ವಾಡಿ: ಭಜರಂಗ ದಳದ ವತಿಯಿಂದ ಪಟ್ಟಣದಲ್ಲಿ ಶ್ರೀರಾಮ ನವಮಿ ಹಾಗೂ ಹನುಮಾನ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.
ಮಂಗಳವಾರ ಸಂಜೆ ರೆಸ್ಟ್‌ಕ್ಯಾಂಪ್ ತಾಂಡಾದ ಶ್ರೀಸೇವಾಲ ಮಂದಿರದಿಂದ ಆರಂಭವಾದ ಜಯಂತಿ ಮೆರವಣಿಗೆಯನ್ನು ಶ್ರೀರಾಮನ ಭವ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಾಜಿ ಶಾಸಕ ವಾಲ್ಮೀಕಿ ನಾಯಕ ಉದ್ಘಾಟಿಸಿದರು.
ರಸ್ತೆ ಮೇಲೆ ಸಾಲಾಗಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಗಳ ಮೇಲೆ ರಾರಾಜಿಸುತ್ತಿದ್ದ ಕೇಸರಿ ಭಾವುಟ ಮತ್ತು ವಿವಿಧ ಸಮುದಾಯಗಳಿಗೆ ಸೇರಿದ ಸಂತರು, ಶರಣರು ಹಾಗೂ ಮಹಾನ್ ನಾಯಕರುಗಳ ಭಾವಚಿತ್ರ ನೋಡುಗರ ಗಮನ ಸೆಳೆಯಿತು.
ದಾರಿಯುದ್ದಕ್ಕೂ ಜೈ ಶ್ರೀರಾಮ, ಜೈ ಹನುಮಾನ ಎನ್ನುವ ಘೋಷಣೆಗಳು ಮೊಳಗಿದವು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿದ ಮೆರವಣಿಗೆ ರಾಮನ ಸಂದೇಶಗಳನ್ನು ಸಾರಿತು.
ಕೊಂಚೂರು ಸವಿತಾ ಮಹರ್ಷಿ ಪೀಠದ ಸ್ವಾಮಿ ಶ್ರೀಧರಾನಂದ ಸರಸ್ವತಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಹರಿ ಗಲಾಂಡೆ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಭಜರಂಗ ದಳ ಅಧ್ಯಕ್ಷ ಜಗತ್‌ಸಿಂಗ್ ರಾಥೋಡ, ಪತಾಂಜಲಿ ಯೋಗ ಗುರು ವೀರಣ್ಣ ಯಾರಿ,
ಮುಖಂಡರಾದ ಬಸವರಾಜ ಪಂಚಾಳ, ಬಾಜಿರಾವ ಪವಾರ, ರವಿ ಕಾರಬಾರಿ, ವಿಠuಲ ನಾಯಕ, ಅಶೋಕ ಪವಾರ, ಶಂಕರಸಿಂಗ್ ರಾಥೋಡ, ಹರೀಶ ಮಾನೆ, ಸಚಿನ್ ಚವ್ಹಾಣ, ಮೋನಪ್ಪ ಸೂಲಹಳ್ಳಿ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.