ಸಕಲೇಶಪುರ: ಕಾಡ್ಗಿಚ್ಚಿನಿಂದ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟ ಅರಣ್ಯ ರಕ್ಷಕ ಸುಂದರೇಶ್ (42) ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ಸಕಲೇಶಪುರ ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಯಿತು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗವೇ ಮೃತ ಸುಂದರೇಶ್ ರವರ ಪಾರ್ಥಿವ ಶರೀರ ಇಟ್ಟು ಇಲಾಖೆ ವತಿಯಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಜಿಲ್ಲೆಯ ಬಹುತೇಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಈ ಸಂಧರ್ಭದಲ್ಲಿ ಹಾಜರಿದ್ದರು.
ಮೃತ ಸುಂದರೇಶ್ ಅವರ ಮರಣೋತ್ತರ ಪರೀಕ್ಷೆ ತಡವಾಗಿದ್ದರಿಂದ ಮಧ್ಯಾಹ್ನ 1ಗಂಟೆಗೆ ಬರಬೇಕಿದ್ದ ಮೃತ ಶರೀರ ಸಂಜೆ ಸುಮಾರು 6.30 ರ ವೇಳೆಗೆ ಬಂದಿತು. ಅರಣ್ಯ ರಕ್ಷಕ ಸುಂದರೇಶ್ ತೀರ್ಥಹಳ್ಳಿ ತಾಲೂಕಿನ ಸಂಪಿಗೆಸರ ಗ್ರಾಮದವರಾಗಿದ್ದು ನಂತರ ಮೃತ ಶರೀರವನ್ನು ಸ್ವಗ್ರಾಮಕ್ಕೆ ಕಳುಹಿಸಲಾಯಿತು.
ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಿಂದ ನೇರವಾಗಿ ತೀರ್ಥಹಳ್ಳಿಗೆ ಕೊಂಡೊಯ್ಯುವುದಾಗಿ ಮಾಹಿತಿ ತಿಳಿದು ಬಂದಿತ್ತು ಆದರೆ ತಾಲೂಕಿನ ಸಾರ್ವಜನಿಕರು ಹಾಗೂ ಸಂಘಟನೆಗಳ ಒತ್ತಾಯದ ಮೇರೆಗೆ ಪಾರ್ಥಿವ ಶರೀರವನ್ನು ಸಕಲೇಶಪುರಕ್ಕೆ ತಂದು ನಂತರ ತೀರ್ಥಹಳ್ಳಿಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವ ದೊಂದಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಯಿತು. ನಂತರ ತೀರ್ಥಹಳ್ಳಿಗೆ ಪಾರ್ಥಿವ ಶರೀರವನ್ನು ಕಳುಹಿಸಲಾಯಿತು.
ಶಾಸಕ ಎಚ್.ಕೆ ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ನಾಗರಿಕರು ಮೃತ ವನ ರಕ್ಷಕ ಸುಂದರೇಶ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.