ಹುಣಸೂರು: ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಹುಣಸೂರು ಶಾಖೆವತಿಯಿಂದ ಆಯೋಜಿಸಿದ್ದ 2018ನೇ ಸಾಲಿನಲ್ಲಿ ಸಂಸ್ಥೆವತಿಯಿಂದ ನೆರವು ಪಡೆದಿರುವ
ಫಲಾನುಭವಿಗಳು ಹಾಗೂ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಶೇ.60%ರಷ್ಟು ಫಲಿತಾಂಶ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಣಿಜ್ಯ ಉದ್ದೇಶಕ್ಕೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ, ಲಾಭಾಂಶದಲ್ಲಿ ವಾರ್ಷಿಕ 6 ಲಕ್ಷಕ್ಕೂ ಹೆಚ್ಚು ಹಣವನ್ನು ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಬಳಸುತ್ತಿರುವುದು ಶ್ಲಾಘನೀಯ.
ಶಾಲಾಭಿವೃದ್ಧಿಗೆ ಸಹಕರಿಸಿ: ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹ ಧನವನ್ನು ಅನಗತ್ಯ ದುಂದುವೆಚ್ಚ ಮಾಡದೇ ಶೈಕ್ಷಣಿಕಕ್ಕಾಗಿ ಬಳಸಿಕೊಳ್ಳಿ, ತಾಲೂಕಿನಲ್ಲಿ ಹಲವು ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಸಂಸ್ಥೆಯು ಇಂತಹ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಸ್ಥೆ ಕಾರ್ಯ ಶ್ಲಾಘನೀಯ: ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುದರ್ಶನ್ ಬಿ.ಹೊಳ್ಳ ಮಾತನಾಡಿ, ಸಂಸ್ಥೆಯ ಅಧ್ಯಕ್ಷ ತ್ಯಾಗರಾಜನ್‌ರ ಕನಸಿನ ಈ ಸಂಸ್ಥೆಯನ್ನು 1979ರಲ್ಲಿ ಹುಟ್ಟುಹಾಕಿದ್ದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು, ಇಂದು ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿದೆ.
ದೇಶದಾದ್ಯಂತ 1000 ಶಾಖೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಸಾಲಿನಲ್ಲಿ ರಾಜ್ಯದ 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಮುಂದಿನ ವರ್ಷ 15 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲು ಚಿಂತಿಸಿದೆ, ತಾಲೂಕಿನ 190 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡುತ್ತಿದ್ದು, ಮುಂದಿನ ವರ್ಷದಿಂದ ಹೆಚ್ಚಿಸಲಾಗುವುದೆಂದರು.
ಡಿವೈಎಸ್‌ಪಿ ಭಾಸ್ಕರ್ ರೈ ಸಂಸ್ಥೆಯು ಶಿಕ್ಷಣಕ್ಕೆ ಲಾಭಾಂಶದಲ್ಲಿ ನೆರವು ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ ಎಂದು ಪ್ರಶಂಸಿಸಿದರು. ಫೈನಾನ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕ ವಿಜಯ್‌ಕುಮಾರ್ ಮಾತನಾಡಿದರು. ನಂದಗೋಪಾಲ್, ಶ್ರೀಧರಮಟ್ಟಂ, ಅಶೋಕ್‌ಸಿಂಗ್, ಶಾಖಾ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಸಿಬ್ಬಂದಿಗಳು ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.