ವಿಧಾನಸಭೆ: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿ ನೌಕರರ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಾರಿಗೆ ನೌಕರರ ಮುಷ್ಕರ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಿತ್ತು. ಮುಷ್ಕರ ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿದ್ದು, ಅವರ ಜೀವನ ದುಸ್ತರವಾಗಿದೆ. ಬಸ್ ಸುಟ್ಟು, ಸಾರ್ವಜನಿಕ ಆಸ್ತಪಾಸ್ತಿ ನಾಶ ಮಾಡಿದವರ ಮೆಲೆ ಕ್ರಮ ತೆಗೆದುಕೊಳ್ಳಿ, ಆದರೆ, ಮುಗ್ಧರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದರು.
ಸಚಿವ ಶ್ರೀರಾಮುಲು ಉತ್ತರಿಸಿ, ಸಾರಿಗೆ ಮುಷ್ಕರ ಸಂದರ್ಭದಲ್ಲಿ ಒಟ್ಟು 6444 ಪ್ರಕರಣ ದಾಖಲಾಗಿದ್ದವು. ಕೆಎಸ್‌ಆರ್‌ಟಿಸಿಯಲ್ಲಿ 1440 ಪ್ರಕರಣಗಳು, ಬಿಎಂಟಿಸಿಯಲ್ಲಿ 3,780 ಪ್ರಕರಣಗಳು, ಎನ್‌ಕೆಇಆರ್‌ಟಿಸಿಯಲ್ಲಿ 865 ಪ್ರಕರಣಗಳು, ಕಲ್ಯಾಣ ಕರ್ನಾಟಕದಲ್ಲಿ 340 ಪ್ರಕರಣಗಳು ದಾಖಲಾಗಿದ್ದವು. ನೌಕರರ ಯೂನಿಯನ್ ಜೊತೆ ಮಾತುಕತೆ ಬಳಿಕ ಸಿಎಂ ಜೊತೆಗೂ ಚರ್ಚಿಸಿದ್ದೇನೆ. ಪರಿಶೀಲನೆ ನಡೆಸಿ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ನಾಲ್ಕು ನಿಗಮಗಳ ಎಂಡಿಗಳ ಜತೆಗೂ ಚರ್ಚೆ ನಡೆಸಿ ಪರಿಶೀಲನೆ ನಡೆಸಲಾಗಿದೆ. 4,340 ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, ಇನ್ನೂ 2100 ಪ್ರಕರಣಗಳು ಬಾಕಿ ಇವೆ.
ಇದನ್ನೂ ಓದಿ :ವಿಸರ್ಜನೆಗೆ ಬರಲೊಪ್ಪದ ಗಣಪ! ಬೈಲುಪಾರ್ ನಲ್ಲೊಂದು ವಿಚಿತ್ರ ಘಟನೆ
ಇವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಮತ್ತು ಪರಿಶೀಲನೆ ನಡೆಸಿ ಪ್ರಕರಣ ವಾಪಸ್ ಪಡೆಯಲು ಕ್ರಮ ವಹಿಸಿಲಾಗುವುದು ಎಂದು ಹೇಳಿದರು.