ. ಜಿಲ್ಲೆಯ 36 ಶಾಲೆಗಳು ಶೇ. 100 ಫಲಿತಾಂಶ ಪಡೆದುಕೊಂಡಿವೆ. ದ.ಕ. ಜಿಲ್ಲೆಯ 22 ಮತ್ತು ಉಡುಪಿ ಜಿಲ್ಲೆಯ 14 ಶಾಲೆಗಳು ಶೇ. 100 ಫಲಿತಾಂಶ ಪಡೆದುಕೊಂಡ ಶಾಲೆಗಳಾಗಿವೆ.

Advertisement

ಮಾಹಿತಿ ಪಡೆದುಕೊಳ್ಳುತ್ತೇನೆ
ಎಸೆಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ವಿಚಾರದಲ್ಲಿ ಜಿಲ್ಲಾಡಳಿತದ ಪಾತ್ರ ಇರುವುದಿಲ್ಲ. ಶಿಕ್ಷಣ ಮಂಡಳಿಯೇ ಇದನ್ನು ನಿರ್ವಹಿಸುತ್ತದೆ. ಆದಾಗ್ಯೂ ಜಿಲ್ಲೆಯ 466ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಫಲಿತಾಂಶ ಬಂದಿದ್ದಾಗ ಅನುತ್ತೀರ್ಣಗೊಂಡಿರುವುದಕ್ಕೆ ಕಾರಣ ಏನು ಎಂಬ ಬಗ್ಗೆ ತಿಳಿದುಕೊಳ್ಳುತ್ತೇನೆ.
-ಡಾ| ಕೆ. ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

ಉಡುಪಿಯಲ್ಲಿ ಇದೇ ಮೊದಲು
ಉಡುಪಿ ಜಿಲ್ಲೆಯಲ್ಲಿ 282 ಮಂದಿ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣಗೊಂಡಿದ್ದಾರೆ. ಫಲಿತಾಂಶದಲ್ಲಿ ಅನುತ್ತೀರ್ಣಗೊಂಡು ಮರುಮೌಲ್ಯಮಾಪನದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಇದೇ ಮೊದಲು. ಆದರೆ, ಈ ರೀತಿಯ ಫಲಿತಾಂಶಕ್ಕೆ ಕಾರಣ ಏನು ಎಂದು ಹೇಳಲು ಬರುವುದಿಲ್ಲ.
-ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next